ಕೃಷಿ ಕಾಯಿದೆಗಳ ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರ ಮೇಲಿನ ಕೇಂದ್ರ ಸರ್ಕಾರದ ದೌರ್ಜನ್ಯ ಖಂಡಿಸಿ ರೈತರಿಂದ ಹಂಚಾಳ ಗೇಟ್ ಬಂದ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಬಂಗಾರಪೇಟೆ: ಕೃಷಿ ಕಾಯಿದೆಗಳ ವಿರುದ್ಧ ಸತತ 2 ತಿಂಗಳಿಂದ ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರ ಮೇಲಿನ ಕೇಂದ್ರ ಸರ್ಕಾರದ ದೌರ್ಜನ್ಯವನ್ನು ಖಂಡಿಸಿಸ ರೈತಸಂಘದಿಂದ ಮಡಿಕೆಗಳು ಮತ್ತು ಮುಳ್ಳು ತಂತಿಯ ಸಮೇತ ಹಂಚಾಳ ಗೇಟ್ ಬಂದ್ ಮಾಡಿ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಲಾಯಿತು.
ಹೋರಾಟದ ನೇತೃತ್ವವಹಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಜಾರಿಗೆ ಬರುವ ಸರ್ಕಾರಗಳು ಇಂದು ಪ್ರಜಾಪ್ರಭುತ್ವದ ವಿರೋಧಿಯಾಗಿ ಕಾರ್ಪೊರೇಟ್ ಕಂಪನಿಗಳ ಅಂಬಾನಿ ಅದಾನಿಯ ಶ್ರೀಮಂತರ ಪಟ್ಟಿಗೆ ಸೇರಿಸುವ ಸರ್ಕಾರಗಳಾಗಿ ಮಾರ್ಪಟ್ಟು ದೇಶವನ್ನು ಖಾಸಗೀಕರಣ ಮಾಡಿ ಹೋರಾಟ ನಿರತ ರೈತರಿಗೆ ಅನ್ನ, ನೀರು, ವಿದ್ಯುತ್ ಕಡಿತ ಮಾಡಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳನ್ನು ಜಾರಿಗೆ ತಂದು ಸತ್ಯಹರಿಶ್ಚಂದ್ರರಂತೆ ಮಾತುಗಳನ್ನಾಡುವ ಇವರ ಆಡಳಿತ ಹಿಂದಿನ ಕಾಲದ ಬ್ರಿಟೀಷ್ ಆಳ್ವಿಕೆಗೂ ಇವರಿಗೂ ಯಾವುದೇ ವ್ಯತ್ಯಾಸವಿಲ್ಲ.
ಅವರು ದೇಶವನ್ನು ಲೂಟಿ ಮಾಡಿದರೆ ದೇಶವನ್ನೇ ಮಾರಾಟಕ್ಕಿಟ್ಟಿದ್ದಾರೆ. ಅಚ್ಛೇ ದಿನ್ ಅಚ್ಛೇ ದಿನ್ ಎಂದು ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ನಾಶ ಮಾಡುವ ಜೊತೆಗೆ ನಿರುದ್ಯೋಗ ಸಮಸ್ಯೆಯನ್ನು ದಿನೇದಿನೇ ಹೆಚ್ಚಿಸಿ ರೈತರು ಮತ್ತು ಪ್ರಜ್ಞಾವಂತ ಯುವಕರನ್ನು ಬೀದಿಗೆ ತಳ್ಳುವ ಕಾಯಿದೆಗಳನ್ನು ಜಾರಿಗೆ ತರುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಮಾತನಾಡಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರಚನೆ ಮಾಡಿರುವ ಸಂವಿಧಾನದಲ್ಲಿ ಭಾರತದ ಪ್ರತಿಯೊಬ್ಬ ಪ್ರಜೆಯೂ ತನ್ನ ಹಕ್ಕನ್ನು ಕೇಳುವ ಸ್ವಾತಂತ್ರ್ಯವಿದೆ. ಆದರೆ ಕೇಂದ್ರ ಸರ್ಕಾರ ನಾನೇ ರಾಜ, ನಾನೇ ಮಂತ್ರಿ ಎಂಬಂತೆ ದೆಹಲಿಯಲ್ಲಿ ಐತಿಹಾಸಿಕ ಹೋರಾಟ ನಡೆಸುತ್ತಿರುವ ಲಕ್ಷಾಂತರ ರೈತರ ಹೋರಾಟವನ್ನು ಧಮನ ಮಾಡಲು ಕೇಂದ್ರ ಸರ್ಕಾರ ರೈತರ ಹೋರಾಟದ ಜಾಗದಲ್ಲಿ ಮುಳ್ಳುತಂತಿಗಳು, ಸಿಮೆಂಟ್ ತಡೆಗೋಡೆಗಳು