ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ:- ಭಾರತ ಮಾನವೀಯ ಮೌಲ್ಯಗಳ ತಾಯ್ನೆಲವಾಗಿದ್ದು, ದೇಶಕ್ಕಾಗಿ ಸರ್ವರೂ ಒಗ್ಗೂಡಿ ಶ್ರಮಿಸುವುದೇ ಶ್ರೇಷ್ಟ ಮೌಲ್ಯವಾಗಿದೆ, ಇತರರ ಕಷ್ಟಕ್ಕೆ ಸ್ಪಂದಿಸದಿರುವವರು ಸತ್ತಂತೆ, ಅಹಿಂಸೆ ಮಾನವರ ಶ್ರೇಷ್ಠ ಗುಣವಾಗಿದೆ, ಹಸಿದವರ ಮುಂದೆ ಊಟ ಮಾಡದಿರುವುದೇ ಮಾನವೀಯತೆ ಎಂದು ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಪೆÇ್ರ.ಡಾ.ಕೆ.ಸುಬ್ರಹ್ಮಣ್ಯಂ ಹೇಳಿದರು.
ದೇವರಾಜ ಅರಸು ನರ್ಸಿಂಗ್ ಕಾಲೇಜಿನಲ್ಲಿ ನಿಮ್ಹಾನ್ಸ್ ನರ್ಸಿಂಗ್ ಕಾಲೇಜು ಸಹಕಾರದೊಂದಿಗೆ ನಾಲ್ಕು ದಿನಗಳಿಂದಲೂ ಆಯೋಜಿಸಲಾಗಿದ್ದ ಜೀವನ ಕೌಶಲ್ಯ ಮತ್ತು ಮಾನವೀಯ ಮೌಲ್ಯಗಳು ಕುರಿತ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಗುರುವಾರ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕರುಣೆ ತುಂಬಿದ ಕಾಳಜಿ ಸೇವಾ ಉತ್ಸಾಹವನ್ನು ಹೆಚ್ಚಿಸುತ್ತದೆ ಜೊತೆಗೆ ಜೀವನ ಕೌಶಲ್ಯಗಳನ್ನು ಸಹಜವಾಗಿ ಚಿಮ್ಮುವಂತೆ ಮಾಡುತ್ತದೆಯೆಂದು ಅಭಿಪ್ರಾಯಪಟ್ಟ ಅವರು, ಆರೈಕೆಯಲ್ಲಿ ಹೆತ್ತ ತಾಯಿಯ ನಂತರ ಸ್ಥಾನ ನರ್ಸ್‍ಗಳದ್ದಾಗಿದೆ ಎಂದರು.
ಶಿಕ್ಷಣ ಆತ್ಮಾಭಿಮಾನವನ್ನು ಹೆಚ್ಚಿಸುವಂತಿರಬೇಕು, ಶಿಕ್ಷಣ ಸಂಸ್ಥೆಗಳ ಭ್ರಷ್ಟಾಚಾರ ದೇಶವನ್ನು ನಾಶಪಡಿಸುತ್ತದೆ, ಆದರೆ ಇತ್ತೀಚಿನ ದಿನಗಳಲ್ಲಿ ಬಹುತೇಕ ಅಪರಾಧಿಗಳು ಶಿಕ್ಷಣ ಪಡೆದವರೇ ಆಗಿರುವುದು ವಿಪರ್ಯಾಸ ಎಂದು ವಿಷಾದಿಸಿದರು.
ಶಿಕ್ಷಣವು ಬಳಕೆಯ ಆಧಾರದ ಮೇಲೆ ಉಪಯುಕ್ತವು, ಅನುಪಯುಕ್ತವು, ಅನಿಷ್ಠವೂ ಹಾಗೂ ಅಪಾಯಕಾರಿಯೂ ಆಗಿಬಿಡುತ್ತದೆಯೆಂಬುದನ್ನು ಪುರಾಣ ಇತಿಹಾಸದ ದೃಷ್ಟಾಂತಗಳ ಮೂಲಕ ಅವರು ವಿವರಿಸಿ, ಶಿಕ್ಷಣ ಮಾನವ ಕುಲಕ್ಕೆ ಮತ್ತು ಸಮುದಾಯಕ್ಕೆ ಉಪಯುಕ್ತವಾಗಿರಬೇಕೆಂದರು.
ನಿಮ್ಹಾನ್ಸ್ ನರ್ಸಿಂಗ್ ಸಂಸ್ಥೆ ಪ್ರಾಂಶುಪಾಲರಾದ ಡಾ.ಬಿ.ವಿ.ಕಾತ್ಯಾಯಿನಿ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನದಂತೆ ಆರೋಗ್ಯ ಸೇವಕರಿಗೆ ಅಗತ್ಯವಾಗಿರುವ ಹತ್ತು ಜೀವನ ಕೌಶಲ್ಯಗಳನ್ನು ನರ್ಸಿಂಗ್ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಸಲು ನಾಲ್ಕು ದಿನಗಳ ಕಾರ್ಯಾಗಾರವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು ಎಂದು ವಿವರಿಸಿದರು.
ದೇವರಾಜ ಅರಸು ನರ್ಸಿಂಗ್ ಕಾಲೇಜು ಪ್ರಾಂಶುಪಾಲರಾದ ಡಾ.ಜಿ.ವಿಜಯಲಕ್ಷ್ಮಿ ಮಾತನಾಡಿ, ನಾಲ್ಕು ದಿನಗಳ ಕಾರ್ಯಾಗಾರವನ್ನು ಗುಣಾತ್ಮಕವಾಗಿ ಯಶಸ್ವಿಗೊಳಿಸಿದವರಿಗೆ ಧನ್ಯವಾದ ಅರ್ಪಿಸಿ, ಈ ಕಾರ್ಯಾಗಾರವು ನರ್ಸಿಂಗ್ ವಿದ್ಯಾರ್ಥಿಗಳು ವೃತ್ತಿ ಜೀವನದಲ್ಲಿ ಉತ್ತಮ ನರ್ಸ್ ಆಗಲು ಉಪಯುಕ್ತವಾಗಲಿ ಎಂದರು.
ಅರಸು ವಿದ್ಯಾಸಂಸ್ಥೆಯ ಸಲಹೆಗಾರ ಹನುಮಂತರಾವ್ ಅತಿಥಿಯಾಗಿದ್ದರು. ನಾಲ್ಕು ದಿನಗಳ ಶಿಬಿರದಲ್ಲಿ ಪಾಲ್ಗೊಂಡವರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ವಿದ್ಯಾರ್ಥಿನಿ ಸ್ವಾತಿ ಕಾರ್ಯಾಗಾರ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.
ಕೀರ್ತನ ತಂಡದಿಂದ ಸ್ವಾಗತ ಗೀತೆ, ಸಹಾಯಕ ಪೆÇ್ರ.ಎಂ.ರಮ್ಯ ನಿರೂಪಿಸಿ, ಸಹಾಯಕ ಪೆÇ್ರ.ಡಾ.ಆರ್.ರಾಜೇಶ್ ಸ್ವಾಗತಿಸಿ, ಕೆ.ಎಸ್.ಶೇಷಾದ್ರಿ ವಂದಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಗಳು ಹತ್ತು ಜೀವನ ಕೌಶಲ್ಯಗಳ ಸಂದೇಶ ಸಾರುವ ಕಿರು ನಾಟಕಗಳ ಅಭಿನಯಿಸಿದರು.