ರಾಮಭಂಟ ಹನುಮನ ದೇವಾಲಯಗಳ ತವರೂರು ಕೋಲಾರದಲ್ಲಿ ಹನುಮದ್ವ್ರತ
ಹನುಮಜಯಂತಿಯಾಗಿ ಆಚರಣೆ-ಎಲ್ಲೆಡೆಯೂ ವಿಶೇಷ ಪೂಜೆ, ಭಜನೆ-ಅನ್ನದಾನ

ಕೋಲಾರ ಹೊರವಲಯದ ಕೊಂಡರಾಜನಹಳ್ಳಿ ವರಪ್ರಸಾದ ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮದ್ವ್ರತ ಅಂಗವಾಗಿ ಸ್ವಾಮಿಗೆ ವಿಶೇಷ ಅಲಂಕಾರ ಮಾಡಿದ್ದು, ಸಹಸ್ರಾರು ಮಂದಿ ದರ್ಶನ ಪಡೆದರು.
ಕೋಲಾರದ ಕಾಳಮ್ಮ ಗುಡಿ ರಸ್ತೆಯಲ್ಲಿನ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮದ್ವ್ರತ ಹಾಗೂ ಹನುಮಜಯಂತಿ ಅಂಗವಾಗಿ ವಿಶೇಷ ಅಲಂಕಾರ,ಪೂಜೆ ನೇತೃತ್ವವನ್ನು ನಡೆಸಲಾಯಿತು.

ಕೋಲಾರ:- ಹನುಮನ ದೇವಾಲಯಗಳ ತವರೂರು ಎಂದೇ ಖ್ಯಾತವಾಗಿರುವ ಕೋಲಾರ ಜಿಲ್ಲೆಯಲ್ಲಿ ಹನುಮದ್ವ್ರತವನ್ನು ಹನುಮಜಯಂತಿಯಾಗಿ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಿದ್ದು, ಆಂಜನೇಯನ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ,ಭಜನೆ, ಅನ್ನದಾಸೋಹ ನಡೆದಿದ್ದು, ಭಕ್ತರ ಸಮೂಹವೇ ಹರಿದು ಬಂತು.
ಹನುಮಂತನಿಗೂ ಕೋಲಾರಕ್ಕೂ ಇರುವ ಸಂಬಂಧ ಆಶ್ಚರ್ಯ ತರಿಸುವಂತದ್ದು, ಏಕೆಂದರೆ ಜಿಲ್ಲೆಯಲ್ಲಿರುವ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಹನುಮಂತ ದೇವಾಲಯಗಳನ್ನು ಗಮನಿಸಿದರೆ ಇಂತದ್ದೊಂದು ಅನುಮಾನ ಕಾಡದಿರದು, ಹನುಮದ್ವ್ರತವಾದ ಇಂದು ಜಿಲ್ಲೆಯಲ್ಲಿ ಹನುಮ ಜಯಂತಿಯಾಗಿ ಆಚರಿಸುವುದು ವಾಡಿಕೆಯಾಗಿದೆ.
ಹನುಮಜಯಂತಿ ಅಂಗವಾಗಿ ಇಂದು ಎಲ್ಲಾ ಹನುಮ ದೇಗುಲಗಳಲ್ಲೂ ವಿಶೇಷ ಪೂಜೆ, ಹೂವಿನ ಅಲಂಕಾರ, ಪ್ರಸಾದ ವಿನಿಯೋಗ,ಭಜನೆ ಮುಂಜಾನೆಯಿಂದಲೇ ನಡೆಯುತ್ತಿದ್ದು, ಸಹಸ್ರಾರು ಮಂದಿ ದೇವಾಲಯಗಳಿಗೆ ತೆರಲಿ ಸ್ವಾಮಿಯ ದರ್ಶನ ಪಡೆದರು.
ಪೌರಾಣಿಕ, ಐತಿಹಾಸಿಕ ಹಿನ್ನೆಲೆಯ ಹತ್ತಾರು ಹನುಮಂತ ದೇವಾಲಯಗಳ ಜೊತೆಗೆ ಹೊಸ ಬಡಾವಣೆಗಳಲ್ಲಿಯೂ ನಿರ್ಮಿಸಲ್ಪಟ್ಟಿರುವ ಅನೇಕ ಹನುಮಂತ ದೇವಾಲಯಗಳು ಕೋಲಾರ ಜಿಲ್ಲೆಯಲ್ಲಿವೆ.
ಗಲ್ಲಿಗೊಂದು ರಸ್ತೆ ಬದಿಯ ಕನಿಷ್ಟ ಪ್ರತಿ 3 ಕಿ.ಮೀ.ಗೊಂದು ಹನುಮನ ದೇವಾಲಯವನ್ನು ಕಾಣಬಹುದಾಗಿದೆ. ನಗರದಲ್ಲಿಯಂತೂ ಹನುಮಾನ್ ಜಯಂತಿಯಂದು ಪ್ರತಿ ರಸ್ತೆಯಲ್ಲಿಯೂ ಪೂಜೆ, ಭಜನೆ, ರಥೋತ್ಸವ ನಡೆಯುತ್ತಿರುವುದು ವಿಶೇಷವೆನಿಸುತ್ತದೆ.


