ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ತಾಲ್ಲೂಕಿನ ವಿವಿಧ ಇಲಾಖೆಗಳ ಮುಖ್ಯಸ್ಥರು ಏ.5 ರಂದು ಬಾಬು ಜಗಜೀವನ್ ರಾಮ್ ಜಯಂತಿ ಹಾಗೂ ಏ.14 ರಂದು ಡಾ. ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಸರ್ಕಾರದ ನಿಯಮಾನುಸಾರ ಕಡ್ಡಾಯವಾಗಿ ಆಚರಿಸಬೇಕು ಎಂದು ತಹಶೀಲ್ದಾರ್ ಹನ್ಸಾಮರಿಯ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬಾಬು ಜಗಜೀವನ್ ರಾಮ್ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಕುರಿತು ಚರ್ಚಿಸಲು ಏರ್ಪಡಿಸಲಾಗಿದ್ದ ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಯಂತಿ ಹಿಂದಿನ ದಿನ ರಾತ್ರಿ ಸರ್ಕಾರಿ ಕಚೇರಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಬೇಕು. ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಮಾತನಾಡಿ, ಪಟ್ಟಣದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಸರ್ಕಾರ ಎರಡು ಎಕರೆ ಜಮೀನು ಮಂಜೂರು ಮಾಡಿದೆ. ಕಂದಾಯ ಇಲಾಖೆ ಅಧಿಕರಿಗಳು ಅಂಬೇಡ್ಕರ್ ದಿನಾಚರಣೆ ಒಳಗೆ ಜಮೀನನ್ನು ಪಹಣಿಗೆ ಏರಿಸಬೇಕು. ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲು ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಪೊಲೀಸ್ ಇನ್ಸ್‍ಪೆಕ್ಟರ್ ಸಿ.ರವಿಕುಮಾರ್, ಶಿರಸ್ತೇದಾರ್ ಮನೋಹರ ಮಾನೆ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹುಸೇನ್ ಸಾಬ್, ವಿವಿಧ ಇಲಾಖೆ ಅಧಿಕಾರಿಗಳಾದ ಸುರೇಶ್ ಬಾಬು, ಬಾಲಚಂದ್ರ, ಧನಂಜಯ್, ಶ್ರೀನಿವಾಸನ್, ವಿವಿಧ ದಲಿತ ಸಂಘಟನೆಗಳ ಮುಖಂಡರಾದ ರಾಮಾಂಜನಮ್ಮ, ವರ್ತನಹಳ್ಳಿ ವೆಂಕಟೇಶ್, ತಮ್ಮಯ್ಯ, ನಾರಾಯಣಸ್ವಾಮಿ, ಈರಪ್ಪ, ಶಂಕರ್, ಆಂಜಿ ಇದ್ದರು.