ಗ್ರಾಮೀಣ ಜನರ ಮನೆಬಾಗಿಲಿಗೆ ಬ್ಯಾಂಕಿಂಗ್ ಸೌಲಭ್ಯ ದೇಶಕ್ಕೆ ನಂ.1: ಡಿಸಿಸಿ ಬ್ಯಾಂಕ್ ಸಾಧನೆಯಿಂದ ಜಿಲ್ಲೆಗೆ ಗೌರವ-ಶಾಸಕ ಶ್ರೀನಿವಾಸಗೌಡ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಮೊಬೈಲ್ ವಾಹನದಲ್ಲಿ ವಹಿವಾಟು ಆರಂಭಿಸುವ ಮೂಲಕ ಬ್ಯಾಂಕಿಂಗ್ ಸೌಲಭ್ಯಗಳನ್ನು ಗ್ರಾಮೀಣ ಜನರ ಮನೆಬಾಗಿಲಿಗೆ ತಲುಪಿಸುತ್ತಿರುವ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ದೇಶಕ್ಕೆ ನಂ.1 ಆಗಿರುವುದು ಜಿಲ್ಲೆಯ ಪಾಲಿಗೆ ಹೆಮ್ಮೆ ಮತ್ತು ಗೌರವದ ವಿಷಯ ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.
ಶನಿವಾರ ಬ್ಯಾಂಕ್ ಮುಂಭಾಗ ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲೇ ಮೊದಲ ಬಾರಿಗೆ ಆರಂಭಿಸಿರುವ ಮೊಬೈಲ್ ಬ್ಯಾಂಕಿಂಗ್ ವಾಹನದಲ್ಲಿ ಮೈಕ್ರೋ ಎಟಿಎಂ ಹಾಗೂ ವಹಿವಾಟಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಮೈಕ್ರೋ ಎಟಿಎಂನಲ್ಲಿ ಮಹಿಳಾ ಸಂಘದ ಸದಸ್ಯೆಯೊಬ್ಬರು ಮೊದಲು ಹಣ ಡ್ರಾ ಮಾಡುವ ಮೂಲಕ ವಹಿವಾಟಿಗೆ ಚಾಲನೆ ದೊರೆದಿದ್ದು, ಗ್ರಾಹಕರ ಮನೆಬಾಗಿಲಿಗೆ ಬ್ಯಾಂಕಿಂಗ್ ಸೇವೆ ಒದಗಿಸಿದ ಮೊದಲ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಬ್ಯಾಂಕಿಗೆ ಗ್ರಾಹಕರ ಅಲೆದಾಟ ತಪ್ಪಿಸಿ, ಅವರ ಮನೆಗೆ ಬ್ಯಾಂಕ್ ಸೌಲಭ್ಯ ಕಲ್ಪಿಸುವ ಅಪರೂಪದ ಯೋಜನೆ ಡಿಸಿಸಿ ಬ್ಯಾಂಕ್ ಕಾರ್ಯಗತಗೊಳಿಸಿದೆ, ನಾನೂ ಈ ಬ್ಯಾಂಕಿಗೆ ನಿರ್ದೇಶಕನಾಗಿದ್ದೆ, ಆದರೆ ಇಷ್ಟೊಂದು ವೇಗದಲ್ಲಿ ದಿವಾಳಿಯಾಗಿದ್ದ ಬ್ಯಾಂಕನ್ನು ದೇಶಕ್ಕೆ ನಂ.1 ಮಾಡಿರುವ ಬ್ಯಾಲಹಳ್ಳಿ ಗೋವಿಂದಗೌಡರ ನೇತೃತ್ವದ ಆಡಳಿತ ಮಂಡಳಿ ಕಾರ್ಯ ಶ್ಲಾಘನೀಯ ಎಂದರು.
ಆರ್ಥಿಕ ವಹಿವಾಟು ಡಿಜಟಲೀಕರಣಗೊಳ್ಳುತ್ತಿದೆ, ಕೈಬೆರಳ ತುದಿಯಲ್ಲಿ ಬ್ಯಾಂಕಿಂಗ್ ಸೇವೆ ಒದಗಿಸುವಷ್ಟು ವೇಗದಲ್ಲಿ ತಾಂತ್ರಿಕತೆ ಬೆಳೆದಿದೆ ಇಂತಹ ಸಂದರ್ಭದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮನೆಬಾಗಿಲಿಗೆ ಸೌಲಭ್ಯ ಕಲ್ಪಿಸಿರುವುದು ಮಾತ್ರವಲ್ಲ, ಹಣ ಡ್ರಾ,ಸಂದಾಯಕ್ಕೆ ರಸೀದಿಯನ್ನು ನೀಡಿ ಪಾರದರ್ಶಕತೆ ವಹಿವಾಟು ನಡೆಸಿ ಮುಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದರು.


ಹೊಸ ಮನ್ವಂತರದಡಿ:ಮನೆಬಾಗಿಲಿಗೆ ಬ್ಯಾಂಕ್


ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಕಿಸಾನ್ ಲಕ್ಷ್ಮಿ ಬಾಂಡ್ ಪರಿಚಯಿಸಿ, ಬ್ಯಾಂಕ್ ಹೊಸ ಮನ್ವಂತರದಡಿ ಬಡವರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೌಲಭ್ಯ ನೀಡುತ್ತಿದ್ದು, ಇಂತಹ ಸಂದರ್ಭದಲ್ಲಿ ಮಹಿಳೆಯರು ತಮ್ಮ ಡಿಸಿಸಿ ಬ್ಯಾಂಕಿನಲ್ಲೇ ವೈಯಕ್ತಿಕ ಖಾತೆ ತೆರೆದು ಉಳಿತಾಯದ ಹಣ ಠೇವಣಿ ಇಡಿ, ಲಕ್ಷ್ಮಿ ಬಾಂಡ್ ಖರೀದಿಸಿ ಹೆಚ್ಚಿನ ಬಡ್ಡಿಯ ಲಾಭ ಪಡೆಯಿರಿ ಎಂದು ಕೋರಿದರು.
ಡಿಸಿಸಿ ಬ್ಯಾಂಕ್ ಮಹಿಳೆಯರ ತವರು ಮನೆ ಇದ್ದಂತೆ, ನಿಮಗೆ ಹರಿಸಿನ,ಕುಂಕುಮ,ಹೂವಿನೊಂದಿಗೆ ಸಾಲ ನೀಡುತ್ತೇವೆ, ಅಲೆದಾಡಿಸುವುದಿಲ್ಲ, ನಿಮ್ಮ ಉಳಿತಾಯದ ಹಣ ವಾಣಿಜ್ಯ ಬ್ಯಾಂಕುಗಳಲ್ಲಿದ್ದರೆ ಕೂಡಲೇ ಡಿಸಿಸಿ ಬ್ಯಾಂಕಿಗೆ ತನ್ನಿ ಎಂದರು.
ರಾಷ್ಟ್ರೀಕೃತ ಬ್ಯಾಂಕ್‍ಗಳು ಬಡವರನ್ನು ತಲುಪಲು ವಿಫಲವಾಗಿರುವಾಗ ಡಿಸಿಸಿ ಬ್ಯಾಂಕ್ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ಕಲ್ಪಿಸುವ ದಿಟ್ಟ ಹಾಗೂ ಸಾಮಾಜಿಕ ಕಾಳಜಿಯ ಹೆಜ್ಜೆ ಇಟ್ಟಿದೆ, ಇಂತಹ ಸಂದರ್ಭದಲ್ಲಿ ಹೆತ್ತ ತಂದೆ,ತಾಯಿಯನ್ನು ಪ್ರೀತಿಸುವಷ್ಟು ಬ್ಯಾಂಕನ್ನು ಪ್ರೀತಿಸಿ, ನಿಮ್ಮ ಹಣಕ್ಕೆ ಖಾತ್ರಿ ಇದೆ, ವಾಣಿಜ್ಯ ಬ್ಯಾಂಕುಗಳಿಗಿಂತ ಶೇ.ರಷ್ಟು ಹೆಚ್ಚಿನ ಬಡ್ಡಿಯೂ ಸಿಗುತ್ತದೆ ಎಂದರು.


ತಾಯಂದಿರಿಗೆ ಸಾಲ:ಬೃಹತ್ ಆಂದೋಲನ


ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‍ಕುಮಾರ್, ಡಿಸಿಸಿ ಬ್ಯಾಂಕ್ ಅವಿಭಜಿತ ಜಿಲ್ಲೆಯ 4.5 ಲಕ್ಷ ಮಹಿಳೆಯರಿಗೆ ಶೂನ್ಯಬಡ್ಡಿ ಸಾಲ ವಿತರಿಸುವ ಮೂಲಕ ಕ್ರಾಂತಿಕಾರಕ ಹೆಜ್ಜೆ ಇಟ್ಟಿದ್ದು, ಸಾಲ ವಿತರಣೆಯನ್ನು ಆಂದೋಲನವಾಗಿ ನಡೆಸಿದೆ ಎಂದರು.
ತಾಯಂದಿರೇ ಬ್ಯಾಂಕಿನ ಶಕ್ತಿಯಾಗಿದ್ದು, 320 ಕೋಟಿ ಠೇವಣಿ ಇದೆ, ಈ ಹಣ ನಿಮ್ಮದೇ, ಬ್ಯಾಂಕು ನಿಮ್ಮದೆ ಎಂದು ತಿಳಿಸಿ, ನೀವು ಇಡುವ ಠೇವಣಿ ಹಾಗೂ ಉಳಿತಾಯ ಹಣದಿಂದ ಇತರೆ ಸಂಘಗಳಿಗೆ ಸಾಲ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿ, ಕಿಸಾನ್ ಲಕ್ಷ್ಮಿ ಬಾಂಡ್ ಕುರಿತು ಮಹಿಳೆಯರಿಗೆ ಮಾಹಿತಿ ನೀಡುವಲ್ಲಿ ವಿಫಲವಾಗಿರುವ ಬ್ಯಾಂಕ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಕಾಯಕ ಯೋಜನೆಯಲ್ಲಿ ಮಹಿಳೆಯವರನ್ನು ಸ್ವಾವಲಂಭಿಗಳಾಗಿಸಿ ಉದ್ಯೋಗ ಸೃಷ್ಠಿಸುವುದು ಮುಖ್ಯ ಧ್ಯೇಯವಾಗಿದೆ. ಮಹಿಳೆಯರು ಸಂಘಟಿತರಾಗಿ ಒಟ್ಟಾಗಿ ಉದ್ಯಮಗಳನ್ನು ಮಾಡಲು ಅವಕಾಶಗಳನ್ನು ಕಲ್ಪಿಸಿದೆ ಇದನ್ನು ಸದ್ಬಳಕೆ ಮಾಡಿಕೊಳ್ಳಲು ಮುಂದಾಗಿ ಎಂದರು.
ಮೊಬೈಲ್ ಬ್ಯಾಂಕಿಂಗ್ ವಾಹನದಲ್ಲಿ ಹಣ ಪಾವತಿ, ಡ್ರಾ ಮಾಡುವುದಷ್ಟೆ ಅಲ್ಲ,. ನೀವು ವಿದ್ಯುತ್ ಬಿಲ್, ಗ್ಯಾಸ್ ಬಿಲ್, ಪೋನ್ ಬಿಲ್ ಸೇರಿದಂತೆ ಇತರೆ ಎಲ್ಲಾ ವ್ಯವಹಾರಗಳನ್ನು ಮಾಡಲು ಮೊಬೈಲ್ ಎ.ಟಿ.ಎಂ. ವಾಹನದಲ್ಲಿಯೇ ಮಾಡಬಹುದಾಗಿದೆ ಎಂದರು.
ಬ್ಯಾಲಹಳ್ಳಿ ಗೋವಿಂದಗೌಡರು, ಬ್ಯಾಂಕ್‍ಗಾಗಿ ಕೆಲಸ ಮಾಡಿದ್ದಾರೆ, ಬ್ಯಾಂಕಿನ ಚೌಕಿಧಾರನಂತೆ ಮನೆ,ಕುಟುಂಬವನ್ನು ಬಿಟ್ಟು ದಿನದ 24 ಗಂಟೆ ಬ್ಯಾಂಕಿನ ಸೇವೆಯಲ್ಲಿಯೇ ಮುಳುಗಿರುವ ಹಿನ್ನಲೆಯಲ್ಲಿ ಡಿಸಿಸಿ ಬ್ಯಾಂಕ್ ಇಂದು ದೇಶದಲ್ಲಿಯೇ ನಂಬರ್ ಒನ್ ಸ್ಥಾನಕ್ಕೆ ಬರಲು ಸಾಧ್ಯವಾಯಿತು ಎಂದು ಶ್ಲಾಘಿಸಿದರು.
ಹೋಳೂರಿನ ಹೆಚ್.ಕೆ.ನಾಗರಾಜ್ ಎಂಬುವರು ಮಾತನಾಡಿ ತಮ್ಮ ಪತ್ನಿ ರುಕ್ಮಿಣಿಯವರು ದೈವದೀನರಾಗಿದ್ದು ಅವರ ಇಚ್ಚೆಯಂತೆ 75 ಸಾವಿರ ಹಣವನ್ನು ಡಿಸಿಸಿ ಬ್ಯಾಂಕಿನಲ್ಲಿ ಠೇವಣಿಯಾಗಿ ಇಡುತ್ತಿರುವುದಾಗಿ ಇದರಿಂದ ಇತರರಿಗೆ ಅನುಕೂಲವಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ನಿರ್ದೇಶಕ ಕೆ.ವಿ. ದಯಾನಂದ್, ನರಸಾಪುರ ಎಸ್‍ಎಫ್‍ಸಿಎಸ್ ಅಧ್ಯಕ್ಷ ಕೆ.ಎಂ.ಮುನಿರಾಜು, ಸಹಕಾರಿ ಯೂನಿಯನ್ ನಿರ್ದೇಶಕ ಅಣ್ಣಿಹಳ್ಳಿ ನಾಗರಾಜ್, ಪ್ರಗತಿಪರ ರೈತ ನೆನುಮನಹಳ್ಳಿ ಚಂದ್ರಶೇಖರ್, ಸಮಾಜ ಸೇವಕ ಆಟೋನಾರಾಯಣಸ್ವಾಮಿ, ಶಾಖಾ ವ್ಯವಸ್ಥಾಪಕ ಅಂಬರೀಷ್,ಅಮೀನಾ ಮತ್ತಿತರರು ಉಪಸ್ಥಿತರಿದ್ದರು
.