ಹನುಮನ ಪೂಜಿಸಿಯೇ ಕೋಲಾರಕ್ಕೆ ಪ್ರವೇಶ


ಕೋಲಾರ ನಗರವನ್ನು ಬೆಂಗಳೂರು ಕಡೆಯಿಂದ ಪ್ರವೇಶಿಸುವಾಗ ಎಪಿಎಂಸಿ ಮಾರುಕಟ್ಟೆ ಮುಂಭಾಗ ಮೊಟ್ಟ ಮೊದಲಿಗೆ ಸಿಗುವುದೇ ಕೊಂಡರಾಜನಹಳ್ಳಿ ಆಂಜನೇಯಸ್ವಾಮಿ ದೇವಾಲಯ.
ಕೋಲಾರದಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸುವ ಭಕ್ತಾಧಿಗಳು ಕೊಂಡರಾಜನಹಳ್ಳಿ ಆಂಜನೇಯನಿಗೆ ಕೈಮುಗಿದು ಮುಂದೆ ಸಾಗಿದರೆ ಕೋಲಾರಕ್ಕೆ ಬರುವವರು ಕೊಂಡರಾಜನ ಹನುಮಂತನಿಗೆ ನಮಿಸಿಯೇ ಪ್ರವೇಶಿಸುವ ವಾಡಿಕೆ ಇದೆ.


ಹನುಮಜಯಂತಿ ಎಲ್ಲೆಡೆಯೂ ಪೂಜೆ


ಕೋಲಾರದ ಬಸ್ ನಿಲ್ದಾಣ ಪಕ್ಕದಲ್ಲಿಯೇ ಇರುವ ಕೀಲುಕೋಟೆ ಆಂಜನೇಯ ಸ್ವಾಮಿ ದೇವಾಲಯ, ಅಲ್ಲಿನ ನೂರು ಮೀಟರ್ ಅಂತರದಲ್ಲಿ ಶಾರದಾ ಚಿತ್ರಮಂದಿರ ರಸ್ತೆಯಲ್ಲಿರುವ ವಕ್ಕಲೇರಿ ಆಂಜನೇಯಸ್ವಾಮಿ ದೇವಾಲಯ, ಇದರ ಮಂದಿನ ರಸ್ತೆಯ ಬ್ರಾಹ್ಮಣರ ಬೀದಿಯಲ್ಲಿರುವ ದೊಡ್ಡಾಂಜನೇಯಸ್ವಾಮಿ ದೇವಾಲಯ, ಗಾಣಿಗರ ಬೀದಿಯ ಆಂಜನೇಯಸ್ವಾಮಿ ದೇವಾಲಯ, ಹಳೇ ಅಂಚೆ ಕಚೇರಿ ಸಮೀಪ ಇರುವ ಕೋಟೆ ಬಾಗಿಲು ಪಂಚಮುಖಿ ಆಂಜನೇಯಸ್ವಾಮಿ ದೇವಾಲಯ, ನಚಿಕೇತ ನಿಲಯದ ಮುಂಭಾಗ ಪೆಟ್ರೋಲ್ ಬಂಕ್ ಪಕ್ಕದಲ್ಲಿರುವ ಖೀಲೇ ಆಂಜನೇಯಸ್ವಾಮಿ ದೇವಾಲಯ, ಕುರುಬರ ಪೇಟೆ ಆಂಜನೇಯಸ್ವಾಮಿ ದೇವಾಲಯ, ಅಮ್ಮವಾರಿಪೇಟೆ ಆಂಜನೇಯಸ್ವಾಮಿ ದೇವಾಲಯ, ಯುವಜನ ಕೇಂದ್ರದ ಬಳಿ ಇರುವ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯ,ಎಸ್ಪಿ ಕಚೇರಿ ಮುಂಭಾಗದ ದೇವಾಲಯ, ಪಶುಪಾಲನಾ ಇಲಾಖೆಯ ಆವರಣದಲ್ಲಿರುವ ಆಂಜನೇಯಸ್ವಾಮಿ ದೇವಾಲಯ, ಗಲ್‍ಪೇಟೆಯ ಉಪ್ಪರ ಬೀದಿಯಲ್ಲಿರುವ ಆಂಜನೇಯ ದೇವಾಲಯ, ಮುಂತಾದ ದೇಗುಲಗಳಲ್ಲಿ ಹನುಮಜಯಂತಿ ಅಂಗವಾಗಿ ವಿಶೇಷ ಪೂಜೆ ನಡೆಯಿತು.
ಎಲ್ಲಾ ಕಡೆಗಳಲ್ಲೂ ಸ್ವಾಮಿಯನ್ನು ವಿಶೇಷವಾಗಿ ಹೂಗಳಿಂದ ಅಲಂಕರಿಸಿದ್ದು, ಮುಂಜಾನೆಯಿಂದಲೇ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.