ಕುಂದಾಪುರ, ಜ.6; ಹಂಗಳೂರಿನ ಹತ್ತನೇ ಸಂತ ಪಿಯೂಸ್ ದೇವಾಲಯದ ವಾರ್ಷಿಕ ಹಬ್ಬದ ಪ್ರಯುಕ್ತ ಜನವರಿ 5 ರಂದು ಸಹೋದರತೆಯ ಭಾಂದವ್ಯದ ಭಾನುವಾರವನ್ನು ಧರ್ಮಕೇಂದ್ರದ ಧರ್ಮಗುರು ವಂ. ಆಲ್ಬರ್ಟ್ ಕ್ರಾಸ್ತಾ ಇವರ ಮೇಲ್ವಿಚಾರಣೆಯಲ್ಲಿ ಆಚರಿಸಲಾಯಿತು.
ಬೈಂದೂರು ಧರ್ಮಕೇಂದ್ರದ ಸಹಾಯಕ ಧರ್ಮಗುರು ವಂದನೀಯ ಜೊಸ್ವಿನ್ ಪಿರೇರಾ ಇವರ ನೇತೃತ್ವದಲ್ಲಿ ದಿವ್ಯ ಬಲಿ ಪೂಜೆ, ಪರಮ ಪವಿತ್ರ ಪ್ರಸಾದದ ಮೆರವಣಿಗೆ ಹಾಗೂ ಪರಮ ಪ್ರಸಾದದ ಆರಾಧನೆ ನಡೆಯಿತು.
“ಪ್ರಭು ಯೇಸು ಕ್ರಿಸ್ತರ ಪ್ರೀತಿಯ ದೂತರಾಗೋಣ” ಎಂಬ ಸುವಾರ್ತೆಯ ಸಂದೇಶದೊಂದಿಗೆ ಅವರು ಪ್ರಭು ಯೇಸು ಕ್ರಿಸ್ತರ ನಿಸ್ಕಳಂಕ ಪ್ರೀತಿಯ ಬಗ್ಗೆ ಅವರು ಪ್ರಸಂಗವನ್ನಿತ್ತರು. ಭಕ್ತಿಯಿಂದ ಗೀತೆಗಳನ್ನು ಹಾಡುತ್ತಾ, ಪರಮ ಪ್ರಸಾದದ ಭವ್ಯ ಮೆರವಣಿಗೆಯನ್ನು ಮಾಡಲಾಯಿತು.
ಪಾಲನಾ ಮಂಡಳಿಯ ಉಪಾಧ್ಯಕ್ಷರು ಶ್ರೀ ಜೇಮ್ಸ್ ಡಿಮೆಲ್ಲೊರವರು ವಂದನೀಯ ಜೊಸ್ವಿನ್ ರವರಿಗೆ ಉಪಕಾರ ಸ್ಮರಣೆಯೊಂದಿಗೆ ಹೂಗುಚ್ಛ ನೀಡಿ ಗೌರವಿಸಿದರು. ಪಾಲನಾ ಮಂಡಳಿಯ ಕಾರ್ಯದರ್ಶಿ ಶ್ರೀಮತಿ ರೇಷ್ಮಾ ಡಿಸೋಜರವರು ಈ ಅಧ್ಯಾತ್ಮಿಕ ಕಾರ್ಯಕ್ರಮ ಸುಸೂತ್ರವಾಗಿ ನೆರವೇರಲು ಸಹಕರಿಸಿದ ಸರ್ವರನ್ನು ಸ್ಮರಿಸಿ ಧನ್ಯವಾದವಿತ್ತರು. ಎಲ್ಲವೂ ಸುಸೂತ್ರವಾಗಿ ನೆರವೇರಲು ಪಾಲನಾ ಮಂಡಳಿಯ ಸದಸ್ಯರು, ಗುರಿಕಾರರು, ಸಂಘ ಸಂಸ್ಥೆಗಳ ಸದಸ್ಯರು, ಧರ್ಮಕೇಂದ್ರದ ಸದಸ್ಯರು ಸಹಕರಿಸಿದರು. ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.