

ಕೋಲಾರ:ನನ್ನನ್ನು ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿ ಹೊರ ಹಾಕಿದರೂ ಹೆದರುವುದಿಲ್ಲ ನಾನು ಮತ್ತೆ ಮತ್ತೆ ಕೇಳುತ್ತೇನೆ ಪ್ರಧಾನಿ ಮತ್ತು ಆದಾನಿ ಬೇನಾಮಿ ಕಂಪನಿಗಳಲ್ಲಿ 20ಸಾವಿರ ಕೋಟಿ ಎಲ್ಲಿಯದು’ ಎಂದು, ಉತ್ತರ ಸಿಗುವವರೆವಿಗೂ ಹೋರಾಟ ಮುಂದುವರೆಸುತ್ತೇನೆ ಅನರ್ಹಗೊಳಿಸಿ, ಜೈಲಿನಲ್ಲಿಡಿ ಹೆದರುವುದಿಲ್ಲ’ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆಕ್ರೋಷ ವ್ಯಕ್ತಪಡಿಸಿದರು.
ನಗರದಲ್ಲಿ ನಡೆದ ಕಾಂಗ್ರೆಸ್‍ನ ಜೈಭಾರತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 21 ನೇ ಶತಮಾನದಲ್ಲಿ ಕೇವಲ ಒಬ್ಬ ಮನುಷ್ಯನ ಕೈಯಲ್ಲಿ ಭಾರತದ ಮೂಲ ಸೌಕರ್ಯ ಇರುವಂತಾಗಿದೆ, ಸಾವಿರಾರು ಕೋಟಿ ರೂ ಮಂತ್ರಜಾಲದ ರೀತಿಯಲ್ಲಿ ಅವರ ಖಾತೆಗೆ ಬರುತ್ತಿದೆ, ರಕ್ಷಣಾ ಇಲಾಖೆಯಲ್ಲಿ ಚೈನಾದ ನಿರ್ದೇಶಕ ಇದ್ದಾರೆ, ಯಾವುದೇ ತನಿಖೆ ಆಗುತ್ತಿಲ್ಲ, ಆದಾನಿ ರಕ್ಷಣಾ ಇಲಾಖೆಯಲ್ಲಿ ಚೈನಾದ ನಿರ್ದೇಶಕರ ನೇಮಕಮಾಡಿದ್ದನ್ನು ಯಾರೂ ಪ್ರಶ್ನಿಸುತ್ತಿಲ್ಲ, ಅದಕ್ಕೆ ಸರ್ಕಾರ ಉತ್ತರವೂ ನೀಡುತ್ತಿಲ್ಲ ಎಂದರು.
ನಾನೀ ಪ್ರಶ್ನೆ ಕೇಳುತ್ತಿದ್ದಂತೆ ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಹಿಂದುಳಿದ ವರ್ಗದವರ ಕುರಿತು ಮಾತನಾಡುತ್ತಾರೆ, ನಾನು ಹಿಂದುಳಿದವರಿಗೆ ಅಪಮಾನಮಾಡಿದೆನೆಂದು ಹೇಳುತ್ತಾರೆ, ಆದರೆ ದಲಿತ,ಹಿಂದುಳಿದವರ ಕುರಿತು ಪ್ರಧಾನಿಗೆ ಕಾಳಜಿ ಇದ್ದರೆ ಕೂಡಲೇ ಯುಪಿಎ ಮಾಡಿದ್ದ ಜಾತಿವಾರು ಗಣತಿ ವರದಿ ಬಹಿರಂಗಗೊಳಿಸಿ ದೇಶದಲ್ಲಿ ದಲಿತರು, ಹಿಂದುಳಿದವರು, ಆದಿವಾಸಿಗಳು ಎಷ್ಟಿದ್ದಾರೆನ್ನುವುದು ಬಹಿರಂಗಗೊಳಿಸಿ ಎಲ್ಲರನ್ನು ದೇಶದ ಪ್ರಗತಿಯಲ್ಲಿ ಭಾಗಿಯಾಗಿಸಿ ಎಂದು ಒತ್ತಾಯಿಸಿದರು.
