

ಹಾಸನ: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿ ಘಾಟಿಯ ದೊಡ್ಡತಪ್ಲೆ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮತ್ತೆ ಭಾರೀ ಭೂಕುಸಿತ ಸಂಭವಿಸಿದ್ದು, ಹಲವು ವಾಹನಗಳು ಮಣ್ಣಿನಡಿ ಸಿಲುಕಿವೆ. ಎರಡು ಕಾರು, ಒಂದು ಟ್ಯಾಂಕರ್ ಸೇರಿ ಆರು ವಾಹನಗಳು ಮಣ್ಣನಡಿ ಸಿಲುಕಿವೆ ಎನ್ನಲಾಗಿದೆ.ಸತತ ಮಳೆಯಿಂದ ದೊಡ್ಡತಪ್ಲೆ ಬಳಿ ಭಾರೀ ಪ್ರಮಾಣದ ಭೂ ಕುಸಿತ ಸಂಭವಿಸಿದೆ.
ಈ ಪ್ರದೇಶದಲ್ಲಿ ಕಳೆದ ಹದಿನೈದು ದಿನಗಳಿಂದ ಮಣ್ಣು ಕುಸಿಯುತ್ತಿದೆ. ಇಂದು ಮತ್ತೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದಿದೆ. ಇದೇ ವೇಳೆ ಕಾರಿನಲ್ಲಿ ಸಂಚರಿಸುತ್ತಿದ್ದವರು ಅದರಡಿ ಸಿಲುಕಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ರಕ್ಷಣಾ ಸಿಬ್ಬಂದಿ ಜೆಸಿಬಿ ಮೂಲಕ ಮಣ್ಣು ತೆರವು ಮಾಡುತ್ತಿದ್ದಾರೆ. ಸ್ಥಳದಲ್ಲಿ ಆತಂಕ ಹೆಚ್ಚಾಗಿದೆ. ಮತ್ತಷ್ಟು ಮಣ್ಣು ಕುಸಿದರೆ ದೊಡ್ಡ ಅನಾಹುತವೇ ಸಂಭವಿಸುವ ಭೀತಿ ಎದುರಾಗಿದೆ. ಸಮರೋಪಾದಿಯಲ್ಲಿ ಮಣ್ಣು ತೆರವು ಮಾಡಲು ಪ್ರಯತ್ನಿಸಲಾಗುತ್ತಿದೆ.