ರಚನೆ:- ಬಿ.ಆರ್. ರವೀಂದ್ರ, ವಕೀಲರು ಮತ್ತು ಸಾಹಿತಿಗಳು ಕೋಲಾರ.
ಈಗ ಸಮಾಜದಲ್ಲಿ ತಂದೆ ತಾಯಿಗಳಿಗೆ ತಮ್ಮ ವೃದ್ಧಾಪ್ಯದಲ್ಲಿ ಯಾರು ಚೆನ್ನಾಗಿ ನೋಡಿಕೊಳ್ಳಬಹುದು ಎನ್ನುವ ಅನುಮಾನದ ದೃಷ್ಟಿಯಿಂದ ಕಾಣುವುದು ಹೆಚ್ಚಾಗಿ ಮಕ್ಕಳ ಮನದಲ್ಲಿ ಮೂಡುವ ಪ್ರಶ್ನೆ ಪಿತೃಗಳಿಗೆ ಪಿತೃ ಭಕ್ತಿ ತೋರುವುದಾದರೂ ಹೇಗೆ? ಎಂದು, ಸಾಧಾರಣವಾಗಿ ಸಮಾಜದಲ್ಲಿ ಒಟ್ಟು ಕುಟುಂಬಗಳು ಮರೆಯಾದ ನಂತರ ಪೋಷಕರಿಗೆ ಈ ರೀತಿಯ ಭಯ, ಆತಂಕ ಇರುವ ಮಕ್ಕಳಲ್ಲಿ ಸಾಕುವವರು ಯಾರು? ಬಿಟ್ಟು ಹೋಗುವವರು ಯಾರು? ಹೀಗೆ ಹಲವಾರು ಚಿಂತೆ, ಆಲೋಚನೆಗಳಲ್ಲಿ ಬಿದ್ದು ಮಾತಿನ ಮೋಸದ ಜಾಲಕ್ಕೆ ಸಿಲುಕಿ ಮೋಸ ಹೋಗುತ್ತಾರೆ. ಆಗ ಪ್ರಾಮಾಣಿಕ ಮಕ್ಕಳಲ್ಲಿ ಮೂಡುವ ಪ್ರಶ್ನೆ “ಪಿತೃಗಳಿಗೆ ಪಿತೃ ಭಕ್ತಿ ತೋರುವುದಾದರೂ ಹೇಗೆ”? ಎಂದು.
ಈ ವಿಚಾರವನ್ನು ಈಗ ಏಕೆ ಪ್ರಸ್ತಾಪ ಮಾಡುತ್ತಿದ್ದೇನೆ ಎಂದರೆ, ಮೊದಲು ಹೆಚ್ಚಾಗಿ ತಂದೆ ತಾಯಂದಿರು ತಮ್ಮ ಆಸ್ತಿಯನ್ನು ಮಕ್ಕಳಿಗೆ “ವಿಲ್” (ಮರಣ ಶಾಸನ) ಪತ್ರದ ಮೂಲಕ ಅಂದರೆ ತಮ್ಮ ಮರಣಾನಂತರ ತಮ್ಮ ಆಸ್ತಿ ತಮ್ಮ ಮಕ್ಕಳಿಗೆ ಸೇರತಕ್ಕದ್ದು ಎಂದು ಬರೆದುಕೊಡುತ್ತಿದ್ದರು, ಸರಿಯಾಗಿ ಮಕ್ಕಳು ನೋಡಿಕೊಳ್ಳದಿದ್ದರೆ ವಿಲ್ ಪತ್ರವನ್ನು ರದ್ದುಮಾಡುತ್ತಿದ್ದರು, ಆದರೆ ವಿಲ್ ಪತ್ರದ ಮೂಲಕ ಹಕ್ಕು ಪಡೆಯುವಲ್ಲಿ ಸಾಕಷ್ಟು ತೊಡಕುಗಳು ಇರುವುದನ್ನು ಅರಿತ ಮಕ್ಕಳು ಈಗ ತಕ್ಷಣವೇ ಹಕ್ಕು ವರ್ಗಾವಣೆಯಾಗುವ “ದಾನ ಪತ್ರ”, “ಹಕ್ಕು ಬಿಡುಗಡೆ ಪತ್ರ” “ವಿಭಾಗ ಪತ್ರದ” ಮೂಲಕ ಆಸ್ತಿ ಪಡೆದು ನಂತರ ಬರೆದುಕೊಟ್ಟವರನ್ನು ನಿರ್ಲಕ್ಷ್ಯ ಮಾಡುತ್ತಿರುವುದರಿಂದ ಇತ್ತೀಚೆಗೆ ಹಿರಿಯ ವಯಸ್ಕರು “ತಂದೆ ತಾಯಿಯರ ಮತ್ತು ಹಿರಿಯ ನಾಗರಿಕರ ಪಾಲನೆ, ಪೋಷಣೆ ಮತ್ತು ಕಲ್ಯಾಣ ಅಧಿನಿಯಮ 2007” ರ ಅಡಿಯಲ್ಲಿ ಸಲ್ಲಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಕಾಯ್ದೆಯ ಉದ್ದೇಶ ಹಿರಿಯ ನಾಗರೀಕರಿಂದ ಪಾಲನೆ ಮಾಡುವುದಾಗಿ ನಂಬಿಸಿ ಮೋಸ ಮಾಡಿ ಆಸ್ತಿ ಬರೆಸಿಕೊಂಡು ನಂತರ ಅವರನ್ನು ಪಾಲನೆ ಮಾಡದೆ ನಿರ್ಲಕ್ಷ್ಯ ಮಾಡಿದವರಿಂದ ಆಸ್ತಿಯನ್ನು ಪುನಃ ಅಂತಹ ಹಿರಿಯ ನಾಗರೀಕರಿಗೆ ಕೊಡಿಸುವುದು ಹಾಗೂ ಹಿರಿಯ ನಾಗರೀಕರ ಜೀವನ ಮತ್ತು ಭದ್ರತೆಗಾಗಿ ಜೀವನಾಂಶ ಕೊಡಿಸುವುದರ ಮೂಲಕ ಹಿರಿಯ ನಾಗರೀಕರಿಗೆ ಜೀವನ ಭದ್ರತೆಯನ್ನು ಒದಗಿಸುವುದಾಗಿದೆ.
ಸಾಕಷ್ಟು ಪ್ರಕರಣಗಳ ವಿಚಾರಣೆಯನ್ನು ಕಂಡಾಗ ಗಮನಿಸಿದ ಅಂಶವೆಂದರೆ, ಹೆಚ್ಚು ಮಕ್ಕಳಿರುವ ಪೋಷಕರು ಹಾಗೂ ಕೆಲವೊಮ್ಮೆ ಒಬ್ಬರೇ ಮಗ ಅಥವಾ ಮಗಳು ಇರುವ ಪೋಷಕರು ಸಹ ತಮ್ಮ ವೃದ್ಧಾಪ್ಯದಲ್ಲಿ ಯಾರು ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುಬಹುದು ಎನ್ನುವ ಗೊಂದಲದಲ್ಲಿ ಆ ಕ್ಷಣದಲ್ಲಿ ಯಾರು ತಮ್ಮನ್ನು ಸಿಹಿಯಾದ ಮಾತುಗಳಿಂದ ಬೆರಗು ಮಾಡುತ್ತಾರೋ, ತಿಂಡಿ ತಿನಿಸು ಕೊಡಿಸಿ ಬಣ್ಣದ ಮಾತನಾಡಿದವರಿಗೆ ನಂಬಿ ಆಸ್ತಿ ಬರೆದುಕೊಟ್ಟು, ಆ ನಂತರ ಆಸ್ತಿ ಕೈ ಸೇರಿದ ತಕ್ಷಣ ಆ ಮಗ ಅಥವಾ ಮಗಳು ಆ ವೃದ್ಧರನ್ನು ಮನೆಯಿಂದ ಹೊರ ಹಾಕಿದಾಗ ಬೇರೆ ದಾರಿ ಕಾಣದೆ ಈ ಮೊದಲು ಯಾರು ತಮ್ಮನ್ನು ಸಾಕುವುದಿಲ್ಲ ಎಂದು ನಿರ್ಲಕ್ಷ್ಯ ಮಾಡಿದ್ದರೋ, ಯಾರಿಗೆ ಆಸ್ತಿಯನ್ನು ಬರೆದುಕೊಟ್ಟಿರುವುದಿಲ್ಲವೋ ಅಂತಹ ಮಕ್ಕಳ ಬಳಿ ಆಶ್ರಯ ಪಡೆಯುತ್ತಾರೆ, ಆಗ ತಾವು ಮೊದಲು ಮೋಸಹೋಗಿದ್ದೇವೆ ಎಂದು ಜ್ಞಾನೋದಯವಾಗಿ ಈ ಕಾಯ್ದೆಯ ಅಡಿಯಲ್ಲಿ ಮೋಸ ಮಾಡಿದ ಮಕ್ಕಳ ಮೇಲೆ ದಾವೆಯನ್ನು ಹೂಡುತ್ತಾರೆ.
ಈ ರೀತಿಯ ಪ್ರಕರಣ, ಸನ್ನಿವೇಶ ಕಂಡಾಗಲೆಲ್ಲಾ ನನಗೆ ಮೂಡುವ ಪ್ರಶ್ನೆ, ಪಿತೃಗಳಿಗೆ ಪಿತೃ ಭಕ್ತಿ ತೋರುವುದಾದರೂ ಹೇಗೆ? ಎಂದು. ಏಕೆಂದರೆ ಕೇವಲ ಬಣ್ಣದ ಮಾತುಗಳನ್ನು ಜನ ನಂಬಿದರೆ ಹೇಗೆ?, ಎಲ್ಲಾ ಮಕ್ಕಳು ತಡಬಡ ಮಾತಾಡುವುದಿಲ್ಲ, ತಮ್ಮಲ್ಲಿ ಆಂತರೀಕವಾಗಿ ಅಡಗಿರುವ ಪ್ರೀತಿಯನ್ನು ಎಲ್ಲರಂತೆ ವ್ಯಕ್ತಪಡಿಸುವುದಿಲ್ಲ, ಕೆಲವರು ಸೂಕ್ಷ್ಮ ಮತಿಗಳಾಗಿರುತ್ತಾರೆ. ಒಳಗೇ ತಮ್ಮ ತಂದೆ ತಾಯಿಗಳನ್ನು ಅಪಾರವಾಗಿ ಪ್ರೀತಿಸುತ್ತಾರೆ, ಆದರೆ ಆ ಪ್ರೀತಿಯನ್ನು ವ್ಯಕ್ತಪಡಿಸಲು ಆಗುವುದಿಲ್ಲ, ನಾನು ಕೆಲವು ದಿನಗಳ ಹಿಂದೆ ಓದಿದ ವಿಚಾರ ಒಬ್ಬ ಮಗ ತನ್ನ ತಾಯಿಯನ್ನು ಸೈಕಲ್ ನಲ್ಲಿ ಕೂರಿಸಿಕೊಂಡು ದೇಶದ ಪುಣ್ಯ ಕ್ಷೇತ್ರಗಳ ದರ್ಶನ ಮಾಡಿಸಿದ ಸಂಗತಿ, ಹಾಗೆಯೇ ಇತ್ತೀಚೆಗೆ ಮಧ್ಯಪ್ರದೇಶದ ಉಜ್ಜಯಿನಿಯ ರೌನಕ್ ಗುರ್ಜರ್ ತನ್ನ ತಾಯಿಗೆ ತನ್ನ ತೊಡೆಯ ಚರ್ಮದಿಂದ ಪಾದರಕ್ಷೆ ತಯಾರಿಸಿಕೊಟ್ಟ ವಿಚಾರ. ಬಹಳ ಹಿಂದೆ ಅಂದರೆ ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನ ಕಾಲದಲ್ಲಿ ಬಸವಣ್ಣನಿಗೆ ಹರಳಯ್ಯನವರು ತಮ್ಮ ತೊಡೆಯ ಚರ್ಮದಿಂದ ಪಾದರಕ್ಷೆಗಳನ್ನು ತಾಯಾರಿಸಿಕೊಟ್ಟ ಪ್ರಸಂಗವನ್ನು ಕೇಳಿದ್ದೇವೆ, ಆದರೆ ಅಂತಹ ವ್ಯಕ್ತಿ ಮತ್ತು ಪ್ರಸಂಗ ಇಪ್ಪತ್ತೊಂದನೆಯ ಶತಮಾನದಲ್ಲಿ ಸಹ ಮರಕಳಿಸಿರುವುದು ನಿಜಕ್ಕೂ ತುಂಬಾ ಅಚ್ಚರಿಯ, ಅಪರೂಪದಲ್ಲಿ ಅಪರೂಪದ ಘಟನೆಯಾಗಿದೆ. ಆದರೆ ಎಲ್ಲರೂ ಈ ರೀತಿ ತಮ್ಮ ಪಿತೃ ಪ್ರೇಮವನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ, ಹಾಗೆಯೇ ಪುರಾಣಗಳಲ್ಲಿ ಬರುವ ಶ್ರವಣಕುಮಾರನಂತೆ ತನ್ನ ತಂದೆ ತಾಯಿಯ ಸೇವೆ ಮಾಡಲೂ ಆಗುವುದಿಲ್ಲ. ಆಧುನಿಕ ಯುಗಕ್ಕೆ ತಕ್ಕಂತೆ, ತಮ್ಮ ತಮ್ಮ ಕೆಲಸದ ಒತ್ತಡದ ನಡುವೆಯೂ ತಮ್ಮ ಪೋಷಕರನ್ನು ಪ್ರೀತಿಸುವವರು ಇದ್ದಾರೆ, ಆದರೆ ಅವರಿಗಿಂತ ಬಿಡುವಾಗಿ ಇದ್ದು ಬಣ್ಣದ ಮಾತಾಡಿ, ಚಾಡಿ ಹೇಳುವುದರ ಮೂಲಕ ವೃದ್ಧರನ್ನು ವಂಚಿಸುವವರು ಇದ್ದಾರೆ ಹೀಗೆ ವಂಚಿಸಿದ ಪ್ರಸಂಗದ ಬಗ್ಗೆ ನನಗೆ ಬಹಳ ಕಾಡಿದ, ಬಹಳ ದಿನಗಳ ಹಿಂದೆ ನಾನು ಓದಿದ ಕೃತಿ “ಕಿಂಗ್ ಲಿಯರ್” ಅದು ಬಹಳ ಸ್ವಾರಸ್ಯಕರವಾಗಿದೆ.
ಪಿತೃಗಳಿಗೆ ಪಿತೃ ಭಕ್ತಿ ಹೇಗೆ ತೋರಿದರೆ ಪೋಷಕರು ಬಹಳ ಬೇಗ ನಂಬುತ್ತಾರೆ ಮುಂದಿನ ದುರಂತಕ್ಕೆ ಹೇಗೆ ಕಾರಣವಾಗುತ್ತಾರೆ ಎನ್ನುವುದಕ್ಕೆ ಉತ್ತರ ವಿಲಿಯಮ್ ಶೇಕ್ಸ್ ಪಿಯರ್ ರವರ ಪ್ರಸಿದ್ಧ ದುರಂತ ನಾಟಕ “ಕಿಂಗ್ ಲಿಯರ್” ಈ ನಾಟಕದಲ್ಲಿ ಬರುವ ತಂದೆಯ ಪಾತ್ರ ತನ್ನ ಮಕ್ಕಳು ತನ್ನನ್ನು ಎಷ್ಟು ಪ್ರೀತಿಸುತ್ತಾರೆ ಎಂದು ತಿಳಿದುಕೊಳ್ಳಲು ಹೋಗಿ ಮೋಸ ಹೋದ ದುರಂತ ಪ್ರಸಂಗ. ಬ್ರಿಟನ್ ರಾಜ ಕಿಂಗ್ ಲಿಯರ್ ತನ್ನ ವೃದ್ಧಾಪ್ಯದಲ್ಲಿ ತನ್ನ ಮೂರು ಜನ ಮಕ್ಕಳಿಗೆ ರಾಜ್ಯವನ್ನು ಹಂಚಲು ತೀರ್ಮಾನಿಸುತ್ತಾನೆ. ಆದರೆ ಹಂಚುವ ಮುನ್ನ ತನ್ನನ್ನು ಯಾರು ಹೆಚ್ಚು ಪ್ರೀತಿ ಮಾಡಿದರೆ ಅವರಿಗೆ ಮಾತ್ರ ರಾಜ್ಯ ಹಂಚಲು ನಿರ್ಧರಿಸುತ್ತಾನೆ. ಅದರಂತೆ ತನ್ನ ಮಕ್ಕಳು ಗೊನೆರಿಯಲ್ , ರೇಗನ್ ಮತ್ತು ಕಾರ್ಡೆಲಿಯಾ ರವರನ್ನು ಕರೆದು ನನ್ನನ್ನು ಯಾರು ಅತ್ತ್ಯುತ್ತಮವಾಗಿ ಪ್ರೀತಿಸುತ್ತೀರಿ, ಅದು ಹೇಗೆ? ಎಂದು ಹೇಳಿ? ಪ್ರೀತಿಗೆ ತಕ್ಕಂತೆ ರಾಜ್ಯ ಹಂಚುವುದಾಗಿ ಹೇಳಿದಾಗ, ಆತನ ಹಿರಿಯ ಮಗಳು ಗೊನೆರಿಯಲ್ ಹೇಗಾದರೂ ನಾಟಕ ಮಾಡಿ ಹೆಚ್ಚು ಪಾಲು ಪಡೆಯಬೇಕು ಎಂದು “ತನ್ನ ತಂದೆಯನ್ನು ಪದಗಳಲ್ಲಿ ವರ್ಣಿಸಲಾಗದಷ್ಟು ಪ್ರೀತಿಸುತ್ತೇನೆ, ಆತ ತನ್ನ ಕಣ್ಣುಗಳ ಬೆಳಕಿಗಿಂತ ಹೆಚ್ಚು ಪ್ರಿಯ” ಎಂದು ವರ್ಣಿಸಿದಳು. ಈ ಮಾತುಗಳಿಂದ ಸಂತೃಪ್ತನಾದ ಅರಸ ತನ್ನ ರಾಜ್ಯದ ಮೂರನೇ ಒಂದು ಭಾಗವನ್ನು ಕೊಡುತ್ತಾನೆ, ತನ್ನ ಮೇಲಿನ ಪ್ರೀತಿ ವ್ಯಕ್ತಪಡಿಸಲು ತನ್ನ ಎರಡನೆ ಮಗಳು ರೇಗನ್ ಗೆ ಕೇಳುತ್ತಾನೆ, ಆಗ ರೇಗನ್ ತಾನು ಮಾತುಗಳಲ್ಲಿ ಅಕ್ಕನನ್ನು ಮೀರಿಸಬೇಕು ಎಂದು ಯೋಚಿಸಿ “ತಾನು ತನ್ನ ತಂದೆಯನ್ನು ತನ್ನ ಅಕ್ಕ ಪ್ರೀತಿಸಿದಕ್ಕಿಂತ ಹೆಚ್ಚಾಗಿ ಪ್ರೀತಿಸುವೆ, ತನ್ನ ತಂದೆಗಿಂತ ಬೇರೆ ಸುಖ ಸಂತೋಷ ಈ ಪ್ರಪಂಚದಲ್ಲಿ ಇಲ್ಲ” ಎಂದು ಹೇಳುತ್ತಾಳೆ. ಇದರಿಂದ ಮತ್ತಷ್ಟು ಸಂತೋಷಗೊಂಡ ರಾಜ ತನ್ನ ಎರಡನೆ ಮಗಳಿಗೆ ಮೂರನೇ ಒಂದು ಭಾಗ ನೀಡುತ್ತಾನೆ. ಈಗ ಮೂರನೆ ಮಗಳು ತನ್ನನ್ನು ಇನ್ನಷ್ಟು ಮಾತಿನಿಂದ ಖುಷಿಪಡಿಸಬಹುದು ಎಂದು ತನ್ನ ಕಡೆಯ ಮಗಳು ಕಾರ್ಡೆಲಿಯಾಳನ್ನು ಕೇಳುತ್ತಾನೆ, ಆಕೆ ತನ್ನ ಅಕ್ಕಂದಿರಂತೆ ನಟನೆ ಮಾಡದೆ ಪ್ರಾಮಾಣಿಕವಾಗಿ “ಒಬ್ಬ ಮಗಳಾಗಿ ತಾನು ತನ್ನ ತಂದೆಯನ್ನು