JANANUDI.COM NETWORK
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಾನವ ಹಕ್ಕುಗಳ ಕೋಶ ಇದರ ಆಶ್ರಯದಲ್ಲಿ “ಸಂವಿಧಾನ ದಿನ”ವನ್ನು ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಮಾತನಾಡಿ ನಮ್ಮ ದೇಶದ ಸಂವಿಧಾನ ವಿಶಿಷ್ಟ ಮತ್ತು ಶ್ರೇಷ್ಟ ಸಂವಿಧಾನವಾಗಿದೆ. ಸಂವಿಧಾನ ಕೇವಲ ನಮಗೆ ಅಧಿನಿಯಮಗಳನ್ನು ಹೇಳುವುದಕ್ಕೆ ಮಾತ್ರ ಸೀಮಿತವಾಗದೇ ನಮ್ಮ ಬದುಕು ಆಗಿದೆ. ಇದರಲ್ಲಿ ಎಷ್ಟೋ ವಿಷಯಗಳನ್ನು ತಿಳಿದಷ್ಟು ಎಷ್ಟೋ ಅಂತಃಸತ್ವವುಳ್ಳ ವಿಚಾರಗಳು ಅದರಲ್ಲಿ ಅಡಗಿದೆ. ನಮ್ಮ ಸಂವಿಧಾನವನ್ನು ಕೆಲವರು ಬೇಲೂರಿನ ಶಿಲ್ಪಕಲೆಗೆಳಿಗೆ ಮತ್ತೆ ಕೆಲವರು ಕಾವ್ಯಗಳಿಗೆ ಹೋಲಿಸಿದ್ದಾರೆ. ವಿವಿಧತೆಯಲ್ಲಿ ಏಕತೆ ಇರುವಂತಹ ಭಾರತದ ಸಂವಿಧಾನ ಪ್ರಪಂಚದ ಅತಿದೊಡ್ಡ ಸಂವಿಧಾನವಾಗಿದೆ. ಗಾತ್ರದಷ್ಟೇ ವಿಷಯಗಳನ್ನು ಒಳಗೊಂಡಿದೆ. ನಮ್ಮ ಇಡಿ ದೇಶವನ್ನು ಇದು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರಲ್ಲದೇ ಸಂವಿಧಾನ ರಚನೆಯಲ್ಲಿ ಪಾಲ್ಗೊಂಡವರ ಕುರಿತು ಅವರು ಸ್ತೂಲವಾಗಿ ಪರಿಚಯಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಾನವ ಹಕ್ಕುಗಳ ಕೋಶದ ಸಂಯೋಜಕರಾದ ಗೋಪಾಲ್ ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿಕ್ಷೇಮಪಾಲನಾ ಅಧಿಕಾರಿ ಡಾ.ಶುಭಕರಾಚಾರಿ ವಂದಿಸಿದರು. ವಿದ್ಯಾರ್ಥಿನಿ ವರೇಣ್ಯ ಕಾರ್ಯಕ್ರಮ ನಿರ್ವಹಿಸಿದರು.