ದಲಿತ, ಹಿಂದುಳಿದವರ ಇಲಾಖಾ ಕಾರ್ಯದರ್ಶಿಗಳು, ಅಧಿಕಾರಿ ವರ್ಗ ಕೇವಲ ಶೇ.7 ಭಾಗದಷ್ಟಿದೆ, ದೇಶದಲ್ಲಿ ದಲಿತ, ಹಿಂದುಳಿದ, ಆದಿವಾಸಿ ಜನಸಂಖ್ಯೆ ಎಷ್ಟಾಗಿದೆ ಎಂದು ತಿಳಿಸಿ, ನೀವು ಜಾತಿ ಜನಸಂಖ್ಯೆ ಗಣತಿ ಬಹಿರಂಗಗೊಳಿಸದಿದ್ದರೆ ಹಿಂದುಳಿದವರಿಗೆ ಮಾಡಿದ ಅಪಮಾನ ಎಂದು ಪರಿಗಣಿಸಬೇಕಾಗುತ್ತದೆ, ಎಸ್‍ಸಿ ಎಸ್‍ಟಿ ಕೋಟಾಗೆ ಜನಸಂಖ್ಯೆ ಅನುಗುಣವಾಗಿ ಅವಕಾಶ ನೀಡಿ, ಮೀಸಲಾತಿಯಲ್ಲಿ ಶೇ.50 ಮಿತಿಯನ್ನು ತೆಗೆದುಬಿಡಿ ಎಂದು ಒತ್ತಾಯಿಸಿದರು.
ಅಧಿಕಾರಕ್ಕೆ ಬಂದದಿನವೇ ಪ್ರಣಾಳಿಕೆ ಜಾರಿ
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನವೇ ನೀಡಿರುವ ಭರವಸೆ ಈಡೇರಿಸುತ್ತೇವೆ, ಜನತೆಗೆ ನಾಲ್ಕು ಭರವಸೆ ನೀಡಿದ್ದೇವೆ, ಗೃಹಜ್ಯೋತಿಯಲ್ಲಿ 200 ಯೂನಿಟ್ ವಿದ್ಯುತ್, ಗೃಹಲಕ್ಷ್ಮಿ ಪ್ರತಿ ಮನೆ ಮಹಿಳೆಗೆ 2 ಸಾವಿರ ರೂ, ಅನ್ನಭಾಗ್ಯ 10 ಕೆಜಿ ಅಕ್ಕಿ ಹಾಗೂ ಯುವಕರಿಗೆ 3 ಸಾವಿರ ರೂ ಪ್ರತಿ ತಿಂಗಳು ಪದವೀಧರರಿಗೆ ಹಾಗೂ 1500 ಡಿಪ್ಲೊಮಾ ಪದವೀಧರರಿಗೆ ನೀಡುವುದು ಮೊದಲ ಅಧಿವೇಶನದಲ್ಲಿಯೇ ಈಡೇರಿಸಬೇಕು ಎಂದು ಕರ್ನಾಟಕದ ಕಾಂಗ್ರೆಸ್ ಮುಖಂಡರಿಗೆ ಸೂಚಿಸಿದ್ದೇನೆ ಎಂದರು.
ಕಾಂಗ್ರೆಸ್ ಪಕ್ಷವು ಕರ್ನಾಟಕ ಹಾಗೂ ದೇಶದ ಜನತೆಗೆ ನೇರವಾದ ಸಂದೇಶ ಕೊಡಬೇಕಾಗಿದೆ, ಪ್ರಧಾನ ಮಂತ್ರಿಗೂ ಸಂದೇಶ ನೀಡಬೇಕಾಗಿದೆ, ನೀವು ಸಾವಿರಾರು ಕೋಟಿ ರೂಪಾಯಿಗಳನ್ನು ಆದಾನಿ ಕಂಪನಿಗಳಿಗೆ ನೀಡುತ್ತೀದ್ದೀರಿ, ನಾವು ಯುವಕರು, ಬಡವರು, ಮಹಿಳೆಯರಿಗೆ ಕಾರ್ಯಕ್ರಮ ಕೊಡುತ್ತೇವೆ, ನೀವು ಹೃದಯ ತುಂಬಿ ಆದಾನಿ ಸೇವೆ ಮಾಡುತ್ತೀರಿ ನಾವು ಕಾಂಗ್ರೆಸ್ಸಿಗರು ಮನಪೂರ್ವಕವಾಗಿ ಬಡವರು, ಮಹಿಳೆಯರಿಗೆ ಸೇವೆ ಮಾಡುತ್ತೇವೆ ಎಂದರು.
