



ಉಡುಪಿ ಜಿಲ್ಲೆಯ ಕುಂದಾಪುರ ಪಟ್ಟಣದ ಹೃದಯ ಭಾಗದಲ್ಲಿರುವ ಪ್ರತಿಷ್ಟಿತ ವಿದ್ಯಾ ಸಂಸ್ಥೆ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ. ಈ ವಿದ್ಯಾದೇಗುಲದ ಪೂರ್ವದಲ್ಲಿ ರಾಜ್ಯ ಹೆದ್ದಾರಿ, ಪಶ್ಚಿಮದಲ್ಲಿ 452 ವರ್ಷಗಳ ಇತಿಹಾಸವಿರುವ ವೈಭವದಿಂದ ಕಂಗೊಳಿಸುವ ರೋಜರಿ ಮಾತೆಯ ಚರ್ಚ್, ಉತ್ತರಕ್ಕೆ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ದಕ್ಷಿಣ ಭಾಗದಲ್ಲಿ ಶತಮಾನೋತ್ಸವ ಆಚರಿಸಿಕೊಂಡ ಸೈಂಟ್ ಮೇರಿಸ್ ವಿದ್ಯಾಸಂಸ್ಥೆಗಳು ಈ ಎಲ್ಲಾ ಬೌಗೋಳಿಕ ಸನ್ನಿವೇಶದ ಪರಿಸರದ ಮಧ್ಯೆ ನಡುವಣಗಿತ್ತಿಯಂತೆ ಬೆಳೆದು ನಿಂತು ಕಂಗೊಳಿಸುತ್ತಿರುವುದು ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ.
1997 ಜೂನ್ 2ನೇ ತಾರೀಖಿನಿಂದ ಪ್ರಾಥಮಿಕ ಹಂತದಿಂದ ಆರಂಭವಾದ ಈ ಶಾಲೆ ಹಂತ ಹಂತವಾಗಿ ಮೇಲೆರುತ್ತಾ ಪ್ರೌಢಶಾಲೆಯಾಗಿ ಮಾರ್ಪಾಡಾಗಿ ಸಾವಿರರು ವಿದ್ಯಾರ್ಥಿಗಳಿಗೆ ವಿದ್ಯಾದಾನ ನೀಡುತ್ತಾ ಬಂದಿದೆ. ಈ ಶಾಲೆಯನ್ನು ಪ್ರಾರಂಭಿಸಿದ ಕೀರ್ತಿ ವಂದನೀಯ ಗುರು ಸ್ಟ್ಯಾನಿ ಬಿ ಲೋಬೊರವರಿಗೆ ಸಲ್ಲುತ್ತದೆ. ಕುಂದಾಪುರದ ಆಸುಪಾಸಿನ ಜನರ ಬೇಡಿಕೆಯಾಗಿದ್ದ ಈ ಆಂಗ್ಲ ಮಾಧ್ಯಮ ಶಾಲೆಯನ್ನು 1997ರಲ್ಲಿ ರೋಜರಿ ಮಾತೆಯ ಚರ್ಚಿನ ಸಭಾಂಗಣದಲ್ಲಿ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ಎನ್ನುವ ನಾಮಧೇಯದೊಂದಿಗೆ ಅಂದಿನ ಸಂಚಾಲಕರಾಗಿದ್ದ ವಂದನೀಯ ಸ್ಟ್ಯಾನಿ ಬಿ ಲೋಬೊರವರ ಅವಿರತ ಪ್ರಯತ್ನದಿಂದ ಪ್ರಾರಂಭವಾಯಿತು.
ಶ್ರೀಮತಿ ರೇಣುಕಾ ರೀನಾ ಸೋನ್ಸ್‍ರವರು ಮೊದಲ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸಿದ್ದರು. ಹಾಗೆ ಚರ್ಚ್ ಸಭಾಂಗಣದಲ್ಲಿ ಆರಂಭವಾದ ಈ ಶಾಲೆ ನಂತರದ ದಿನಗಳಲ್ಲಿ ಹೆಸಾರಾಂತ ಸಂತ ಮೇರಿಸ್ ವಿದ್ಯಾ ಸಂಸ್ಥೆಯ ಆವರಣದಲ್ಲಿ, ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ಎನ್ನುವ ನಾಮಕರಣದಲ್ಲಿ ಸ್ಥಳಾಂತರ ಮಾಡಲಾಯಿತು.
