ನೇತ್ರದಾನ ಮಾಡುವ ಮೂಲಕ ಅಂದತ್ವ ನಿವಾರಣೆಗೆ ಸಹಕರಿಸಿ – ಎನ್.ಎಮ್.ನಾಗರಾಜ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ ; ಪ್ರಪಂಚದಲ್ಲಿ ಪ್ರತಿಯೊಬ್ಬರು ನೇತ್ರದಾನ ಮಾಡಿದರೆ ಶಾಶ್ವತವಾಗಿ ಅಂಧತ್ವ ನಿರ್ಮೂಲನೆಯಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಮರಣದ ನಂತರ ನೇತ್ರದಾನ ಮಾಡಿ ವಿಶ್ವಕ್ಕೆ ಬೆಳಕಾಗಬೇಕು. ನೇತ್ರದಾನ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎನ್.ಎಮ್.ನಾಗರಾಜ್ ಅವರು ತಿಳಿಸಿದರು.
ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 36ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಕಣ್ಣಿಗೆ ತುಂಬಾ ಮಹತ್ವವಿದೆ. ಆದ್ದರಿಂದ ನೇತ್ರದಾನ ಮಹಾದಾನ ಎಂದು ಕರೆಯುತ್ತಾರೆ. ಕಣ್ಣು ಜ್ಞಾನದ ಮೂಲ ದೇಹದ ಅಂಗಾಂಗಳನ್ನು ದಾನ ಮಾಡುವುದರಿಂದ ಇನೊಬ್ಬ ವ್ಯಕ್ತಿಗೆ ಜೀವನ ನೀಡಬಹುದು ಎಂದು ತಿಳಿಸಿದರು.
ಮನುಷ್ಯ ತುಂಬಾ ಸ್ವಾರ್ತಿಯಾಗಿದ್ದು, ತಾನು ಬದುಕಿದ್ದಾಗ ಯಾವುದನ್ನು ತ್ಯಾಗ ಮಾಡಲು ಇಚ್ಚಿಸುವುದಿಲ್ಲ, ಆದ್ದರಿಂದ ಮರಣದ ನಂತರ ನಿಸ್ವಾರ್ಥವಾಗಿ ಪ್ರತಿಯೊಬ್ಬರು ನೇತ್ರಗಳನ್ನು ದಾನಮಾಡಿ ವ್ಯಕ್ತಿಗಳ ಬಾಳಿಗೆ ಬೆಳಕನ್ನು ನೀಡಬಹುದಾಗಿದೆ. ಸತ್ತ ನಂತರವು ಬದುಕಿರುವ ಅವಕಾಶವನ್ನು ಎಲ್ಲರೂ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ|| ಜಗದೀಶ್ ಅವರು ಮಾತನಾಡಿ, ವ್ಯಕ್ತಿಯು ಮರಣ ಹೊಂದಿದ್ದ ನಂತರವು ಜೀವಂತವಾಗಿರಬೇಕಾದರೆ ಅಂಗಾಗ ದಾನ ಮಾಡಬೇಕು. ಮೆದುಳು ನಿಷ್ಠ್ರೀಯಗೊಂಡಿದ್ದರೆ ಅಂಗಾಗ ದಾನಮಾಡಬಹುದು. ಆದರೆ ಮನುಷ್ಯ ಸತ್ತ ಆರು ಗಂಟೆಯೊಳಗೆ ಕಣ್ಣುಗಳನ್ನು ದಾನಮಾಡಬಹುದು. ರಕ್ತ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಬಿಟ್ಟು ಎಲ್ಲರೂ ನೇತ್ರದಾನ ಮಾಡಬಹುದು. ನೇತ್ರದಾನ ಮಾಡುವುದಕ್ಕಿಂತ ಉತ್ತಮ ಕಾರ್ಯ ಬೇರೆಯೊಂದಿಲ್ಲ. ಅಂಗಾಗ ದಾನ ಮಾಡುವುದರಿಂದ ತುಂಬಾ ಜನರ ಜೀವನಕ್ಕೆ ಬೆಳಕಾಗಬಹುದು ಎಂದು ತಿಳಿಸಿದರು.
