ವಡೋದರ: ಮೋಜು ಮಸ್ತಿಯಿಂದ ಕೂಡಿದ ಶಾಲಾ ವಿದ್ಯಾರ್ಥಿಗಳ ಪ್ರವಾಸ ದುರಂತ ಅಂತ್ಯಕಂಡಿದೆ. ವಿದ್ಯಾರ್ಥಿಗಳನ್ನು ಹೊತ್ತು ಸಾಗುತ್ತಿದ್ದ ಬೋಟು ಭೀಕರ ದುರಂತಕ್ಕೀಡಾಗಿದೆ. ಖಾಸಗಿ ಶಾಲೆಯ 27 ವಿದ್ಯಾರ್ಥಿಗಳಿದ್ದ ಬೋಟ್ ಗುಜರಾತ್ನ ವಡೋದರದ ಹರ್ನಿಯಲ್ಲಿ ಮುಳುಗಡೆಯಾಗಿದೆ.
ಈ ಪೈಕಿ 10 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಇದರ ಜೊತೆಗೆ ಇಬ್ಬರು ಶಿಕ್ಷಕರು ಮೃತಪಟ್ಟಿದ್ದಾರೆ. ಇತ್ತ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಕೆಲ ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ. ಬೋಟ್ನಲ್ಲಿ ತೆರಳುತ್ತಿದ್ದ 27 ವಿದ್ಯಾರ್ಥಿಗಳಿಗೆ ಲೈಫ್ ಜಾಕೆಟ್ ನೀಡದೇ ಇರುವುದು ಸಾವಿನ ಸಂಖ್ಯೆ ಹೆಚ್ಚಿಸಿದೆ ಎಂದು ತಿಳಿದು ಬಂದಿದೆ.
ಮೊಟ್ನಾಥ್ ಲೇಕ್ಗೆ ಶಾಲಾ ಪ್ರವಾಸ ಕೈಗೊಳ್ಳಲಾಗಿತ್ತು. ಈ ವೇಳೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮಂದಿಯನ್ನು ಬೋಟ್ನಲ್ಲಿ ಹತ್ತಿಸಿದ್ದಾರೆ. ಇಷ್ಟೇ ಅಲ್ಲ ಯಾವುದೇ ಮಕ್ಕಳಿಗೆ ಲೈಫ್ ಜಾಕೆಟ್ ನೀಡಿಲ್ಲ. ಬೃಹತ್ ಕೆರೆಯಲ್ಲಿ ಮೋಜಿನ ಪ್ರವಾಸ ಆರಂಭಗೊಂಡ ಕೆಲ ಹೊತ್ತಲ್ಲಿ ಬೋಟ್ ಮಗುಚಿ ಬಿದ್ದಿದೆ. ಇದುವರೆಗೆ 12 ಮೃತದೇಹ ಹೊರಕಕ್ಕೆ ತೆಗೆಯಲಾಗಿದೆ. ನಾಪತ್ತೆಯಾಗಿರುವ ವಿದ್ಯಾರ್ಥಿಗಳ ರಕ್ಷಣಾ ಕಾರ್ಯ ಸಾಗಿದೆ.
ವಡೋದರ ನ್ಯೂ ಸನ್ರೈಸ್ ಶಾಲೆಯ ವಿದ್ಯಾರ್ಥಿಗಳನ್ನು ಮೊಟ್ನಾಥ್ ಲೇಕ್ಗೆ ಪ್ರವಾಸ ಕರೆದುಕೊಂಡು ಹೋಗಲಾಗಿದೆ. ಬೋಟ್ ಸಾಮರ್ಥ್ಯಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ಅಂದರೆ ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಒಂದೇ ಬೋಟ್ನಲ್ಲಿ ಹತ್ತಿಸಿದ್ದಾರೆ. ಇಷ್ಟೇ ಅಲ್ಲ ಯಾರಿಗೂ ಲೈಫ್ ಜಾಕೆಟ್ ಕೂಡ ನೀಡಿಲ್ಲ. ಕೆರೆಯ ಮಧ್ಯ ಭಾಗ ತಲುಪುತ್ತಿದ್ದಂತೆ ಬೋಟು ಮಗುಚಿದೆ.
ಈಜು ಬಾರದ ಮಕ್ಕಳು ಹಾಗೂ ಶಿಕ್ಷಕರು ಮುಳುಗಿದ್ದಾರೆ. ತಕ್ಷಣವೇ ರಕ್ಷಣಾ ತಂಡದ ಈಜುಗಾರರು ನೆರವಿಗೆ ಧಾವಿಸಿದ್ದಾರೆ. 23 ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ. ಆದರೆ ಈ ಪೈಕಿ 10 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಇನ್ನು ಇಬ್ಬರೂ ಶಿಕ್ಷಕರು ಕೂಡ ಮೃತಪಟ್ಟಿದ್ದಾರೆ. ಕೆಲ ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ. ಘಟನೆ ಕುರಿತು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಆಘಾತ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ಬೋಟ್ ದುರಂತದಲ್ಲಿ ಮೃತಪಟ್ಟಿರುವ ಸುದ್ದಿ ಕೇಳಿ ಆಘಾತವಾಗಿದೆ. ಸರ್ಕಾರ ಸೂಕ್ತ ನೆರವು ನೀಡಲು ಸಂಬಂಧ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಕ್ಕ ನನ್ನ ಸಂತಾಪಗಳು ಎಂದು ಟ್ವೀಟ್ ಮಾಡಿದ್ದಾರೆ.
ಇತ್ತ ಗುಜರಾತ್ ವಿರೋಧ ಪಕ್ಷ ಸರ್ಕಾರ ಹಾಗೂ ಸ್ಥಳೀಯ ಆಡಳಿತ ವಿಭಾಗವನ್ನು ತರಾಟೆಗೆ ತೆಗೆದುಕೊಂಡಿದೆ. ಲೈಫ್ ಜಾಕೆಟ್ ಇದ್ದರೆ ಎಲ್ಲಾ ಮಕ್ಕಳು, ಶಿಕ್ಷಕರು ಬದುಕುತ್ತಿದ್ದರು. ಇಲ್ಲಿ ಸಂಪೂರ್ಣ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ದೂರಿದ್ದಾರೆ. ಇತ್ತ ಸ್ಥಳೀಯರು ಕೂಡ ಆಕ್ರೋಶ ಹೊರಹಾಕಿದ್ದರೆ. ಇತ್ತ ಮೃತ ವಿದ್ಯಾರ್ಥಿಗಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.