ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಮತ್ತು ವಿ.ಕೆ.ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ ಹಮ್ಮಿಕೊಳ್ಳಲಾದ ಸಮ್ಮರ್ ಕ್ಯಾಂಪ್ ‘ಪ್ಯಾಟಿ ಮಕ್ಕಳ್ ಹಳ್ಳಿ ಟೂರ್’ ನ 1ನೇ ದಿನವಾದ ಏಪ್ರಿಲ್ 5 ಶುಕ್ರವಾರದಂದು ಎಲ್ಲಾ ಶಿಬಿರಾರ್ಥಿಗಳು ಶಿಕ್ಷಕರೊಂದಿಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿದರು.
ಮೊದಲಿಗೆ ಉಪ್ಪೂರಿನಲ್ಲಿರುವ ಹಾಲು ಶೇಖರಣಾ ಮತ್ತು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ, ಹಾಲಿನ ಸಂಸ್ಕರಣೆ ಮತ್ತು ಹಾಲಿನ ವಿವಿಧ ಉತ್ಪನ್ನಗಳ ಬಗ್ಗೆ ಅರಿತರು. ಅಲ್ಲಿಂದ ಪೆರ್ಡೂರಿನಲ್ಲಿರುವ ಕ್ಲೇ ಕಾರ್ಟ್ಸ್ ಗೆ ಭೇಟಿ ನೀಡಿ ವಿವಿಧ ರೀತಿಯ ಪಾರಂಪರಿಕ ಮಣ್ಣಿನ ಕಲಾ ಕೃತಿಗಳನ್ನು ವೀಕ್ಷಿಸಿದರು.
ಮಧ್ಯಾಹ್ನದ ಅವಧಿಯಲ್ಲಿ ಮಣಿಪಾಲದ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನದಲ್ಲಿ ವಿವಿಧ ಬಗೆಯ ಮರಗಳ ಬಗ್ಗೆ ಮತ್ತು ಅವುಗಳ ಉಪಯೋಗದೊಂದಿಗೆ ಪರಿಸರ ಕಾಳಜಿಯನ್ನು ಅರಿತರು. ಅಲ್ಲದೇ ವಿವಿಧ ಆಟಗಳನ್ನು ಆಡಿ ಸಂಭ್ರಮಿಸಿದರು. ಎಲ್ಲಾ ಶಿಬಿರಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.