ಇಂಫಾಲ: ಮಣಿಪುರ ರಾಜ್ಯದ ಕಾ೦ಗ್ಪೋಷಿ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆ ಗೊಳಿಸಿ ಅನಾಗರಿಕ ರೀತಿಯಲ್ಲಿ ಮರವಣಿಗೆ ಮಾಡಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿ ಸಾವಿರಾರು ಆದಿವಾಸಿ ಮಹಿಳೆಯರು ಮತ್ತು ಪುರುಷರು ಭಾರಿ ಮಳೆಯ ನಡುವೆಯೂ ಪ್ರತಿಭಟನೆ ನಡೆಸಿದ ಸುದ್ದಿ ಪ್ರಸಾರ ಆಗಿದೆ.
ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ ಆಯೋಜಿಸಿದ್ದ ಬೃಹತ್ ರೇಲಿಯಲ್ಲಿ ಸಾವಿರಾರು ಪುರುಷರು ಮತ್ತು ಮಹಿಳೆಯರು ಹೆಚ್ಚಾಗಿ ಯುವಕರು ಭಾಗವಹಿಸಿ ಬ್ಯಾನರ್ ಮತ್ತು ಫಲಕಗಳನ್ನು ಹಿಡಿದು, ಕಪ್ಪು ಉಡುಪು ಧರಿಸಿ ಪ್ರತಿಭಟಿಸಿದರು. ಪ್ರತ್ಯೇಕ ಆಡಳಿತಕ್ಕಾಗಿ ಘೋಷಣೆಗಳನ್ನು ಕೂಗುತ್ತಾ ರೇಲಿಯು ಲಮ್ಮಾ ಸಾರ್ವಜನಿಕ ಮೈದಾನದಿಂದ ಮೆರವಣಿಗೆ ಪ್ರಾರಂಭವಾಯಿತು.
ಭಾರೀ ಮಳೆಯ ನಡುವೆಯೂ ಪ್ರತಿಭಟನಾಕಾರರು ಶಾಂತಿ ಮೈದಾನದತ್ತ ಸಾಗಿದರು. ಅಲ್ಲದೆ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ರಾಜೀನಾಮೆಗೆ ಒತ್ತಾಯಿಸಿ, ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.
ಭವಿಷ್ಯದಲ್ಲಿ ಇಂತಹ ದುಷ್ಕೃತ್ಯಗಳನ್ನು ತಡೆಯಲು ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಐಚಿಎಲ್ಎಫ್ ಮುಖಂಡರು ಒತ್ತಾಯಿಸಿದರು. ಸ್ಥಳೀಯ ಕಲಾವಿದರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದರು. ನಂತರ ಐಟಿಎಲ್ಎಫ್ ನಾಯಕರ ಚುರಚ೦ದಪುರ ಜಿಲ್ಲೆಯ ಡೆಪ್ಯೂಟಿ ಕಮಿಷನರ್ ಮೂಲಕ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಿದರು.