ಹೊಸಕೋಟೆ-ವಿಕೋಟೆ ಹೆದ್ದಾರಿ ಕಾಮಗಾರಿ ಮುಗಿಸಲು ಕುಂಟು ನೆಪ ಬೇಡ ಅರಣ್ಯ,ಲೋಕೋಪಯೋಗಿ ಅಧಿಕಾರಿಗಳ ವಿರುದ್ದ ಶಾಸಕಿ ರೂಪಶಶಿಧರ್ ಗರಂ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಹೊಸಕೋಟೆಯಿಂದ ಬಂಗಾರಪೇಟೆ ಮಾರ್ಗವಾಗಿ ವಿ.ಕೋಟೆ ತನಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಕ್ಕೆ ಇರುವ ಅಡೆತಡೆಗಳನ್ನು ನಿವಾರಿಸಿ, ಅವರಿವರ ಮೇಲೆ ನೆಪ ಹೇಳುವುದನ್ನು ಬಿಟ್ಟು ಕೂಡಲೇ ಕಾಮಗಾರಿ ಮುಗಿಸಿ ಎಂದು ಕೆಜಿಎಫ್ ಶಾಸಕಿ ರೂಪಶಶಿಧರ್ ತಾಕೀತು ಮಾಡಿದರು.
ಮಂಗಳವಾರ ನಗರದ ಪ್ರಾದೇಶಿಕ ಅರಣ್ಯ ವಿಭಾಗದ ಕಚೇರಿಯಲ್ಲಿ ಕರೆಯಲಾಗಿದ್ದ ಲೋಕೋಪಯೋಗಿ, ಅರಣ್ಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ವಿರುದ್ದ ಕಿಡಿಕಾರಿ, ವಿಳಂಬ ಮಾಡಿದರೆ ಏನು ಮಾಡಬೇಕು ಎಂದು ನನಗೆ ಗೊತ್ತಿದೆ ಎಂದು ಆಕ್ರೋಶಭರಿತರಾಗಿ ಎಚ್ಚರಿಸಿದರು.
ಹೆದ್ದಾರಿ ನಿರ್ಮಾಣಕ್ಕೆ ಅನೇಕ ಸಮಸ್ಯೆಗಳು ಎದುರಾಗಿವೆ, ಅದನ್ನು ಹಾಗೆ ಬಿಟ್ಟರೆ ಅನುದಾನ ವಾಪಸ್ ಹೋಗುತ್ತದೆ. ಅನುದಾನ ತರಲು ಎಷ್ಟು ಕಷ್ಟ ಎಂಬ ಅರಿವು ಇರಲಿ, ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಇಲಾಖಾಧಿಕಾರಿಗಳ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ ನೀವು ಕಾಮಗಾರಿ ಆರಂಭಿಸದಿದ್ದರೆ ಸಹಿಸಲು ಸಾಧ್ಯವಿಲ್ಲ ಎಂದು ಗರಂ ಆದರು.
ಅರಣ್ಯ,ಲೋಕೋಪಯೋಗಿ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯತೆ ಕಾಪಾಡಿಕೊಳ್ಳುವುದು ನಿಮ್ಮ ಕರ್ತವ್ಯ, ಎರಡೂ ಇಲಾಖೆಗಳು ಸರ್ಕಾರದ ವೇತನ ಪಡೆಯುತ್ತಿದ್ದೀರಿ, ಮರಗಳ ಕಟಾವು ವಿಳಂಬ ಎಂದು ಇವರು, ಮರಗಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲ ಎಂದು ಅರಣ್ಯ ಇಲಾಖೆಯವರು ಸಬೂಬು ಹೇಳಿಕೊಂಡು ಅನುದಾನ ವಾಪಸ್ಸಾದರೆ ಖಂಡಿತಾ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.

25 ಕಿಮೀ ರಸ್ತೆಗೆ 50 ಕೋ.ಅನುದಾನ
ಕೇಂದ್ರ ಸರ್ಕಾರದಿಂದ ಸಿಎಸ್‍ಆರ್ ಯೋಜನೆಯಡಿ ಹೊಸಕೋಟೆಯಿಂದ ಬಂಗಾರಪೇಟೆ ಮಾರ್ಗವಾಗಿ ವಿ.ಕೋಟೆ ತನಕ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲು 2016-17ನೇ ಸಾಲಿನಲ್ಲಿ ಅನುಮೋದನೆ ದೊರೆತಿದೆ. 25 ಕಿಮಿ ರಸ್ತೆ ನಿರ್ಮಾಣಕ್ಕೆ ಈಗಾಗಲೇ 50 ಕೋಟಿ ಅನುದಾನ ಬಿಡುಗಡೆಯಾಗಿದೆ, ಇದರ ಗುತ್ತಿಗೆದಾರರು ಗುಜರಾತ್ ಮೂಲದದವರಾಗಿದ್ದಾರೆ, ಅವರಿಗೆ ಸ್ಥಳಿಯ ಸಮಸ್ಯೆಗಳ ಬಗ್ಗೆ ಅರಿವು ಇಲ್ಲದ ಕಾರಣ ಕಾಮಗಾರಿ ಸ್ಥಗಿತಗೊಂಡಿದೆ ಎಂದರು.
ಲೋಕೊಪಯೋಗಿ ಇಲಾಖೆಯ ಇಂಜಿನಯರ್‍ಗಳು ಈಗಾಗಲೇ ಯೋಜನೆಯ ಡಿಪಿಆರ್ ತಯಾರಿಸಿದ್ದಾರೆ. ರಸ್ತೆ ಅಗಲೀಕರಣದ ಗಡಿಯನ್ನು ಗುರುತಿಸಿದ್ದಾರೆ. ಆದರೆ ಪ್ರಸ್ತುತ ಇರುವ ರಸ್ತೆಯ ಪಕ್ಕದಲ್ಲಿ ಮರಗಳನ್ನು ತೆರವು ಮಾಡಲು ಅರಣ್ಯ ಇಲಾಖೆಗೆ ಸೂಚಿಸಲಾಗಿತ್ತು. ಬೆಸ್ಕಾಂ ಇಲಾಖೆಯ ಕಂಬಗಳು ಸಹ ಇವೆ. ಅದನ್ನು ಸ್ಥಳಾಂತರ ಮಾಡಬೇಕು ಇದಕ್ಕೆ ಅಧಿಕಾರಿಗಳು ಸ್ಪಂದಿಸದೆ ಇರುವುದು ವಿಷಾದಕರ, ನೀವು ಕ್ರಮವಹಿಸದಿದ್ದರೆ ಖಂಡಿತಾ ಜನರ ಶಾಪ ನಿಮಗೆ ತಟ್ಟುತ್ತದೆ, ಜನರ ಋಣ ತೀರಿಸುವ ಬದ್ದತೆ ತೋರಿ ಎಂದು ಕಿವಿಮಾತು ಹೇಳಿದರು.

428 ಮರ ತೆರವಿಗೆ ಇಲಾಖೆ ಕುಂಟು ನೆಪ
ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಈ.ಶಿವಶಂಕರ್ ಮಾತನಾಡಿ, ಇಲಾಖೆ ವ್ಯಾಪಿಗೆ 428 ಮರಗಳು ಒಳಪಡುತ್ತವೆ. ಅವುಗಳನ್ನು ತೆರವುಗೊಳಿಸಲು ಟೆಂಡರ್ ಕರೆದು ಕ್ರಮಕೈಗೊಳ್ಳಲಾಗುವುದು. ಗುತ್ತಿಗೆದಾರರು ಮರಗಳು ಬೆಲೆಬಾಳುವ ದರ ಪಾವತಿಸಿದರೆ ತೆರವುಗೊಳಿಸಲು ಅವಕಾಶವಿದೆ ಎಂದು ತಿಳಿಸಿದರು.
ಕೋಲಾರದಲ್ಲಿ ರಸ್ತೆ ಅಗಲೀಕರಣ ಸಂದರ್ಭದಲ್ಲಿ ರಸ್ತೆ ಬದಿ ಇರುವ ಮರಗಳಿಗೆ ಗುತ್ತಿಗೆದಾರರು ಸಂಬಂಧ ಪಟ್ಟ ಇಲಾಖೆಗೆ ಹಣ ತುಂಬಿ ನಂತರ ಅವುಗಳನ್ನು ಹರಾಜು ಮೂಲಕ ವಿಲೇವಾರಿ ಮಾಡಿಕೊಳ್ಳಬಹುದು, ಇದೇ ರೀತಿ ಕೋಲಾರದಲ್ಲಿ ಮಾಡಿದ್ದಾರೆ ಎಂದು ಶಿವಶಂಕರ್ ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕಿ ರೂಪಶಶಿಧರ್, ಕುಂಟುನೆಪ ಹೇಳಬೇಡಿ, ಈಗಾಗಲೇ ರಸ್ತೆ ನಿರ್ಮಾಣದ ಕಾಮಗಾರಿ ಮುಗಿಯಬೇಕಾಗಿತ್ತು. ಗುತ್ತಿಗೆದಾರ ಹೊರಗಿನ ರಾಜ್ಯದವರು ಆಗಿರುವವುದರಿಂದ ಅಡೆತಡೆಗಳನ್ನು ನಾವೇ ನಿವಾರಣೆ ಮಾಡಿಕೊಡಬೇಕು. ಇದಕ್ಕೆ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.
ಕೆ.ಜಿ.ಎಫ್, ಬೇತಮಂಗಲ ಮತ್ತು ವೆಂಕಟಗಿರಿಕೋಟಾ ಮಾರ್ಗದಲ್ಲಿನ ಕೋಟಿ ಲಿಂಗೇಶ್ವರ ಮತ್ತು ಗುಟ್ಟಹಳ್ಳಿ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ, ಜನರ ಬಹುದಿನದ ಈಬೇಡಿಕೆ ಇಲಾಖೆಗಳ ನಿರ್ಲಕ್ಷ್ಯದಿಂದ ನೆನೆಗುದಿಗೆ ಬಿದ್ದಿದ್ದು, ಇದನ್ನು ಮತ್ತೆ ಮಾಡಲು ಸರ್ಕಾರಕ್ಕೆ ಮನವಿ ಮಾಡಿ ಒಪ್ಪಿಸಿದ್ದೇನೆ.
ಅರಣ್ಯಇಲಾಖೆ, ಲೋಕೋಪಯೋಗಿ, ಬೆಸ್ಕಾಂ, ಹಾಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರ ಇಲಾಖೆಗೆ ಎಲ್ಲರನ್ನು ಒಗ್ಗುಡಿಸಿ ಕೊಂಡು ಕಾಮಗಾರಿಯನ್ನು ಕೈಗೆತ್ತಿ ಕೊಳ್ಳಲು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇನೆ. ಇನ್ನು ತಡ ಮಾಡಿದರೆ ಹೇಗೆ ಎಂದು ತಾಕೀತು ಮಾಡಿದರು.
ಲೋಕೊಪಯೋಗಿ ಇಲಾಖೆ ಎಇಇ ಮಲ್ಲಿಕಾರ್ಜುನ ಮಾತನಾಡಿ, ರಸ್ತೆ ಅಗಲೀಕರಣಕ್ಕೆ ಈಗಾಗಲೇ ಸರ್ವೇ ನಡೆಸಿ ಗಡಿ ಗುರುತಿಸಲಾಗಿದೆ. ಮರಗಳ ಹಾಗೂ ವಿದ್ಯುತ್ ಕಂಬಗಳ ತೆರವಿನಿಂದ ಕಾಮಗಾರಿ ಕೈಗೆತ್ತಿಕೊಳ್ಳುವುದು ತಡವಾಗಿದೆ ಎಂದು ಸಮಜಾಯಿಷಿ ನೀಡಿದರು.

ಆನೆ ಹಾವಳಿ ತಡೆಗೆ ಕಾರಿಡಾರ್‍ಗೆ ಪ್ರಸ್ತಾವನೆ
ಶಾಸಕಿ ರೂಪಶಶಿಧರ್ ಮಾತನಾಡಿ, ಜಿಲ್ಲೆಯ ಗಡಿಭಾಗವಾದ ಕೆ.ಜಿ.ಎಫ್. ಬಂಗಾರಪೇಟೆ ಹಾಗೂ ಮಾಲೂರು ವ್ಯಾಪ್ತಿಯಲ್ಲಿ ಆನೆಗಳ ಹಾವಳಿ ತೀವ್ರವಾಗಿದೆ. ಈ ಭಾಗದಲ್ಲಿ ಆನೆ ಕಾರಿಡಾರ್ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದನದಲ್ಲೂ ಪ್ರಸ್ತಾಪಿಸಿದ್ದೇನೆ, ಅನುದಾನ ಬಿಡುಗಡೆ ತಡವಾಗಿದೆ, ರೈತರ ಬೆಳೆಗಳ ರಕ್ಷಣೆ ಇಂದಿನ ಜವಾಬ್ದಾರಿಯಾಗಿದೆ, ನಷ್ಟಕ್ಕೆ ಪರಿಹಾರ ನೀಡಿ ಕೈತೊಳೆದುಕೊಂಡರೆ ಸಾಲದು ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಮಾತನಾಡಿ, ಐದು ಕಿಮಿ ಉದ್ದ ಸೋಲಾರ್ ಫೆನ್ಸಿಂಗ್ ನಿರ್ಮಿಸಲು ಕ್ರಮಕೈಗೊಳ್ಳಲಾಗಿದೆ. ಜೂನ್ ಮಾಹೆಯಿಂದ ಕೆಲಸ ಶುರುವಾಗುತ್ತದೆ ಎಂದು ಹೇಳಿದರು.
ಆನೆಗಳ ಕಾರಿಡಾರ್ ಮಾಡಲು ಒಂದು ಕಿ.ಮಿ.ಗೆ ಸುಮಾರು ಒಂದು ಕೋಟಿ ವೆಚ್ಚವಾಗಲಿದೆ. ಮಾಲೂರಿನಿಂದ ಕೆ.ಜಿ.ಎಫ್ ಗಡಿಭಾಗದ ಅಂತ್ಯದವರೆಗೆ ಕಾರಿಡಾರ್ ಮಾಡಬೇಕಾಗಿದೆ. ಗಡಿಭಾಗದ ತೊಪ್ಪನಹಳ್ಳಿ ಮತ್ತು ದೋಣಿಮಡುಗು ಸಮೀಪ 5 ಕಿ.ಮಿ. ಸೋಲರ್ ಫೆನ್ಸಿಂಗ್ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು ಜೂನ್ ಮಾಹೆಯಿಂದ ಕಾಮಗಾರಿಪ್ರಾರಂಭಿಸಲಾಗುವುದು ಎಂದರು.