ಬ್ಯಾರಿಕೇಡ್‍ಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಿ ಬಂಧಿಖಾನೆಗಳನ್ನಾಗಿ ಮಾಡುವುದು ಪ್ರಜಾಪ್ರಭುತ್ವದ ವಿರೋಧಿ ನೀತಿಯಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಜನಾಭಿಪ್ರಾಯವಿಲ್ಲದ 3 ಕಾಯಿದೆಗಳನ್ನು ವಾಪಸ್ ಪಡೆಯಲು ಹಠಮಾರಿತನ ಮಾಡುತ್ತಿರುವ ಕೇಂದ್ರ ಸರ್ಕಾರದ ಮಾನ್ಯ ನರೇಂದ್ರ ಮೋದೀಜಿಯವರು ಅಂದಿನ ಸರ್ಕಾರದ ವಿರೋಧ ಪಕ್ಷವಾಗಿದ್ದಾಗ ಕೃಷಿ ಕಾಯ್ದೆಗಳಿಗೆ ವಿರೋಧ ವ್ಯಕ್ತಪಡಿಸಿ ಈಗ ಸಮರ್ಥಿಸಿಕೊಳ್ಳುವುದು ಯಾವ ನ್ಯಾಯ. ಗ್ರಾಮೀಣ ಪ್ರದೇಶಗಳ ಜೀವನಾಡಿಯಾದ ಶೇ.90 ಭಾಗ ಕೃಷಿಯನ್ನೇ ನಂಬಿರುವ ರೈತರಿಗೆ ಭೂ ಒಡೆತನ ಕಳೆದುಕೊಳ್ಳುವ ಭೀತಿಯ ಜೊತೆಗೆ ಕೊಳವೆಬಾವಿಗಳಿಗೆ ಸಿಮ್‍ಕಾರ್ಡ್ ಅಳವಡಿಸಿ ಕರೆನ್ಸಿ ಹಾಕಿಸಿಕೊಳ್ಳುವ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರದ ಈ ನೀತಿ ಯಾವ ಲೆಕ್ಕ.
ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಏರುಪೇರಾಗುತ್ತಿರುತ್ತದೆ. ಹಾಕಿದ ಬಂಡವಾಳ ಕೈಗೆ ಬರದ ಸಮಯಗಳು ಹೆಚ್ಚಾಗಿರುತ್ತವೆ. ಈ ಯಾವುದನ್ನೂ ಪರಿಶೀಲನೆ ಮಾಡದೆ ಅಂಬಾನಿ, ಅದಾನಿಗೆ ದೇಶವನ್ನು ಅಡವಿಟ್ಟಿರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಸತತ ಹೋರಾಟಕ್ಕೆ ಮಣಿದು ಕಾಯ್ದೆಗಳನ್ನು ವಾಪಸ್ ಪಡೆಯದೇ ಇದ್ದರೆ ದೇಶಾದ್ಯಂತ ಮುಂದಿನ ದಿನಗಳಲ್ಲಿ ಆಡಳಿತಾರೂಢ ಪಕ್ಷವನ್ನು ಸಂಪೂರ್ಣವಾಗಿ ಕಿತ್ತು ಎಸೆಯುವ ಪ್ರತಿಜ್ಞೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಹೋರಾಟದಲ್ಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ನಳಿನಿ.ವಿ, ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಮುನ್ನಾ, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಹಸಿರುಸೇನೆ ಜಿಲ್ಲಾಧ್ಯಕ್ಷ ಕಿರಣ್, ತಾಲೂಕು ಅಧ್ಯಕ್ಷ ಚಲಪತಿ, ಜಿಲ್ಲಾ ಉಪಾಧ್ಯಕ್ಷ ಚಾಂದ್‍ಪಾಷ, ವಡಗೂರು ಮಂಜು, ಕಿಶೋರ್ ನಂಗಲಿ, ಸುಪ್ರೀಂಚಲ, ಜಮೀರ್‍ಪಾಷ, ವಟ್ರಕುಂಟೆ ಆಂಜಿನಪ್ಪ, ತೆರ್ನಹಳ್ಳಿ ಆಂಜಿನಪ್ಪ, ಮಹಮದ್ ಬುರಾನ್, ಬಾಬಾಜಾನ್, ಘೌಸ್ ಪಾಷ, ಜಾವೀದ್, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ, ಅಶ್ವತಪ್ಪ, ಮಹೇಶ್, ರಾಜ್ಯ ಸಂಚಾಲಕ ಅನಿಲ್, ಮಹಮದ್ ಶೊಯೀಬ್ ಮತ್ತಿತರರು ಉಪಸ್ಥಿತರು.