1998ರಲ್ಲಿ ವಂದನೀಯ ಗುರು ಸ್ಟ್ಯಾನಿ ಬಿ ಲೋಬೊರವರ ವರ್ಗಾವಣೆಗೊಂಡು ಅವರ ಸ್ಥಾನಕ್ಕೆ ವಂದನೀಯ ಜಾನ್ ಬಿ ಕ್ರಾಸ್ತಾರವರು ಸಂಚಾಲಕರಾಗಿ ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಹೋದರು. ನಂತರ 2005ರಲ್ಲಿ ಗುರುಗಳು ವರ್ಗಾವಣೆಗೊಂಡರು. ಮುಂದೆ ವಂದನೀಯ ಗುರುಗಳಾದ ಅ್ಯಂಟನಿ ಲೋಬೊರವರು ಸಂಚಾಲಕರಾಗಿ ಆಗಮಿಸಿದಾಗ, ಅದೇ ಆವರಣದಲ್ಲಿ ಒಂದು ಕಾಲದಲ್ಲಿ ಕುಂದಾಪುರ ಪ್ರೆಸ್ ಕುಂದಾಪುರ ರೋಜರಿ ಚರ್ಚ್ ಆಡಳಿತದಲ್ಲಿ ಇದ್ದ ಕಟ್ಟಡ ಇದ್ದ ಜಾಗದಲ್ಲಿ ಹೋಲಿ ರೋಜರಿ ಶಾಲೆಯ ನೂತನ ಕಟ್ಟಡದ ಶಿಲಾನ್ಯಾಸ ನೆರವೇರಿತು. 2008 ಎಪ್ರಿಲ್ 4ರಂದು ಸುಸಜ್ಜಿತ ಕಟ್ಟದಲ್ಲಿ ಶಾಲೆ ಆರಂಭವಾಯಿತು.
ಸುಮಾರು 25 ವರ್ಷಗಳ ಚರಿತ್ರೆಯನ್ನು ಹೊಂದಿರುವ ಈ ಶಾಲೆಯು ಜೂನ್ 2022 ಹೊತ್ತಿಗೆ ಬೆಳ್ಳಿ ಹಬ್ಬದ ಸಂಭ್ರಮ ಆಚರಿಸಲು ಸಜ್ಜುಗೊಂಡಿದೆ..
25 ವರ್ಷಾಗಳ ಅವಧಿಯಲ್ಲಿ ಸಂಚಾಲಕರಾಗಿ ಸೇವೆ ಸಲ್ಲಿಸಿದ ಗುರುಗಳನ್ನು ಸ್ಮರಿಸಬೇಕಾದುದು ನಮ್ಮ ಆಧ್ಯ ಕರ್ತವ್ಯ ವಂದನೀಯ ಗುರು ಸ್ಟ್ಯಾನಿ ಬಿ ಲೋಬೊ, ವಂದನೀಯ ಗುರು ಜಾನ್ ಬಿ ಕ್ರಾಸ್ತಾ, ವಂದನೀಯ ಗುರು ಆ್ಯಂಟನಿ ಲೋಬೊ, ವಂದನೀಯ ಗುರು ಆಲ್ಬನ್ ಡಿಸೋಜಾ, ವಂದನೀಯ ಗುರು ಅನಿಲ್ ಡಿಸೋಜಾ. ಪ್ರಸ್ತುತ ವಂದನೀಯ ಗುರುಗಳಾದ ಸ್ಟ್ಯಾನಿ ತಾವ್ರೊ ಸಂಚಾಲಕರಾಗಿ ಅಮೂಲ್ಯ ಸೇವೆಯೊಂದಿಗೆ ಹಗಲಿರುಳೆನ್ನದೆ ಶಾಲೆಯ ಶ್ರೇಯೋಭಿವೃದ್ದಿಗೆ ಅವಿರತ ಪ್ರಯತ್ನದಿಂದ ಶ್ರಮಿಸುತ್ತಿದ್ದಾರೆ. ಹತ್ತು ಹಲವು ಯೋಜನೆಗಳ ಅಭಿವೃದ್ದಿಯ ಪಥದಲ್ಲಿದ್ದಾರೆ ಪೂಜ್ಯನೀಯರು.
25 ವರ್ಷಗಳ ಅವಧಿಯಲ್ಲಿ ಸೇವೆ ನೀಡಿದ ಪ್ರಮುಖ ಮುಖ್ಯೋಪಾಧ್ಯಾಯಿನಿಯವರು ಶ್ರೀಮತಿ ರೇಣುಕಾ ರೀನಾ ಸೋನ್ಸ್, ಶ್ರೀಮತಿ ನೈನಾ ಟ್ರೀಜಾ ಪುರ್ಟಾಡೊ, ಶ್ರೀಮತಿ ಕೋನಿ ಮಿನೇಜಸ್ ಮತ್ತು ಸಿಸ್ಟರ್ ಜೊಯ್ಸ್ ಮರಿಯ ಲುವಿಸ್ ಎ.ಸಿ. ಪ್ರಸ್ತುತ ಸಿಸ್ಟರ್ ತೆರೇಜ್ ಶಾಂತಿ ಎ ಸಿ ರವರ ನೇತೃತ್ವದಲ್ಲಿ ಉತ್ತಮ ಮಾರ್ಗದರ್ಶನದಲ್ಲಿ ಸುಮಾರು 20 ಮಂದಿ ಅನುಭವಿ ಅಧ್ಯಾಪಕ ಹಾಗೂ ಅಧ್ಯಾಪಕೇತರ ಸಿಬ್ಬಂಧಿಗಳ ಸೇವೆಯೊಂದಿಗೆ ಸಂಸ್ಥೆ ಯಶಸ್ಸಿನತ್ತ ದಾಪುಗಾಲು ಹಾಕುತ್ತಿದೆ.
