JANANUDI.COM NETWORK EDITOR : BERNARD D’COSTA
ಕುಂದಾಪುರ,7: ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ 6 ರಂದು ಶಾಲಾ ರಕ್ಷಕ ಶಿಕ್ಷಕ ಸಭೆ ನಡೆಯಿತು. ಇದರ ಅಧ್ಯಕ್ಷತೆಯನ್ನು ಶಾಲೆಯ ಜಂಟಿ ಕಾರ್ಯದರ್ಶಿಯಾದ ಅ| ವಂ| ಧರ್ಮಗುರು ಸ್ಟ್ಯಾನಿ ತಾವ್ರೊ ವಹಿಸಿದ್ದರು. ಅವರು “ಮಕ್ಕಳ ಸರ್ವತೋಮುಖ ಬೆಳವಣಿಗೆಯಾಗುವಲ್ಲಿ ಪೋಷಕರು ಮತ್ತು ಶಿಕ್ಷಕರು ಸಮಾನ ಪಾತ್ರವನ್ನು ವಹಿಸಿಕೊಳ್ಳ ಬೇಕಾಗಿದೆಯೆಂದು” ಪೋಷಕರಿಗೆ ಅಮೂಲ್ಯ ಮಾಹಿತಿ ನೀಡಿ ಪೋಷಕರಿಂದಲೂ ಮಾಹಿತಿ ಕಲೆ ಹಾಕಿದರು.
“ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನನ್ನು ತಾನು ಗುರುತಿಸಿಕೊಳ್ಳುವಲ್ಲಿ ಪೋಷಕರು ಅತ್ಯಗತ್ಯ ಪಾತ್ರವನ್ನು ವಹಿಸುತ್ತಾರೆ. ಶಿಕ್ಷಕರು ಮತ್ತು ಪೋಷಕರು ಒಂದು ನಾಣ್ಯದ ಎರಡು ಮುಖಗಳು” ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಸಂತ ಮೇರಿಸ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ ಶರ್ಮಿಳಾ ಮಿನೇಜಸ್ ತಿಳಿ ಹೇಳಿದರು.
ಮುಖ್ಯ ಶಿಕ್ಷಕಿ ಸಿಸ್ಟರ್ ತೆರೇಜ್ ಶಾಂತಿಯವರು ಶಾಲೆಯ ನೀತಿ ನಿಯಮಗಳ ಬಗ್ಗೆ ಪೋಷಕರಿಗೆ ತಿಳಿಸಿದರು. ಶಿಕ್ಷಕಿ ರಮ್ಯ ಶಾಲಾ ವರದಿಯನ್ನು ವಾಚಿಸಿದರು. ಶಾಲಾ ಅಧ್ಯಾಪಕ ವೃಂದ ತಮ್ಮ ತಮ್ಮ ವಿಷಯದ ಪ್ರಗತಿಯ ಬಗ್ಗೆ ತಿಳಿಸಿದರು. ಶಿಕ್ಷಕಿ ನೀತಾ ಮೆಂಡೋನ್ಸಾ ಸ್ವಾಗತಿಸಿದರು. ಶಿಕ್ಷಕಿ ಪ್ರೀತಿ ಅಂದ್ರಾದೆ ವಂದಿಸಿದರು. ಶಿಕ್ಷಕಿ ರಮ್ಯಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.