ನಾನು ಆದಾನಿಗೆ ಸಂಬಂಧಪಟ್ಟಂತೆ ಸಂಸತ್ತಿನಲ್ಲಿ ಪ್ರಶ್ನೆ ಕೇಳಿದೆ, ಪ್ರಶ್ನೆ ಕೇಳುವ ಮೊದಲೇ ಮೈಕ್ ಆಪ್ ಮಾಡಿದರು. ಆದಾನಿಗೂ ನಿಮಗೂ ಏನು ಸಂಬಂಧ ಎಂದು ಕೇಳಿದ್ದೆ, ಒಂದು ಫೋಟೋ ತೋರಿಸಿ ವಿಮಾನದಲ್ಲಿ ಪ್ರಧಾನಿ ಆದಾನಿ ಕುಳಿತಿದ್ದರು, ವಿಮಾನ ನಿಲ್ದಾಣಗಳನ್ನು ಆದಾನಿಗೆ ಮಾರಾಟ ಮಾಡಲು ಕಾನೂನು ಬದಲಾವಣೆ ಮಾಡಿದರು ಏಕೆ ಮಾಡಿದರು. ಏರ್ಪೊರ್ಟ್ ನಡೆಸಲು ಅನುಭವ ಅಗತ್ಯ, ಆದರೆ ಅದಾನಿಗೆ ಮುಂಬೈ ನಿಲ್ದಾಣ ಅವರ ಕೈವಶವಾಯಿತು. ನಿರ್ಮಾಣ ಮಾಡಿದವರನ್ನು ಐಟಿ ಇಡಿ ಹೆದರಿಸಿ ಕಸಿದುಕೊಳ್ಳಲಾಯಿತು.
ಎಸ್‍ಬಿಐ ಬ್ಯಾಂಕನ್ನು ಸಾವಿರಾರು ಕೋಟಿ ಸಾಲವನ್ನು ಆದಾನಿಗೆ ನೀಡಿತು, ಶ್ರೀಲಂಕಾದ ಬಂದರಿನ ಚೇರಮನ್ ಹೇಳುತ್ತಾರೆ, ಆದಾನಿಗೆ ಕೊಡಲು ಒತ್ತಡ ಹಾಕಿದ್ದಾರೆಂದು. ಪ್ರಧಾನಿ ಬಾಂಗ್ಲಾ ದೇಶಕ್ಕೆಹೋಗುತ್ತಾರೆ ಅಲ್ಲಿನ ಗುತ್ತಿಗೆ ಆದಾನಿಗೆ ಸಿಗುತ್ತದೆ, ಇಸ್ರೇಲ್‍ಗೆ ಹೋದರೆ ಅಲ್ಲಿನ ರಕ್ಷಣಾ ಇಲಾಖೆ ಗುತ್ತಿಗೆ ಆದಾನಿಗೆ ಸಿಗುತ್ತದೆ. ಈ ಪ್ರಶ್ನೆಯನ್ನೇ ನಾನು ಕೇಳಿದ್ದು ಎಂದರು.
ಸ್ಪೀಕರ್ ಅಧಿಕಾರ ಚಲಾಯಿಸಲು ಮುಂದಾಗಲಿಲ್ಲ, ಇದಾದ ನಂತರ ಆದಾನಿ ವಿಚಾರ ಮಾತನಾಡಬಾರದು ಎಂದು ನಿರೀಕ್ಷಿಸಿದರು, ನನ್ನ ಮಾತಿಗೆ ಭಯ ಬೀಳುತ್ತಾರೆ ಎಂದು ಟೀಕಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ
ಕರ್ನಾಟಕ ಕಾಂಗ್ರೆಸ್‍ಸರಕಾರ ರೈತರ, ಕಾರ್ಮಿಕರ, ಸಣ್ಣ ಉದ್ದಿಮೆದಾರರ, ಮಹಿಳೆಯರ ಸರಕಾರವಾಗಲಿದೆ, ಕಾಂಗ್ರೆಸ್ ಸಂಘಟಿತವಾಗಿ ಹೋರಾಟ ಮಾಡುತ್ತಿದೆ, ಪೂರ್ಣ ಬಹುಮತದ ಸರಕಾರ ಆಯ್ಕೆ ಮಾಡಿ ಎಂದು ಮನವಿ ಮಾಡಿದರು.
