ಆಂಧ್ರಪ್ರದೇಶದ ರಾಮಸಮುದ್ರಂ ಪಟ್ಟಣದಲ್ಲಿ ಶನಿವಾರ ಏರ್ಪಡಿಸಿದ್ದ ಡಾ. ವೆಂಕಟಾಚಲ ಕ್ಲಿನಿಕ್ ಉದ್ಘಾಟನಾ ಸಮಾರಂಭದಲ್ಲಿ, ಶ್ರೀನಿವಾಸಪುರದ ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ವೆಂಕಟಾಚಲ ಮಾತನಾಡಿದರು.ಶ್ರೀನಿವಾಸಪುರ: ಜನರು ಆರೋಗ್ಯ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು. ಯಾವುದೇ ಭಾಗ್ಯಕಿಂತ ಆರೋಗ್ಯ ಭಾಗ್ಯ ದೊಡ್ಡದು ಎಂಬುದನ್ನು ಮರೆಯಬಾರದು ಎಂದು ಶ್ರೀನಿವಾಸಪುರದ ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ವೆಂಕಟಾಚಲ ಹೇಳಿದರು.
ಸಮೀಪದ ಆಂಧ್ರಪ್ರದೇಶದ ರಾಮಸಮುದ್ರಂ ಪಟ್ಟಣದಲ್ಲಿ ಶನಿವಾರ ಏರ್ಪಡಿಸಿದ್ದ ಡಾ. ವೆಂಕಟಾಚಲ ಕ್ಲಿನಿಕ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನಸಾಮಾನ್ಯರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ, ತಾಲ್ಲೂಕಿನ ಗಡಿ ಸಮೀಪದ ರಾಮಸಮುದ್ರಂನಲ್ಲಿ ಕ್ಲಿನಿಕ್ ತೆರೆದು ಅರ್ಹ ಹಾಗೂ ಅನುಭವಿ ವೈದ್ಯರ ಸೇವೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯದ ಕಡೆ ಹಳ್ಳಿಯಾದ ಗೌನಿಪಲ್ಲಿಯಲ್ಲಿ ಈಗಾಗಲೆ ಸುಸಜ್ಜಿತ ಆಸ್ಪತ್ರೆ ತೆರೆದು ಉತ್ತಮ ವೈದ್ಯಕೀಯ ಸೇವೆ ನೀಡಲಾಗುತ್ತಿದೆ. ಈಗ ಗಡಿ ಅಂಚಿನಲ್ಲಿರುವ ಆಂಧ್ರಪ್ರದೇಶದ ರಾಮಸಮುದ್ರಂನಲ್ಲಿ ಕ್ಲಿನಿಕ್ ಪ್ರಾರಂಭಿಸಲಾಗಿದೆ. ಅದರಿಂದ ಎರಡೂ ಕಡೆಯ ಗಡಿ ಗ್ರಾಮಗಳ ನಾಗರಿಕರಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ. ತುರ್ತು ಸಂದರ್ಭದಲ್ಲಿ ದೂರದ ನಗರಗಳ ಆಸ್ಪತ್ರೆಗಳಿಗೆ ಹೋಗುವ ಕಷ್ಟ ತಪ್ಪುತ್ತದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ಜನರು ಆರ್ಥಿಕ ಸಂಕಷ್ಟದ ನಡುವೆ ತಮ್ಮ ಆರೋಗ್ಯವನ್ನು ಕಡೆಗಣಿಸಿದ್ದಾರೆ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸದ ಪರಿಣಾಮವಾಗಿ, ಅವರು ಏನೆಲ್ಲಾ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ. ಗಡಿ ಭಾಗದಲ್ಲಿ ಸುಸಜ್ಜಿತ ಆಸ್ಪತ್ರೆ ಹಾಗೂ ನುರಿತ ವೈದ್ಯರ ಕೊರತೆಯಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಅಂಥ ಸಂದರ್ಭದಲ್ಲಿ ಕಡಿಮೆ ಖರ್ಚಿನಲ್ಲಿ ಅಗತ್ಯವಾದ ಆರೋಗ್ಯ ಸೇವೆ ಒದಗಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಡಾ. ಶುಭ ಮಾತನಾಡಿ, ಡಾ. ವೆಂಕಟಾಚಲ ಅವರು ವೈದ್ಯ ವೃತ್ತಿಯ ಪ್ರಾರಂಭದಿಂದಲೂ ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ವೈದ್ಯಕೀಯ ಸಂಸ್ಥೆಗಳ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ವೈದ್ಯಕೀಯ ತಿಳುವಳಿಗೆ ಉಂಟುಮಾಡುತ್ತಿದ್ದಾರೆ. ಗಡಿ ಭಾಗದ ಜನರು ವೈದ್ಯಕೀಯ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಗಡಿ ಭಾಗದ ಆಸ್ಪತ್ರೆಯಲ್ಲಿ ನುರಿತ ವೈದ್ಯರ ಸೇವೆಯ ಜತೆಗೆ, ಅನುಭವಿ ವೈದ್ಯಕೀಯ ಸಿಬ್ಬಂದಿ ಇರುತ್ತದೆ. ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ, ಲ್ಯಾಬ್, ಎಕ್ಸ್ರೆ, ಇಸಿಜಿ, ಆಮ್ಲಜನಕ, ಫಿಜಿಯೋಥೆರಪಿ, ಅಂಬುಲೆನ್ಸ್, ತುರ್ತು ಸೇವಾ ಸೌಲಭ್ಯ ಇರುತ್ತದೆ. ವೈದ್ಯ ವಿಜ್ಞಾನ ಕೆಲವೇ ವ್ಯಕ್ತಿಗಳಿಗೆ ಸೀಮಿತವಾದ ರಹಸ್ಯ ಜ್ಞಾನವಾಗಬಾರದು. ತಿಳಿದುಕೊಳ್ಳುವ ಹಕ್ಕು ಎಲ್ಲರಿಗೂ ಇದೆ ಎಂದು ಹೇಳಿದರು.
ಡಾ. ಸಾಗರ್, ಡಾ. ಶಿವಾ, ಡಾ. ಶಶಾಂಕ್, ವೈದ್ಯಕೀಯ ಸಿಬ್ಬಂದಿ ವೆಂಕಟರಾಮ್, ಚೈತ್ರಾ, ಪ್ರಾಂಶುಪಾಲ ಸೀನಪ್ಪ, ಉಪನ್ಯಾಸಕ ಬಿ.ಶ್ರೀನಿವಾಸ್, ಹಿರಿಯ ಗ್ರಂಥಪಾಲಕ ಸೀತರೆಡ್ಡಿ, ನಿವೃತ್ತ ಮುಖ್ಯ ಶಿಕ್ಷಕ ರಾಮಕೃಷ್ಣೇಗೌಡ ಮತ್ತಿತರರು ಇದ್ದರು.