ಶ್ರೀನಿವಾಸಪುರ: ಬರಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ರಾಜ್ಯ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ನಿಗಮದ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಲ್.ಗೋಪಾಲಕೃಷ್ಣ ಹೇಳಿದರು.
ಪಟ್ಟಣದ ವೆಂಕಟೇಶಗೌಡ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ನಾನು ವಿಧಾನಸಭೆಗೆ, ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಆಭ್ಯರ್ಥಿಯಾಗಿ ಸ್ಪರ್ಧಿಸಲು ನ.15 ರಂದು ಟಿಕೆಟ್‍ಗಾಗಿ ಅರ್ಜಿ ಸಲ್ಲಿಸುತ್ತಿದ್ದೇನೆ’ ಎಂದು ಹೇಳಿದರು.
40 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶಕ್ತಿ ಮೀರಿ ಶ್ರಮಿಸಿದ್ದೇನೆ. ಶಾಸಕ ಕೆ.ಆರ್.ರಮೇಶ್ ಕುಮಾರ್ ಜನತಾ ಪರಿವಾರ ಬಿಟ್ಟಾಗ, ಅವರಿಗೆ ನನ್ನ ವರ್ಚಸ್ಸಿನಿಂದ ಕಾಂಗ್ರೆಸ್ ಟಿಕೆಟ್ ದೊರೆಯುವಂತೆ ಮಾಡಿದ್ದೇನೆ. ಆದರೆ ಅವರು ನನ್ನನ್ನು ರಾಜಕೀಯವಾಗಿ ಕಡೆಗಣಿಸಿದರು. ಆದರೂ ಚುನಾವಣೆಯಲ್ಲಿ ಅವರ ಗೆಲುವಿಗೆ ಶ್ರಮಿಸಿದ್ದೇನೆ ಎಂದರು.
ಕಳೆದ ವಿಧಾನಸಭಾ ಚುನಾವಣೆ ಪ್ರಚಾರ ಸಭೆಗಳಲ್ಲಿ ಕೆ.ಆರ್.ರಮೇಶ್ ಕುಮಾರ್ ಆ ಚುನಾವಣೆ ಬಳಿಕ ರಾಜಕೀಯ ನಿವೃತ್ತಿ ಹೊಂದುವುದಾಗಿ ಹೇಳಿದ್ದರು. ಹಾಗಾಗಿ ನಾನು ಟಿಕೆಟ್ ಆಕಾಂಕ್ಷಿಯಾಗಿದ್ದು ಅರ್ಜಿ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಶೇಷಾಪುರ ಗೋಪಾಲ್ ಮಾತನಾಡಿ, ಕ್ರಿಯಾಶೀಲ ಕಾಂಗ್ರೆಸ್ ಮುಖಂಡರಾದ ಎಲ್.ಗೋಪಾಲಕೃಷ್ಣ ಎಂದೋ ಶಾಸಕರಾಗಬೇಕಾಗಿತ್ತು. ಆದರೆ ಕೆ.ಆರ್.ರಮೇಶ್ ಕುಮಾರ್ ಅದಕ್ಕೆ ಅವಕಾಶ ನೀಡಲಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಕೆ.ಎಚ್.ಮುನಿಯಪ್ಪ ಅವರ ಸೋಲಿಗೆ ಕಾರಣ ಯಾರೆಂಬುದು ಜನರಿಗೆ ಗೊತ್ತಿದೆ ಎಂದು ಹೇಳಿದರು..
ಕಾಂಗ್ರೆಸ್‍ನಿಂದ ಸ್ಪರ್ಧಿಸಲು ಯಾರಿಗೇ ಟಿಕೆಟ್ ನೀಡಿದರೂ ಅವರ ಗೆಲುವಿಗೆ ಶ್ರಮಿಸುವ ವಿಷಯ ಇಲ್ಲಿ ಮುಖ್ಯವಲ್ಲ. ಎಲ್.ಗೋಪಾಲಕೃಷ್ಣ ಅವರ ಹೆಸರನ್ನು ದೆಹಲಿಗೆ ಕಳುಹಿಸುತ್ತೇವೆ. ಹೈಕಮಾಂಡ್ ಅವರಿಗೇ ಟಿಕೆಟ್ ನೀಡುವಂತೆ ಒತ್ತಡ ಹೇರಲಾಗುವುದು ಎಂದು ಹೇಳಿದರು.
ಕೋಚಿಮುಲ್ ಮಾಜಿ ಅಧ್ಯಕ್ಷ ಎನ್.ಜಿ.ಬ್ಯಾಟಪ್ಪ ಮಾತನಾಡಿ, ಎಲ್.ಗೋಪಾಲಕೃಷ್ಣ ಸ್ವಪಕ್ಷೀಯಯಿಂದಲೇ ಕಿರುಕುಳ ಅನುಭವಿಸಿದ್ದಾರೆ. ಅದು ಖಂಡನಾರ್ಹ. ಆದರೆ ಇಬ್ಬರ ಜಗಳ ಮೂರನೆಯವನಿಗೆ ಲಾಭ ಎನ್ನುವಂತೆ ಆಗಬಾರದು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಗೋಪಾಲರೆಡ್ಡಿ, ಆದಿನಾರಾಯಣಶೆಟ್ಟಿ, ಶ್ರೀನಿವಾಸ್, ಬಾಬು, ಪ್ರಸಾದ್, ವೆಂಕಟೇಶ್, ವೀರಭದ್ರೇಗೌಡ, ವೀರಭದ್ರಸ್ವಾಮಿ ಎಲ್.ಗೋಪಾಲಕೃಷ್ಣ ಅವರನ್ನು ಬೆಂಬಲಿಸಿ ಮಾತನಾಡಿದರು.
ಮುಖಂಡರಾದ ಕೃಷ್ಣೇಗೌಡ, ವೆಂಕಟಾಚಲಪತಿ, ರವಿಕುಮಾರ್, ಬಿ.ಶ್ರೀನಿವಾಸಗೌಡ, ಶಶಿಕುಮಾರ್, ನಾರಾಯಣಗೌಡ, ಬಚ್ಚೇಗೌಡ, ಪ್ರಭಾಕರಗೌಡ, ಸುರೇಶ್ ಬಾಬು, ಪ್ರಸಾದ್, ರಮೇಶ್, ಕೆಂಪೇಗೌಡ, ಹರೀಶ್, ಕೆ.ಎಚ್.ಸಂಪತ್ ಕುಮಾರ್, ಸರಸ್ವತಮ್ಮ, ದೇವರಾಜ್, ಚಂದ್ರೇಗೌಡ ಇದ್ದರು.