ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು.

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ


ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ನ್ಯಾಯಮೂರ್ತಿ ಪ್ರತಿ ವಿಭಾಗದ ಕಾರ್ಯ ವೈಖರಿ ಕುರಿತು ಮಾಹಿತಿ ಪಡೆದರು. ಜಜೌಷಧಿ ಮಾರಾಟ ವಿಭಾಗದಲ್ಲಿ ಔಷಧಗಳ ಮಾರಾಟವನ್ನು ವೀಕ್ಷಿಸಿದರು. ಆಸ್ಪತ್ರೆಯ ಆವರಣದಲ್ಲಿ ಸುತ್ತಾಡಿದ ಅವರು ಸ್ವಚ್ಛ ಪರಿಸರ ನಿರ್ವಹಣೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.
ಆಸ್ಪತ್ರೆ ಸಿಬ್ಬಂದಿಯೊಂದಿಗೆ ಮಾತನಾಡಿ, ವೈದ್ಯರು ಮತ್ತು ದಾದಿಯರು ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಯಾವುದೇ ಕಾರಣಕ್ಕೂ ರೋಗಿಗಳಿಗೆ ನೋವು ಉಂಟುಮಾಡಬಾರದು. ಸರ್ಕಾರಿ ಆಸ್ಪತ್ರೆಗೆ ಸಾಮಾನ್ಯವಾಗಿ ಬಡ ರೋಗಿಗಳು ಬರುತ್ತಾರೆ. ಅವರಿಗೆ ಉತ್ತಮ ಚಿಕಿತ್ಸೆ ನೀಡಬೇಕು ಎಂದು ಹೇಳಿದರು.
ತುರ್ತು ಸಂದರ್ಭಗಳಲ್ಲಿ ಮೊದಲು ಚಿಕಿತ್ಸೆ ನೀಡಿ ಅನಂತರ ಪೇಪರ್ ವರ್ಕ್ ಮಾಡಬೇಕು. ರೋಗಿಗಳೊಂದಿಗೆ ಮಾನವೀಯತೆಯಿಂದ ವರ್ತಿಸಬೇಕು. ನಿರೀಕ್ಷೆಗಳನ್ನು ಬದಿಗಿಟ್ಟು ಕೆಲಸ ಮಾಡಬೇಕು. ವೈದ್ಯರಿಗಿಂತ ವೈದ್ಯಕೀಯ ಸಿಬ್ಬಂದಿ ಹೆಚ್ಚು ಹೊಣೆಗಾರಿಕೆ ಪ್ರದರ್ಶಿಸಬೇಕು. ಆರೋಗ್ಯ ಇಲಾಖೆಯ ಹೃದಯವಂತ ಸಿಬ್ಬಂದಿಯನ್ನು ರೋಗಿಗಳು ಅತ್ಯಂತ ಗೌರವ ಭಾವನೆಯಿಂದ ಕಾಣುತ್ತಾರೆ ಎಂದು ಹೇಳಿದರು.
ಆಸ್ಪತ್ರೆ ಕಾರ್ಯನಿರ್ವಹಣೆ ಬಗ್ಗೆ ರೋಗಿಗಳೊಂದಿಗೆ ಮಾತನಾಡಿದರು. ಅವರ ಸಕಾರಾತ್ಮಕ ಉತ್ತರ ಕೇಳಿಸಿಕೊಂಡು ಸಂತೋಷ ವ್ಯಕ್ತಪಡಿಸಿದರು. ರೋಗಿಗಳು ಹೇಳಿದ ಕೊರತೆ ನೀಗಲು ಪ್ರಯತ್ನಿಸುವ ಭರವಸೆ ನೀಡಿದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ್ ಶೆಟ್ಟಿ, ಸಾರ್ವಜನಿಕ ಸಂಪರ್ಕಾಧಿಕಾರಿ ವಿಘ್ನೇಶ್ ಕುಮಾರ್, ಪ್ರಧಾನ ಸಿವಿಲ್ ನ್ಯಾಯಾಧೀಶ ಎಚ್.ಆರ್.ದೇವರಾಜ್, ತಹಶೀಲ್ದಾರ್ ಶರಿನ್ ತಾಜ್, ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಜೆ.ಸಿ.ನಾರಾಯಣಸ್ವಾಮಿ, ತಾಲ್ಲೂಕು ವೈದ್ಯಾಧಿಕಾರಿ ಡಾ. ಎಂ.ಸಿ.ವಿಜಯ, ಆಸ್ಪತ್ರೆ ಆಡಳಿತಾಧಿಕಾರಿ ಡಾ. ಜಿ.ಎಸ್.ಶ್ರೀನಿವಾಸ್, ಸಿಬ್ಬಂದಿ ಮಹ್ಮದ್ ಅಲಿ, ಪ್ರಕಾಶ್, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ ಇದ್ದರು.