ಬಿಎಂಸಿ ಘಟಕಗಳ ಸ್ಥಾಪನೆಯಿಂದ ಉತ್ತಮ ಗುಣಮಟ್ಟದ ಹಾಲು ;ಎನ್.ಹನುಮೇಶ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಬಿಎಂಸಿ ಘಟಕಗಳ ಸ್ಥಾಪನೆಯಿಂದ ಉತ್ತಮ ಗುಣಮಟ್ಟದ ಹಾಲು ಸಂಗ್ರಹಣೆ ಸಾಧ್ಯವಾಗಿದೆ ಎಂದು ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ಹೇಳಿದರು.
ತಾಲ್ಲೂಕಿನ ನಾರವಮಾಕಲಹಳ್ಳಿ ಗ್ರಾಮದಲ್ಲಿ ಗುರುವಾರ 3 ಸಾವಿರ ಲೀಟರ್ ಮಾಮಥ್ಯದ ನೂತನ ಬಿಎಂಸಿ ಘಟಕ ಉದ್ಘಾಟಿಸಿ ಮಾತನಾಡಿ, ಬಿಎಂಸಿ ಘಟಕಗಳಲ್ಲಿ ಹಾಲನ್ನು ಶೀಥಲೀಕರಣ ಮಾಡುವುದರಿಂದ ಹಾಲಿನ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ತಾಲ್ಲೂಕಿನಲ್ಲಿ ಪ್ರತಿ ದಿನ 55 ಸಾವಿರ ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಹಾಲು ಉತ್ಪಾದಕರಿಗೆ ಲೀಟರ್ ಒಂದಕ್ಕೆ ರೂ.27 ನೀಡಲಾಗುತ್ತಿದೆ. ಪಶು ಆಹಾರವನ್ನು ಮೂಟೆಯೊಂದಕ್ಕೆ ರೂ.25 ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ರೈತರು ಇದರ ಪ್ರಯೋಜನ ಪಡೆದು ಉತ್ತಮ ಗುಣಮಟ್ಟದ ಹಾಲು ಉತ್ಪಾದಿಸಬೇಕು ಎಂದು ಹೇಳಿದರು.
ಹಾಲು ಉತ್ಪಾದಕರು ಯಾವುದೇ ಕಾರಣಕ್ಕೂ ಖಾಸಗಿ ಡೇರಿಗಳಿಗೆ ಹಾಲು ಮಾರಾಟ ಮಾಡಬಾರದು. ಹಾಗೆ ಮಾಡುವುದರಿಂದ ಹಾಲು ಒಕ್ಕೂಟದ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ ಎಂದು ಹೇಳಿದರು.
ಕ್ಯಾಂಪ್ ಕಚೇರಿಯ ಉಪ ವ್ಯವಸ್ಥಾಪಕ ಕೆ.ಎಸ್.ನರಸಿಂಹಯ್ಯ, ವಿಸ್ತರಣಾಧಿಕಾರಿಗಳಾದ ಎಂ.ಜಿ.ಶ್ರೀನಿವಾಸ್, ಎಸ್.ವಿನಾಯಕ ಇದ್ದರು.