ಕೋಲಾರ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರು ಇಂದು ಜಿಲ್ಲಾದ್ಯಂತ ಮಿಂಚಿನ ಸಂಚಾರ ಮಾಡಿ ವಿವಿಧ ಕಾಮಗಾರಿಗಳನ್ನು ಉದ್ಘಾಟನೆ ಮಾಡಿದರು.
ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ 12 ಹಾಸಿಗೆಗಳ ನೂತನ ಕಟ್ಟಡ, ಕೆಜಿಎಫ್ ಸಾರ್ವಜನಿಕ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಿರುವ ಬಿಪಿಹೆಚ್ ಲ್ಯಾಬ್, ಸ್ಟೇಮಿ(STEMI) ಕಾರ್ಡಿಯಾಕ್ ಟೆಲಿ ಯುನಿಟ್, ಬೆಮೆಲ್ನಿಂದ ನಿರ್ಮಿಸಲ್ಪಟ್ಟ ಆಮ್ಲಜನಕ ಘಟಕ ನೂತನ ಆಂಬ್ಯುಲೆನ್ಸ್ಗಳ ಉದ್ಘಾಟನೆ, ಮುಳಬಾಗಿಲು ವೈದ್ಯಕೀಯ ಅಧಿಕಾರಿ ಸಿಬ್ಬಂದಿಗೆ ವಾಸಗೃಹ ಸಮುಚ್ಚಯ, ಸಾರ್ವಜನಿಕ ಆಸ್ಪತ್ರೆ ಹೊರ ರೋಗಿ ಘಟಕ ಸೇರಿದಂತೆ ಹಲವು ಜನೋಪಯೋಗಿ ಸವಲತ್ತುಗಳನ್ನು ಉದ್ಘಾಟಿಸಿದರು.
ವೈದ್ಯರ ಕೊರತೆ ಕುರಿತಾಗಿ ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿ ವೈದ್ಯರ ಖಾಲಿ ಹುದ್ದೆ ತುಂಬಿ ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಿದ್ದು, ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರಿಗೂ ಆರೋಗ್ಯ ಸವಲತ್ತುಗಳನ್ನು ನೀಡುವ ಉದ್ದೇಶವಿದೆ ಎಂದರು.
ಆಸ್ಪತ್ರೆಗಳ ಖಾಲಿ ಹುದ್ದೆ ತುಂಬಲು ಹಲವು ವೈದ್ಯರು ಹಾಗೂ ವೈದ್ಯಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಗುತ್ತಿಗೆ ಆಧಾರದಲ್ಲಿ ಒಂದು ವರ್ಷ ಕಡ್ಡಾಯ ಸೇವೆಯಡಿ ವೈದ್ಯರ ನೇಮಕ ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ. ಜಿಲ್ಲೆಗೆ ಸಮರ್ಪಕ ವೈದ್ಯರನ್ನು ನೀಡಲಾಗಿದೆ. ವೈದ್ಯಾಧಿಕಾರಿಗಳನ್ನು ಆಸ್ಪತ್ರೆಗಳಲ್ಲಿ ನೇಮಿಸಲಾಗಿದೆ. ಈ ಮೂಲಕ ರಾಜ್ಯದ ಪ್ರತಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ ಎಂದರು.
ಬಂಗಾರಪೇಟೆಯಲ್ಲಿ 12 ಹಾಸಿಗೆಗಳ ನೂತನ ಕಟ್ಟಡ ಉದ್ಘಾಟಿಸಲಾಗಿದೆ. ಇಲ್ಲಿಗೆ ಬೇಕಾದ ಸಲಕರಣೆಗಳನ್ನು ಒದಗಿಸಲಾಗುವುದು. ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಬಡವರು ಇಲ್ಲಿ ಪಡೆಯಬಹುದು ಎಂದರು.
ಅತ್ಯಂತ ಕಡಿಮೆ ಖರ್ಚಿನಲ್ಲಿ ಅತ್ಯುತ್ತಮ ಆರೋಗ್ಯ ಸೇವೆ ನೀಡುವುದು ನಮ್ಮ ಸರ್ಕಾರದ ಆಶಯವಾಗಿದ್ದು, ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಈ ಬಗ್ಗೆ ಶ್ರಮವಹಿಸಿ ಯೋಜನೆಗೆ ರೂಪುರೇಷೆ ಸಿದ್ದಪಡಿಸಲಾಗಿದೆ. ಅತೀ ಶೀಘ್ರದಲ್ಲೇ ಉತ್ತಮ ಆರೋಗ್ಯ ವ್ಯವಸ್ಥೆಯನ್ನು ಜನತೆ ನಿರೀಕ್ಷಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಸೆಮಿ ಕಾರ್ಡಿಯಾಕ್ ಟೆಲಿ ಯೂನಿಟ್ನಲ್ಲಿ ಹೃದಯಾಘಾತ ಸಂಭವಿಸಿದ ಯಾವುದೇ ವ್ಯಕ್ತಿ ಆಸ್ಪತ್ರೆಗೆ ಬಂದು ಇಸಿಜಿ ಮಾಡಿಸಿದ 7 ನಿಮಿಷಗಳೊಳಗೆ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯಿಂದ ರೋಗಿಯ ವಿಶ್ಲೇಷಣೆ ನಡೆದು ಸೂಕ್ತ ವೈದ್ಯಕೀಯ ನೆರವು ನೀಡುವ ವ್ಯವಸ್ಥೆ ಆಗಿದ್ದು ಹೃದಯಾಘಾತ ಆದ ನಂತರದ ಗೋಲ್ಡನ್ ಹವನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದಾಗಿದೆ ಎಂದರು.
ಮುಳಬಾಗಿಲು ನಗರದ ಹೊರವಲಯದಲ್ಲಿ ವೇದಿಕೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳನ್ನು ತಕ್ಷಣವೇ ತುಂಬಲು ಕ್ರಮಕೈಗೊಳ್ಳಲಾಗುತ್ತಿದೆ. ಮುಳಬಾಗಲು ತಾಲ್ಲೂಕಿಗೆ 25 ಕೋಟಿಗಳ ವೆಚ್ಚದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ಜನರಿಗೆ ಒಳ್ಳೆಯ ಶಿಕ್ಷಣ ಮತ್ತು ಆರೋಗ್ಯ ನೀಡುವುದು ಸರ್ಕಾರದ ಲಕ್ಷ್ಯವಾಗಿದೆ ಎಂದರು.
ಗರ್ಭದೊಳಗಿನ ಮಗುವಿನಿಂದ ಹಿಡಿದು ಹುಟ್ಟಿದ ಮಗುವಿನ ಬೆಳವಣಿಗೆಗೆ ಅಗತ್ಯವಿರುವ ಪೌಷ್ಠಿಕ ಆಹಾರಗಳು, ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ಕೊಡಬೇಕು. ತಾಯಿ ಮತ್ತು ಮಗುವಿನ ಆರೋಗ್ಯ ಯಾವುದೇ ಸರ್ಕಾರಕ್ಕೆ ಪ್ರಮುಖ ಆದ್ಯತೆಯಾಗಬೇಕು. ಅನೀಮಿಯ ಮುಕ್ತ ಕರ್ನಾಟಕ ನಮ್ಮ ಸರ್ಕಾರದ ಕನಸು ಅನೀಮಿಯವು ಮಕ್ಕಳ ಬೆಳವಣಿಗೆಗೆ ಮಾರಕವಾಗಿದೆ. ಪೋಷಕರಿಗೆ ರಕ್ತ ಹೀನತೆ ಮತ್ತು ಅದರ ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು. ಈ ಕಾರ್ಯಕ್ರಮಕ್ಕಾಗಿ ರೂ.180 ಕೋಟಿಗಳ ವೆಚ್ಚದಲ್ಲಿ ರಾಜ್ಯಾದ್ಯಂತ ಅನೀಮಿಯ ಮುಕ್ತ ಕರ್ನಾಟಕ ಮಾಡಲು ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.