ಗುಣಮಟ್ಟದ ವಿದ್ಯಾಬ್ಯಾಸವನ್ನು ನೀಡುತ್ತಾ ಮಕ್ಕಳ ಜೀವನದ ಬೆಳಕಾಗಿ ಯಶಸ್ಸಿನತ್ತ ಹೆಜ್ಜೆಗಳನ್ನು ಹಾಕುತ್ತಾ ಸಾಧನೆಯ ಹಾದಿಯಲ್ಲಿದೆ ಎಂಬುವುದಕ್ಕೆ, ಶಾಲೆಯ ಫಲಿತಾಂಶವೇ ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ. ಇದುವರೆಗೆ ಎಸ್ ಎಸ್ ಎಲ್ ಸಿಯ 16 ತಂಡಗಳು ಉತ್ತಮ ಫಲಿತಾಂಶದೊಂದಿಗೆ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. 2012-13ನೇ ಸಾಲಿನಲ್ಲಿ ಮೊದಲ ಬಾರಿಗೆ 100% ಫಲಿತಾಂಶ ದೊರೆತಿದ್ದು ನಂತರ 2016 ರಿಂದ 2022 ರವರೆಗೆ ಕ್ರಮವಾಗಿ ಸತತ 5 ಬಾರಿ ಶೇಕಡಾ 100% ದಾಖಲೆಯ ಫಲಿತಾಂಶದ ಕೀರ್ತಿ ನಮ್ಮ ಸಂಸ್ಥೆಯ ಮಡಿಲಿನಲ್ಲಿದೆ.
ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳಿಗೆ ಕೇವಲ ಪಠ್ಯವನ್ನು ಮಾತ್ರ ಬೋಧಿಸುತ್ತಿಲ್ಲ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸದಾ ಶ್ರಮಿಸುತ್ತಿದೆ. ಪಠ್ಯೇತರ ಚಟುವಟಿಕೆಗಳಿಂದ ಕರಾಟೆ, ಯೋಗ, ನೃತ್ಯ, ಸಂಗೀತ, ವಿಜ್ಞಾನ ಸಂಘ, ಇಂಟರ್ಯಾಕ್ಟ್, ವೈ.ಎಸ್.ಎಂ, ಪರಿಸರ ಕೂಟ, ಕ್ರೀಡಾ ಸಂಘ ಹೀಗೆ ಹತ್ತು ಹಲವು ಸಂಘಗಳ ಮೂಲಕ ವಿದ್ಯಾರ್ಥಿಗಳು ಕ್ರೀಯಾತ್ಮಕವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ಶೃದ್ದೆ, ಸಂಯಮ, ಹೊಂದಾಣಿಕೆಯ ಮನೋಭಾವ ಮೂಡಿಸುವಲ್ಲಿ ಸಹಕಾರಿಯಾಗಿ ಸ್ಕೌಟ್ಸ್-ಗೈಡ್ಸ್,ರೆಡ್ ಕ್ರಾಸ್, ಬುಲ್-ಬುಲ್, ಕಬ್ಸ್ ತರಬೇತಿ ನೀಡಿ ಅವರನ್ನು ಮುನ್ನೆಡಸಲು ಉತ್ತಮ ಶಿಸ್ತನ್ನು ಅಳವಡಿಸಿಕೊಳ್ಳಲು ಸಂಸ್ಠೆಯು ಸಹಕಾರಿಯಾಗಿದೆ. ಕ್ರೀಡೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಿ ಜಯಗಳಿಸಿ ಈ ವಿದ್ಯಾ ದೇಗುಲದ ಕೀರ್ತಿ ಪತಾಕೆ ಆಕಾಶದೆತ್ತರಕ್ಕೆ ಹಾರಿಸುತ್ತಿದ್ದಾರೆ. ಸುಸಜ್ಜಿತ ಕಟ್ಟಡ, ಉತ್ತಮ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಅಗ್ನಿ ಸುರಕ್ಷತೆ, ವಿಶಾಲವಾದ ತರಗತಿ ಕೋಣೆ, ನುರಿತ ಅಧ್ಯಾಪಕ ವೃಂದ, ಕಂಪ್ಯೂಟರ್ ಲ್ಯಾಬ್, ಕುಡಿಯುವ ನೀರಿನ ವ್ಯವಸ್ಥೆಯೊಂದಿಗೆ ಗುಣಯುತ ಶಿಕ್ಷಣ ನೀಡುತ್ತಾ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದೆ ಈ ಸಂಸ್ಥೆ.
ಈ ರೀತಿ ಎಲ್ಲಾ ರೀತಿಯಿಂದ ನಮ್ಮ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಣ ಪಡೆದಲ್ಲಿ ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನ ಉತ್ತಮವಾಗಿ ರೂಪಿಸಿಕೊಳ್ಳಬಹುದು ಎಂದು ನಮ್ಮ ವಿಶ್ವಾಸ.
-> ಸಂಚಾಲಕರು, ಮುಖ್ಯೋಪಾಧ್ಯಾಯಿನಿ, ಶಿಕ್ಷಕ ವ್ರಂದ




