ಕರ್ನಾಟಕದಲ್ಲಿ ಬಿಜೆಪಿ ಏನು ಮಾಡಿದೆ, 40 ಪರ್ಸೆಂಟ್ ಕಮೀಷನ್ ಸರಕಾರ, ಕರ್ನಾಟಕದಲ್ಲಿ ಬಡವರ,ಯುವಕರ ಮಹಿಳೆಯರ ಹಣವನ್ನು ಕಳ್ಳತನ ಮಾಡಿದೆ, ಏನೇ ಮಾಡಿದರೂ 40 ಪರ್ಸೆಂಟ್ ಲಂಚ ಹೊಡೆದಿದ್ದಾರೆ, ಇದನ್ನು ನಾನು ಹೇಳುತ್ತಿಲ್ಲ, ಗುತ್ತಿಗೆದಾರರ ಸಂಘ ಪ್ರಧಾನಿಗೆ ಪತ್ರ ಬರೆದು ಹೇಳಿರುವುದು, ಪ್ರಧಾನಿ ಇದುವರೆವಿಗೂ ಈ ಪತ್ರಕ್ಕೆ ಉತ್ತರ ನೀಡಿಲ್ಲ, ಉತ್ತರ ನೀಡುತ್ತಿಲ್ಲ ಎಂದರೆ ಪ್ರಧಾನಿಗೆ 40 ಪರ್ಸೆಂಟ್ ಭ್ರಷ್ಟಾಚಾರದಲ್ಲಿ ಭಾಗಿ ಎನ್ನುವುದಾಗಿದೆ, ಹಗರಣದ ಸರಮಾಲೆ, ಶಿಕ್ಷಕರು, ಪೊಲೀಸ್ ನೇಮಕಾತಿಯಲ್ಲಿ, ಅಸಿಸ್ಟೆಂಟ್ ಪ್ರೋಫೆಸರ್, ಇಂಜಿನಿಯರ್ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದರು.
ಬಿಜೆಪಿ ಸರ್ವ ಪ್ರಯತ್ನ ಮಾಡಿ, 40 ಪರ್ಸೆಂಟ್ ಹಣದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸರಕಾರ ಬೀಳಿಸಲು ಪ್ರಯತ್ನಿಸುತ್ತದೆ, ಆದ್ದರಿಂದ ಕಾಂಗ್ರೆಸ್‍ಗೆ 150 ಸೀಟುಗಳನ್ನು ಗೆಲ್ಲಿಸಿ ಬಿಜೆಪಿಗೆ ಭ್ರಷ್ಟಾಚಾರ ಮಾಡಲು ಅವಕಾಶ ನೀಡಬೇಡಿ ಎಂದು ಮನವಿ ಮಾಡಿದರು.
ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯ ಉಸ್ತುವಾರಿ ಸುರ್ಜೇವಾಲಾ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖಂಡರಾದ ರಮೇಶ್‍ಕುಮಾರ್, ಕೃಷ್ಣಬೈರೇಗೌಡ, ಸಲೀಂ ಅಹಮದ್, ಶಾಸಕರಾದ ಕೆ.ವೈ.ನಂಜೇಗೌಡ, ಎಸ್.ಎನ್.ನಾರಾಯಣಸ್ವಾಮಿ, ರೂಪಕಲಾ ಶಶಿಧರ್, ಡಿಸಿಸಿ ಅಧ್ಯಕ್ಷ ಲಕ್ಷ್ಮೀನಾರಾಯಣ ಮತ್ತಿತರರು ಉಪಸ್ಥಿತರಿದ್ದರು.