ಕಾರ್ಯಕ್ರಮ ಅನುಷ್ಠಾಧಿಕಾರಿಗಳಾದ ಡಾ|| ನಾರಾಯಣಸ್ವಾಮಿ ಅವರು ಮಾತನಾಡಿ, 36ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕವನ್ನು ಆಗಸ್ಟ್ 25 ರಿಂದ ಸೆಪ್ಟೆಂಬರ್ 08ರ ವರೆಗೆ ಆಚರಿಸಲಾಗುತ್ತಿದೆ. ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮನೆ ಮನೆಗಳಿಗೆ ಭೇಟಿ ನೀಡಿ ನೇತ್ರದಾನದ ಬಗ್ಗೆ ಹಾಗೂ ಕಣ್ಣಿನ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವರು. ತಮ್ಮ ಕಣ್ಣುಗಳನ್ನು ದಾನ ಮಾಡುವುದರಿಂದ ಮರಣ ಹೊಂದಿದ್ದ ನಂತರವು ಇನ್ನೊಬ್ಬ ವ್ಯಕ್ತಿಯ ಜೀವನಕ್ಕೆ ಬೆಳಕಾಗಬಹುದು ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ 32 ನೇತ್ರಾ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿದ್ದು, 7 ನೇತ್ರ ಬ್ಯಾಂಕುಗಳು ಸರ್ಕಾರಿ ಸ್ವಾಮ್ಯದಲ್ಲಿದೆ. ಪ್ರತಿ ವರ್ಷ ಸರಾಸರಿ 5,600 ವ್ಯಕ್ತಿಗಳು ನೇತ್ರದಾನ ಮಾಡುತ್ತಿದ್ದಾರೆ. ಅಂದಾಜು 1.25 ಲಕ್ಷ ಜನರು ಕಾರ್ನಿಯಾ ಸಂಬಂಧಿ ಅಂಧತ್ವದಿಂದ ಬಳಲುತ್ತಿದ್ದು, ನೇತ್ರದಾನಕ್ಕಾಗಿ ಕಾಯುತ್ತಿದ್ದಾರೆ. ಒಬ್ಬ ವ್ಯಕ್ತಿ ದಾನ ಮಾಡಿದ ನೇತ್ರಗಳಿಂದ ಇಬ್ಬರು ಕಾರ್ನಿಯಾ ಅಂಧರಿಗೆ ದೃಷ್ಠಿ ಬರುತ್ತದೆ. ನೇತ್ರದಾನ ಮಾಡಲು ವಯಸ್ಸು, ಲಿಂಗ, ಜಾತಿ ರಕ್ತದ ಗುಂಪು ಯಾವುದೇ ಭೇದಬಾವವಿಲ್ಲದೆ ಪ್ರತಿಯೊಬ್ಬರು ಮಾಡಬಹುದು ಎಂದು ತಿಳಿಸಿದರು.
ವ್ಯಕ್ತಿಯು ಮರಣ ಹೊಂದಿದ್ದ ಆರು ಗಂಟೆಯೊಳಗೆ ನೇತ್ರಗಳನ್ನು ಸಂಗ್ರಹಿಸಲಾಗುವುದು. ನೇತ್ರಗಳನ್ನು ಕೇವಲ 20 ನಿಮಿಷಗಳಲ್ಲಿ ಸಂಗ್ರಹಿಸಲಾಗುವುದು. ವ್ಯಕ್ತಿ ಮರಣ ಹೊಂದಿದ್ದ ನಂತರ ಸಹಾಯವಾಣಿ 104 ಗೆ ಕರೆ ಮಾಡಿದರೆ ಆರೋಗ್ಯ ಸಿಬ್ಬಂದಿಯ ತಂಡ ಸ್ಥಳಕ್ಕೆ ಭೇಟಿ ನೀಡಿ ಕಣ್ಣುಗಳನ್ನು ಸಂಗ್ರಹಿಸುವರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಐ.ಇ.ಸಿ ಕರ ಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎನ್.ಎಮ್.ನಾಗರಾಜ್ ಅವರು ತಮ್ಮ ಕಣ್ಣುಗಳನ್ನು ದಾನ ಮಾಡುವುದಾಗಿ ನೋಂದಣಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳಾದ ಡಾ|| ಕಮಲ.ಎಂ., ಅಪರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಪ್ರೇಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.