ಮುಳಬಾಗಲು ಶಾಸಕರಾದ ಸಮೃದ್ಧಿ ಮಂಜುನಾಥ್ ಅವರು ಮುಳಬಾಗಿಲು ತಾಲ್ಲೂಕು ಆಸ್ಪತ್ರೆಯನ್ನು ಅಭಿವೃದ್ಧಿ ವಿಚಾರದಲ್ಲಿ ಕಡೆಗಣಿಸಲಾಗಿದೆ. ಮುಳಬಾಗಿಲು ತಾಲ್ಲೂಕು ಅಂತರರಾಜ್ಯ ಹೆದ್ದಾರಿಯನ್ನು ಹೊಂದಿದ್ದು, ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿರುತ್ತವೆ. ತಾಲ್ಲೂಕಿನಲ್ಲಿ ಆಂಬ್ಯುಲೆನ್ಸ್ ಕೊರತೆಯಿರುವುದರಿಂದ ಶಾಸಕರ ಅನದಾನದಿಂದ ಒಂದು ಹೊಸ ಆಂಬ್ಯುಲೆನ್ಸ್ ನೀಡಲಾಗಿದೆ. ವೈಯಕ್ತಿಕವಾಗಿ ಇನ್ನೂ ಮೂರು ಆಂಬ್ಯುಲೆನ್ಸ್ಗಳನ್ನು ಮುಂದಿನ ದಿನಗಳಲ್ಲಿ ನೀಡಲು ಸಂಕಲ್ಪಿಸಲಾಗಿದೆ ಎಂದು ತಿಳಿಸಿದರು. ಇದಕ್ಕೆ ಕೂಡಲೇ ಸ್ಪಂದಿಸಿದ ಮಾನ್ಯ ಸಚಿವರು ರೂ.45 ಕೋಟಿಗಳ ವೆಚ್ಚದಲ್ಲಿ ಹೆದ್ದಾರಿ ಅಪಘಾತಗಳಿಗಾಗಿ 65 ಆಂಬ್ಯುಲೆನ್ಸ್ಗಳನ್ನು ತಕ್ಷಣವೇ ಒದಗಿಸಲಾಗುವುದು. ಈ 65 ಆಂಬ್ಯುಲೆನ್ಸ್ಗಳಲ್ಲಿ ಕೋಲಾರ ಜಿಲ್ಲೆಯಿಂದ ಹಾದುಹೋಗುವ ಹೆದ್ದಾರಿಗಳೂ ಸೇರಿದಂತೆ ತಾಲ್ಲೂಕಿಗೆ ಎರಡರಂತೆ ಆಂಬ್ಯುಲೆನ್ಸ್ಗಳನ್ನು ಮುಂದಿನೊಂದು ವಾರದೊಳಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.
ಸಮಾರಂಭದಲ್ಲಿ ಸಚಿವರೊಂದಿಗೆ ಬಂಗಾರಪೇಟೆ ಶಾಸಕರಾದ ಎಸ್.ಎನ್ ನಾರಾಯಣಸ್ವಾಮಿ ಕೆ.ಎಂ, ಕೆಜಿಎಫ್ ಶಾಸಕರಾದ ಡಾ. ರೂಪಕಲಾ ಎಂ. ಶಶಿಧರ್, ಮಾಲೂರು ಶಾಸಕರಾದ ಸಮೃದ್ಧಿ ಮಂಜುನಾಥ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪದ್ಮ ಬಸವಂತಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾದ ಡಿ. ರಂದೀಪ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜಗದೀಶ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ರಮೇಶ್, ಜಿಲ್ಲಾ ಸರ್ಜನ್ ಡಾ. ವಿಜಯಕುಮಾರ್, ಡಾ ಸುರೇಶ್ ಕುಮಾರ್, ಡಾ. ವಿಜಯಮ್ಮ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವೈದ್ಯಧಿಕಾರಿಗಳು ಹಾಜರಿದ್ದರು.