ಬಾಧ್ಯತಾ ಪೂರ್ವಕವಾಗಿ ಪ್ರೀತಿಸುತ್ತೇನೆ, ಹೆಚ್ಚಾಗಿಯೂ ಅಲ್ಲ, ಕಡಿಮೆಯೂ ಅಲ್ಲ”. ಎಂದು ಹೇಳುತ್ತಾಳೆ. ಅತಿಯಾದ ವರ್ಣನೆಯನ್ನು ನಿರೀಕ್ಷೆ ಮಾಡಿದ್ದ ರಾಜ ಸಪ್ಪೆ ಉತ್ತರ ಕೇಳಿ ಕೋಪಗೊಂಡು ಮಗಳನ್ನು ನಿಂದಿಸಿ ಯಾವ ಭಾಗವನ್ನು ಕೊಡದೆ ಕಳಿಸುತ್ತಾನೆ, ಆ ಉಳಿದ ಒಂದು ಭಾಗವನ್ನು ತನ್ನ ಇಬ್ಬರು ಮಕ್ಕಳಿಗೆ ಹಂಚುತ್ತಾನೆ. ರಾಜ್ಯದ ಅಧಿಕಾರ ಕಳೆದುಕೊಂಡ ಮೇಲೆ ಕಿಂಗ್ ಲಿಯರ್ ನನ್ನು ಆತನಿಂದ ರಾಜ್ಯ, ಅಧಿಕಾರ ಪಡೆದ ಇಬ್ಬರು ಮಕ್ಕಳು ಸರಿಯಾಗಿ ಸಾಕದೆ ಕೀಳಾಗಿ ಕಂಡು ಅರಮನೆಯಿಂದ ಹೊರ ಹಾಕುತ್ತಾರೆ. ಹೀಗೆ ಅಧಿಕಾರ ಅಂತಸ್ತು ಕಳೆದುಕೊಂಡು ಹುಚ್ಚನಂತೆ ಬೀದಿಗೆಬಿದ್ದ ತಂದೆಯನ್ನು ಕಡೆಗೆ ಕಾಪಾಡಲು ಯಾವ ಭಾಗವನ್ನು ಪಡೆಯದ ಕಡೆಯ ಮಗಳು ಓಡೋಡಿ ಬರುತ್ತಾಳೆ, ಆಗ ತನ್ನನ್ನು ಕ್ಷಮಿಸು ಎಂದು ಅವಳ ಕಾಲಿಗೆ ಕಿಂಗ್ ಲಿಯರ್ ಬೀಳುತ್ತಾನೆ. ಹೀಗೆ ಸಮಾಜದಲ್ಲಿ ನಿಜವಾದ ಪ್ರೀತಿಯನ್ನು ಹೃದಯದಿಂದ ಕಾಣಲಾಗದೆ ಪದಗಳಲ್ಲಿ ಹುಡುಕಲು ಹೋಗಿ ಮೋಸ ಹೋಗುತ್ತಾರೆ.
ವಯಸ್ಸಾದವರ ಚಿಂತೆ, ಚಿಂತನೆ, ಆಲೋಚನೆ ಏನೇ ಇರಲಿ, ಅವರು ಆಸ್ತಿ ನೀಡಲಿ, ನೀಡದಿರಲಿ, ಆದರೆ ಮಕ್ಕಳಾದ ನಾವು ತನ್ನ ತಾಯಿಗೆ ತನ್ನ ಚರ್ಮದಿಂದ ಚಪ್ಪಲಿ ಮಾಡಿಕೊಟ್ಟ ರೌನಕ್ ಗುರ್ಜರ್ ಹೇಳುವಂತೆ “ಸ್ವರ್ಗವು ಪೋಷಕರ ಪಾದದ ಮೇಲೆ ಇದೆ, ತಂದೆ ಸ್ವರ್ಗಕ್ಕೆ ಮೆಟ್ಟಿಲು, ತಾಯಿ ಆ ಮೆಟ್ಟಿಲು ಹತ್ತಲು ಮಾರ್ಗ ತೋರುವವಳು” ಇದನ್ನು ಅರಿಯಬೇಕು ಅಷ್ಟೇ.