ಸರ್ಕಾರಿ ಪ್ರೌಢಶಾಲೆಗಳಲ್ಲೂ ದಾನಿಗಳ ನೆರವಿಂದ ಹೈಟೆಕ್ ಸೌಲಭ್ಯ : ಕೀಳಿರಿಮೆ ತೊರೆದು ಮಕ್ಕಳನ್ನು ದಾಖಲಿಸಿ-ಪ್ರದೀಪ್‍ಕುಮಾರ್ ಮನವಿ

ಕೋಲಾರ:- ಖಾಸಗಿ ಶಾಲೆಗಳಿಗಿಂತ ಉತ್ತಮ ಸುಸಜ್ಜಿತ ಸೌಲಭ್ಯಗಳುಳ್ಳ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿ ಅವರ ಭವಿಷ್ಯ ಉತ್ತಮ ಪಡಿಸಿ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್‍ಕುಮಾರ್ ಮನವಿ ಮಾಡಿದರು.
ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯ ಸುತ್ತಮುತ್ತಲ ನಾಗಲಾಪುರ, ಚುಂಚುದೇನಹಳ್ಳಿ, ಚೆಲುವನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಶುಕ್ರವಾರ ದಾಖಲಾತಿ ಆಂದೋಲನದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಸರ್ಕಾರಿ ಶಾಲೆಗಳೆಂದರೆ ಪೋಷಕರಲ್ಲಿ ಇರುವ ಕೀಳಿರಿಮೆ ತೊಡೆದು ಹಾಕುವ ಅಗತ್ಯವಿದೆ ಎಂದ ಅವರು, ನೀವು ಭಾವಿಸಿರುವಂತೆ ಇಂದು ಸರ್ಕಾರಿ ಶಾಲೆಗಳಿಲ್ಲ, ಅಲ್ಲಿ ಸುಸಜ್ಜಿತ ಸೌಲಭ್ಯಗಳು ನುರಿತ ಸಂಪನ್ಮೂಲ ವಿಷಯ ಶಿಕ್ಷಕರು ಇದ್ದಾರೆ, ಎಸ್ಸೆಸ್ಸೆಲ್ಸಿ ಫಲಿತಾಂಶವೂ ನಮ್ಮಲ್ಲಿ ಶೇ.100 ಬರುತ್ತಿದೆ ಎಂದು ಮಾಹಿತಿ ನೀಡಿ, ಶಾಲೆಯಲ್ಲಿನ ಸೌಲಭ್ಯ ಗಮನಿಸಲು ಒಮ್ಮೆ ಶಾಲೆಗೆಭೇಟಿ ನೀಡಿ ಎಂದರು.

ಸರ್ಕಾರಿ ಶಾಲೆಯಲ್ಲೂ ಆಂಗ್ಲ ಮಾಧ್ಯಮ


ನಮ್ಮ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮದಲ್ಲಿ 8,9 ಮತ್ತು 10ನೇ ತರಗತಿಯ ಶಿಕ್ಷಣವಿದೆ ಎಂದ ಅವರು, ಆಂಗ್ಲ ಮಾಧ್ಯಮದಲ್ಲಿ ನಿರಂತರ 6 ವರ್ಷಗಳಿಂದಲೂ ಶೇ.100 ಫಲಿತಾಂಶ ಬರುತ್ತಿದೆ ಎಂದು ತಿಳಿಸಿದರು.
ನಮ್ಮ ಶಾಲೆಯಲ್ಲಿ ಸುಸಜ್ಜಿತ ವಿಜ್ಞಾನ ಪ್ರಯೋಗಾಲಯ,ಸಮಾಜವಿಜ್ಞಾನ ಪ್ರಯೋಗಾಲಯವಿದೆ, 4 ಕೊಠಡಿಗಳಲ್ಲಿ ಸುಸಜ್ಜಿತ ಸ್ಮಾರ್ಟ್ ಕ್ಲಾಸ್ ಸೌಲಭ್ಯವನ್ನು ಒದಗಿಸಲಾಗಿದೆ ಎಂದ ಅವರು, ಅತ್ಯುತ್ತಮ ರೀತಿಯಲ್ಲಿ ಕಂಪ್ಯೂಟರ್ ಶಿಕ್ಷಣ ಒದಗಿಸಲು ಅನುವಾಗುವಂತೆ ಸುಂದರ ಕಂಪ್ಯೂಟರ್ ಲ್ಯಾಬ್‍ಅನ್ನು ಸರ್ಕಾರ ಹಾಗೂ ದಾನಿಗಳ ನೆರವಿನಿಂದ ಸಜ್ಜುಗೊಳಿಸಲಾಗಿದೆ ಎಂದರು.
ಸರ್ಕಾರಿ ಸಮವಸ್ತ್ರದ ಜತೆಗೆ ನಿರಂತರ 10 ವರ್ಷಗಳಿಂದ ದಾನಿಗಳ ನೆರವಿನಿಂದ ಮಕ್ಕಳಿಗೆ ಟ್ರ್ಯಾಕ್‍ಸೂಟ್ ಒದಗಿಸಲಾಗುತ್ತಿದೆ, ನಮ್ಮ ಶಾಲೆಗೆ ಬರುವ ಎಲ್ಲಾ ಮಕ್ಕಳಿಗೂ ಸರ್ಕಾರ ನೀಡುವ ಉಚಿತ ಪಠ್ಯ ಪುಸ್ತಕಗಳ ಜತೆಗೆ ಅವರಿಗೆ ದಾನಿಗಳಿಂದ ವರ್ಷಕ್ಕೆ ಅಗತ್ಯವಾದ ಉಚಿತ ನೊಟ್‍ಪುಸ್ತಕ ಒದಗಿಸಲು ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.
ಮಕ್ಕಳಿಗೆ ಶಿಕ್ಷಣದೊಂದಿಗೆ ಯೋಗ,ಧ್ಯಾನಕ್ಕೂ ಅವಕಾಶವಿದೆ, ಕ್ರೀಡಾಸೌಲಭ್ಯವಿದೆ, ಅತ್ಯಂತ ಸುಸಜ್ಜಿತ ಗ್ರಂಥಾಲಯವನ್ನು ದಾನಿಗಳ ನೆರವಿನಿಂದ ಸಜ್ಜುಗೊಳಿಸಲಾಗುತ್ತಿದೆ ಎಂದ ಅವರು, ಪೋಷಕರು ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಲಕ್ಷಾಂತರ ರೂ ಹಣ ಪೋಲು ಮಾಡದೇ ಸರ್ಕಾರಿ ಶಾಲೆಗೆ ದಾಖಲಿಸಲು ಮನವಿ ಮಾಡಿದರು.
ದಾಖಲಾತಿ ಆಂದೋಲನದಲ್ಲಿ ಶಿಕ್ಷಕರಾದ ಸುಗುಣಾ, ಫರೀದಾ,ಶ್ರೀನಿವಾಸಲು,ಡಿ.ಚಂದ್ರಶೇಖರ್ ಹಾಗೂ ಮತ್ತೊಂದು ತಂಡದಲ್ಲಿ ಸಿದ್ದೇಶ್ವರಿ,ಗೋಪಾಲಕೃಷ್ಣ, ಭವಾನಿ, ಶ್ವೇತಾ,ವೆಂಕಟರೆಡ್ಡಿ ಭಾಗವಹಿಸಿದ್ದರು.