ಕುಂದಾಪುರ; ಮುಳ್ಳಿಕಟ್ಟೆ ರಾಷ್ಟ್ರೀಯ ಹೆದ್ದಾರಿ- 66 ಅರಾಟೆ ಸೇತುವೆ ಬಳಿ ಗ್ಯಾಸ್ ಸಾಗಿ ಸುತ್ತಿದ್ದ ವಾಹನ ಮತ್ತು ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರನನ್ನು ಮಂಗಳೂರು ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಕೆಬಿ ಯುವರಾಜ್ ಬಲ್ಲಾಳ ಎಂಬುವರ ಪುತ್ರ ರಂಜಿತ್ ಬಲ್ಲಾಳ್(59) ಎಂದು ಗುರುತಿಸಲಾಗಿದೆ.ಇಂದು ಸಂಜೆ ಸುಮಾರು 4;00 ಗಂಟೆಗೆ ಅಪಘಾತ ನಡೆದಿದ್ದು, ಬೈಕ್ ಸವಾರ ರಂಜಿತ್ ಬಲ್ಲಾಳ್ ತನ್ನಬಿಎಂಡಬ್ಲ್ಯೂ ಬೈಕ್ ನಲ್ಲಿ ಗೋವಾ ಕಡೆಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದರು.
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅರಾಟೆ ಸೇತುವೆ ದುರಸ್ತಿಗಾಗಿ ಕಳೆದ ಎರಡು ವಾರಗಳಿಂದ ಚತುರ್ಪಥ ರಸ್ತೆಯಲ್ಲಿ ಒಂದು ಮಗ್ಗಲಿನ ದ್ವಿಪಥವನ್ನು ಮುಚ್ಚುಗಡೆ ಮಾಡಿ ಇನ್ನೊಂದು ಮಗ್ಗಲಿನಲ್ಲಿ ಏಕ ಪಥ ಸಂಚಾರವನ್ನಾಗಿ ಮಾಡಿದ್ದಾರೆ, ಆದರೆ ಸೇತುವೆ ದುರಸ್ತಿ ಕಾರ್ಯ ಆರಂಭವಾಗಿಲ್ಲ ಆದರೆ ಈ ಸ್ಥಳ ಅಪಾಯಕಾರಿ ಸ್ಥಳವಾಗಿ ಪರಿಣಮಿಸಿದೆ.
ಈ ಹಿನ್ನೆಲೆಯಲ್ಲಿ ವೇಗವಾಗಿ ಬಂದ ಬೈಕ್ ಸವಾರ ಹೆಲ್ಮೆಟ್ ಧರಿಸಿದ್ದರೂ ಅಪಘಾತದ ತೀವ್ರತೆಗೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳೀಯರ ಸಹಕಾರದಿಂದ ಬೈಕ್ ಸವಾರನನ್ನು ಗಂಗೊಳ್ಳಿ ಆಪದ್ಬಾಂಧವ ಇಬ್ರಾಹಿಂ ಗಂಗೊಳ್ಳಿ ಮತ್ತು ಅಬ್ರರ್ ತನ್ನ ಅಂಬುಲೆನ್ಸ್ ನಲ್ಲಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಗಂಗೊಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಳೆದ ಒಂದು ವರ್ಷದಿಂದ ಸಂಪೂರ್ಣ ಅವ್ಯವಸ್ಥೆಗೆ ಈ ದುರಂತ ಸಂಭವಿಸಿದೆ. ಪರಿಣಾಮ ಹಲವು ಅಪಘಾತಗಳು ಸಂಭವಿಸಿವೆ ಆದರೆ ಈ ಬಗ್ಗೆ ಎಚ್ಚೆತ್ತುಕೊಳ್ಳದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕಾಮಗಾರಿ ನಡೆಸಿದ ಐಆರ್ಬಿ ಸಂಸ್ಥೆಯು ತನ್ನ ನಿರ್ಲಕ್ಷ ಧೋರಣೆಯನ್ನು ತೋರುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹೆದ್ದಾರಿ ಆರಂಭವಾಗಿ ಎಷ್ಟೊ ದಶಕಗಳಾಗಿವೆ (ಹಿಂದೆ ಎನ್.ಎಚ್ ೧೭) ಆದರೂ ಬೀದಿ ದೀಪಗಳಿಲ್ಲ, ಹೆಸರಿಗೆ ಮಾತ್ರ ರಾಷ್ಟೀಯ ಹೆದ್ದಾರಿ, ಆದರೆ ಜನತೆಗೆ ಹೆಮ್ಮಾರಿಯಾಗಿದೆ.