

ಕುಂದಾಪುರ: ನವೆಂಬರ್ 6ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ರಕ್ಷಕ ಶಿಕ್ಷಕರ ಸಭೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎನ್.ಎಸ್.ಸದಾನಂದ ಕಾಮತ್ ಮಾತನಾಡಿ ಮಕ್ಕಳನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯುವ ಜವಾಬ್ದಾರಿ ಪ್ರತಿಯೊಬ್ಬ ಪೋಷಕರ ಮೇಲಿದೆ. ಸಮಾಜದಲ್ಲಿ ಮಕ್ಕಳು ಚೆನ್ನಾಗಿ ಭವಿಷ್ಯ ರೂಪಿಸಿಕೊಳ್ಳಬೇಕೆಂಬ ಆಸೆ ಪ್ರತಿ ಪೋಷಕರ ಮನಸಲ್ಲಿ ಇರುತ್ತದೆ. ಆದರೆ ಅವರ ಜವಾಬ್ದಾರಿ ಕೇವಲ ಶಿಕ್ಷಣ ಕೊಡಿಸುವುದರಲ್ಲಿ ಮುಗಿಯುವುದಿಲ್ಲ. ಬದಲಾಗಿ ಮಕ್ಕಳು ತಪ್ಪು ದಾರಿಗೆ ಹೋಗದಂತೆ ಅವರ ಜೊತೆ ನಿಂತು ತಪ್ಪುಗಳು ಆಗದಂತೆ ತಿದ್ದಿ ಬುದ್ಧಿ ಹೇಳಿ ಅವರಲ್ಲಿ ಸಾಮಾಜಿಕ ಸಂಸ್ಕಾರವನ್ನು ಕಲಿಸುವ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಂಡಾರ್ಕಾರ್ಸ್ ಆಡಳಿತ ಮಂಡಳಿಯ ಸದಸ್ಯರಾದ ಯು.ಎಸ್.ಶೆಣೈ ಅವರು ಮಾತನಾಡಿ ಕಾಲೇಜಿನ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ತಮ್ಮ ವ್ಯಕ್ತಿತ್ವವನ್ನು ವಿದ್ಯಾರ್ಥಿಗಳು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಪೋಷಕರ ಪ್ರಶ್ನೆಗಳಿಗೆ ಉತ್ತರಿಸಿದರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಸತ್ಯನಾರಾಯಣ ಸ್ವಾಗತಿಸಿದರು. ಉಪನ್ಯಾಸಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ದುರ್ಗಾ ಪ್ರಸಾದ್ ಮಯ್ಯ ವಂದಿಸಿದರು.

