ದಾವಣಗೆರೆಯಲ್ಲಿ ಭರ್ಜರಿ ಸಿದ್ದರಾಮೋತ್ಸವ: ಸಿದ್ದರಾಮಯ್ಯನವರ ಆಡಳಿತದ ಬಗ್ಗೆ ನನಗೆ ಹೆಮ್ಮೆ: ರಾಹುಲ್ ಗಾಂಧಿ, ಸಿದ್ದರಾಮಯ್ಯ ಸರ್ವ ಜನಾಂಗದ ನಾಯಕ: ಡಿ.ಕೆ.ಶಿವಕುಮಾರ್
ದಾವಣಗೆರೆ: ಸಿದ್ದರಾಮೋತ್ಸವದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೊದಲು ಕರ್ನಾಟಕದಲ್ಲಿ ಪ್ರವಾಹದಿಂದ ಪ್ರಾಣ ಕಳೆದುಕೊಂಡ ಎಲ್ಲರ ಕುಟುಂಬಕ್ಕೆ ಸಂತಾಪಗಳನ್ನು ಸೂಚಿಸಿದರು.
ಒಬ್ಬ ವ್ಯಕ್ತಿಯಾಗಿ ಸಿದ್ದರಾಮಯ್ಯನವರನ್ನು ಇಷ್ಟಪಡುತ್ತೇನೆ. ಅವರ ವಿಚಾರಗಳ ಬಗ್ಗೆ ನನ್ನ ಸಹಮತ ಇದೆ. ಇವರು ನಡೆಸಿದ 5 ವರ್ಷಗಳ ಆಡಳಿತದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ರಾಹುಲ್ ಗಾಂಧಿ ಈ ಸಂದರ್ಭದಲ್ಲಿ ಹೇಳಿದರು.
ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯದೊರಕಿಸಬೇಕು ಎನ್ನುವ ಸಿದ್ದರಾಮಯ್ಯನವರ ಆಲೋಚನೆ ನನಗೆ ಇಷ್ಟ ಕರ್ನಾಟಕದಲ್ಲಿ ಸಿದ್ದರಾಮಯ್ಯ ಸಾಮರಸ್ಯ ಮೂಡಿಸಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.
ಕರ್ನಾಟಕ ಹಾಗೂ ಭಾರತದಾದ್ಯಂತ ಕಾಂಗ್ರೆಸ್ ಜನರ ಪರವಾಗಿ ಕೆಲಸ ಮಾಡಿದೆ. ರಾಜ್ಯದಲ್ಲಿ ನಡೆದ ಬಿಜೆಪಿ ಕಮಿಷನ್ ವಿಚಾರ ಎಲ್ಲ ಕಡೆ ಗೊತ್ತಿದೆ. ನಾವು ಕರ್ನಾಟಕವನ್ನು ಸಂವೃದ್ಧಿಗೊಳಿಸಲು ಮುಂದಾಗಿದ್ದೇವೆ. ಕರ್ನಾಟಕದ ವಿರುದ್ಧವಾಗಿ ಬಿಜೆಪಿ ಕೆಲಸ ಮಾಡುತ್ತಿದೆ. ನಾವು ಕರ್ನಾಟಕದ ಪರವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ಈ ವೇಳೆ ಅಮೃತ ಮಹೋತ್ಸವದಲ್ಲಿ ಇಷ್ಟೊಂದು ಜನರು ಸೇರಿರುವುದನ್ನು ನೋಡಿ ಬಿಜೆಪಿಯವರಿಗೆ ನಡುಕ ಹುಟ್ಟಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದಲ್ಲಿನ ಕನಕ ಗುರುಪೀಠದಲ್ಲಿ ಕಾಗಿನೆಲೆ ಮಠಾಧಿಪತಿ ನಿರಂಜನಾಂದಪುರಿ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಬಳಿಕ ಮಾತನಾಡಿದ ಅವರು, ನಾವು ಐದರಿಂದ ಆರು ಲಕ್ಷ ಜನರು ಸೇರಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದ್ರೆ, ನಮ್ಮೆಲ್ಲಾ ಊಹೆಗಿಂತ ಹೆಚ್ಚಿನ ಜನರು ಬಂದಿದ್ದಾರೆ ಎಂದರು.
ರಾಜ್ಯದ ಮೂಲೆ ಮೂಲೆಗಳಿಂದ ಜನರು ಬಂದಿದ್ದಾರೆ. ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ಆದ್ರೆ, ಸಮರ್ಪಕವಾಗಿ ಆಗಿಲ್ಲ ಅನಿಸುತ್ತದೆ. ಜನರಿಗೆ ಸಮಸ್ಯೆಯಾಗಿದೆ. ಇಷ್ಟೊಂದು ಜನರು ಸೇರಿರುವುದನ್ನು ನೋಡಿದರೆ ಮುಂದೆ ಇಷ್ಟೊಂದು ಜನರು ಸೇರುತ್ತಾರೋ ಇಲ್ಲವೋ ಗೊತ್ತಿಲ್ಲ ಎಂದು ಹೇಳಿದರು. ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ಜನರು ಬಂದಿದ್ದೇ ಸಾಕ್ಷಿ. ಇಷ್ಟೊಂದು ಜನರು ಬಂದಿರುವುದು ಬಿಜೆಪಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಕಿಡಿಕಾರಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿ.ಕೆ ಶಿವಕುಮಾರ್ ಸಿದ್ದರಾಮಯ್ಯನವರು, ಕೇವಲ ಹಿಂದುಳಿದ ನಾಯಕ ಎಂದು ಬಿಂಬಿಸಬೇಡಿ ಸರ್ವ ಧರ್ಮಕ್ಕೂ, ಸರ್ವ ಜನಾಂಗಕ್ಕೂ ಸಿದ್ದರಾಮಯ್ಯ ಅವರೇ.ನಾಯಕ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯದ ಕಾಂಗ್ರೆಸ್ ಉಸ್ತುವರಿ ಜವಾಬ್ದಾರಿ ಹೊತ್ತ ವೇಣುಗೋಪಾಲ್, ಮತ್ತಿತರ ಅನೇಕ ರಾಜ್ಯದ ದಿಗ್ಗಜ ನಾಯಕರು, ಸಿದ್ದರಾಮಯ್ಯನವರ ಅಂಸಂಖ್ಯಾ ಫಾಲೋವರ್ಸ್, ರಾಜ್ಯ ಮತ್ತು ಹೊರರಾಜ್ಯದಿಂದ ಬಂದವರಿಂದ ಸಮಾರಂಭದಲ್ಲಿ ಹಲವಾರು ಲಕ್ಷ ಜನ ಸೇರಿ ಸಿದ್ದರಾಮಯ್ಯನವರ ಶಕ್ತಿ ಏನೆಂದು ರಾಜ್ಯಕ್ಕೆ ಮತ್ತು ದೇಶಕ್ಕೆ ತಿಳಿಯಿತು.