ಮಕ್ಕಳಿಗೆ ಕರಕುಶಲ ವಸ್ತು ಪ್ರಾತ್ಯಕ್ಷಿತೆ ಮತ್ತು ಮಾಹಿತಿ ಶಿಬಿರ


ಜಾಗತೀಕರಣದಿಂದ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಉಂಟಾಗಿ ನಮ್ಮ ಕುಟುಂಬ ವ್ಯವಸ್ಥೆಯಲ್ಲಿ ಅತೀವ ಬದಲಾವಣೆ ಕಾಣುತ್ತಿದ್ದು, ಅನೇಕ ಪದ್ಧತಿ, ಸಂಪ್ರಾದಾಯ, ರೀತಿ-ನೀತಿ, ಹಬ್ಬ-ಹರಿದಿನದ ಔಚಿತ್ಯ ಸಂಪೂರ್ಣ ಅವಸಾನಗೊಂಡಿದೆ. ಅದರೊಂದಿಗೆ ನಮಗೆ ಸಮಯ ಸದ್ವಿನಿಯೋಗ ಮಾಡುವ ಯಾವುದೇ ಪರಿಪಾಠ ಶಾಲೆಯಲ್ಲಿ ಸಿಗುತ್ತಿಲ್ಲ. ಇಂತಹ ಪ್ರವೃತ್ತಿಯನ್ನು ಬೆಳೆಸುವ ಪ್ರಯತ್ನವೇ ಮಕ್ಕಳಿಗೆ ಕರಕುಶಲ ವಸ್ತು ಪ್ರಾತ್ಯಕ್ಷಿತೆ ಮತ್ತು ಮಾಹಿತಿ ಶಿಬಿರ ಆಗಿರುತ್ತದೆ. ಇದರಿಂದ ಮಕ್ಕಳಲ್ಲಿ ಏಕಾಗ್ರತೆ ಮತ್ತು ಹೊಂದಾಣಿಕೆ ಮನೋಭಾವನೆ ಬೆಳೆದು ಸೌಹಾರ್ದತೆ ಬೆಳೆಯುತ್ತದೆ ಎಂದು ಲಯನ್ ಶ್ರೀ ವಸಂತ್ ಶೆಟ್ಟಿ, ಅಧ್ಯಕ್ಷರು ಲಯನ್ಸ್ ಕ್ಲಬ್ ಆರ್ಡಿ ಬೆಳ್ವೆ ಗೋಳಿಯಂಗಡಿ ಇವರು ಹೇಳಿದರು.
ಅವರು ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ ಬಾಳ್ಕುದ್ರು ಹಂಗಾರಕಟ್ಟೆ ಲಯನ್ಸ್ ಕ್ಲಬ್ ಆರ್ಡಿ ಬೆಳ್ವೆ ಗೋಳಿಯಂಗಡಿ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಬೆಳ್ವೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ಮಕ್ಕಳಿಗೆ ಕರಕುಶಲ ವಸ್ತು ಪ್ರಾತ್ಯಕ್ಷಿತೆ ಮತ್ತು ಮಾಹಿತಿ ಶಿಬಿರ 2022 ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಲಯನ್ ಶ್ರೀ ರಾಜೇಂದ್ರ ಕಿಣಿ, ಸ್ಥಾಪಕಾಧ್ಯಕ್ಷರು, ಲಯನ್ಸ್ ಕ್ಲಬ್ ಆರ್ಡಿ ಬೆಳ್ವೆ ಗೋಳಿಯಂಗಡಿ ಮಾತಾಡಿ ಮಕ್ಕಳಲ್ಲಿ ಸೃಜನಶೀಲತೆಯನ್ನು ಶಾಲಾ ಹಂತದಲ್ಲೇ ಬೆಳೆಸುವುದು. ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಒಂದು ದಿನದಲ್ಲಿ ಕಲಿಸುವ ಕರಕುಶಲ ವಸ್ತು ತಯಾರಿಕೆ ಮುಂದೆ ಜೀವನೋಪಾಯಕ್ಕೆ ಪೂರಕವಾಗಲಿದೆ. ಅದರಲ್ಲೂ ಮುಖ್ಯವಾಗಿ ಉಬ್ಬು ಶಿಲ್ಪ, ಸ್ಪಂಜಿನಿಂದ ಕಲಾಕೃತಿ, ಪೇಪರ್ ಬ್ಯಾಗ್ ಇನ್ನಿತರ ಕಲಾಕೃತಿ ತಯಾರಿಕೆಯಲ್ಲಿ ಅಭೂತಪೂರ್ವ ಗಮನ ಕೇಂದ್ರಿಕೃತವಾಗಿ ಸಹನಾಶೀಲತೆ, ಏಕಾಗ್ರತೆ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.
ಸಭಾಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ಗಣಪು ನಾಯ್ಕ್ ನಿರ್ವಹಿಸಿ ಇಂತಹ ಮಾಹಿತಿ ಶಿಬಿರಗಳಿಂದ ನಮ್ಮಲ್ಲಿರುವ ಕಲಾತ್ಮಕತೆ ಅನಾವರಣಗೊಳ್ಳುತ್ತದೆ. ಮಕ್ಕಳ ಪ್ರತಿಭೆ ಹಾಗೂ ಕೌಶಲ್ಯ ಸಾಕಾರಗೊಳಿಸಲು ಇದು ತುಂಬಾ ಸಹಕಾರಿ ಎಂದು ಅಭಿಪ್ರಾಯಪಟ್ಟರು. ಸಭೆಯಲ್ಲಿ ಶ್ರೀ ಜಯರಾಮ್ ಶೆಟ್ಟಿ, ಅಧ್ಯಕ್ಷರು ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಬೆಳ್ವೆ, ಲಯನ್ ಶ್ರೀ ಅಣ್ಣಯ್ಯ ಶೆಟ್ಟಿ, ಕಾರ್ಯದರ್ಶಿ, ಲಯನ್ಸ್ ಕ್ಲಬ್ ಆರ್ಡಿ ಬೆಳ್ವೆ ಗೋಳಿಯಂಗಡಿ, ಲಯನ್ ಶ್ರೀ ಬಾಬು ಶೆಟ್ಟಿ, ಕೋಶಾಧಿಕಾರಿ, ಲಯನ್ಸ್ ಕ್ಲಬ್ ಆರ್ಡಿ ಬೆಳ್ವೆ ಗೋಳಿಯಂಗಡಿ, ಶ್ರೀಮತಿ ಜಯಶ್ರೀ ಮುಖ್ಯ ಶಿಕ್ಷಕರು ಸರಕಾರಿ ಮಾ.ಹಿ.ಪ್ರಾ ಶಾಲೆ, ಬೆಳ್ವೆ, ಶ್ರೀಮತಿ ಚಂದ್ರಕಲಾ, ಶ್ರೀಮತಿ ತೀರ್ಥಕಲಾ, ಶ್ರೀ ರಮೇಶ್ ವಕ್ವಾಡಿ ಕಾರ್ಯದರ್ಶಿ ಅಭಿವೃದ್ಧಿ ಸಂಸ್ಥೆ (ರಿ), ಹಂಗಾರಕಟ್ಟೆ, ಬೆಳ್ವೆಯ ಖ್ಯಾತ ಉದ್ಯಮಿ ಮಹಮ್ಮದ್ ಮುಸ್ತಾಕ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಕು| ಅನಿಶಾ ಪೇತ್ರಿ ಉದ್ಘಾಟಿಸಿ, ರಮೇಶ್ ವಕ್ವಾಡಿ ಪ್ರಾಸ್ತಾವನೆ ಮಾಡಿ, ಶ್ರೀಮತಿ ಜಯಶ್ರೀ ಮುಖ್ಯ ಶಿಕ್ಷಕರು ಸ್ವಾಗತಿಸಿದರು. ಸುಮಾರು 68 ವಿದ್ಯಾರ್ಥಿಗಳು ಈ ಶಿಬಿರದಿಂದ ಪ್ರಯೋಜನ ಪಡೆದರು.