ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಪಡೆದು ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು :ಎಂ.ವಿ.ನರಸಿಂಹರಾವ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಪಡೆದು ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು ಎಂದು ದೇವರಾಯ ಸಮುದ್ರ ಗ್ರಾಮ ಪಂಚಾಯಿತಿ ಸದಸ್ಯ ಎಂ.ವಿ.ನರಸಿಂಹರಾವ್ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದಿಂದ ಬುಧವಾರ ಏರ್ಪಡಿಸಿದ್ದ ತಾಲ್ಲೂಕು ಗ್ರಾಮ ಪಂಚಾಯಿತಿ ಸದಸ್ಯರ ಸಭೆಯಲ್ಲಿ ಮಾತನಾಡಿ, ಮಾಹಿತಿ ಕೊರತೆ ಪರಿಣಾಮವಾಗಿ ಗ್ರಾಮ ಪಂಚಾಯಿತಿಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ಹಕ್ಕುಗಳ ರಕ್ಷಣೆಗಾಗಿ ಸಾಂಘಿಕ ಹೋರಾಟ ನಡೆಸಬೇಕು. ಸದಸ್ಯರ ಹಕ್ಕುಗಳನ್ನು ಮೊಟಕುಗೊಳಿಸುವ ಯಾವುದೇ ಪ್ರಸ್ತಾವನೆಯನ್ನು ವಿರೋಧಿಸಬೇಕು. ಒಗ್ಗಟ್ಟಿನ ಹೋರಾಟದ ಫಲವಾಗಿ, ಕೈಜಾರಿ ಹೋಗಿದ್ದ ಫಲಾನುಭವಿಗಳಿಗೆ ಮನೆ ನೀಡುವ ಸದಸ್ಯರ ಹಕ್ಕನ್ನು ಮತ್ತೆ ಪಡೆದುಕೊಂಡಿದ್ದೇವೆ. ಈ ಹಕ್ಕನ್ನು ಶಾಸಕರಿಗೆ ನೀಡಲಾಗಿತ್ತು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸರಸ್ವತಿ, ಕವಿತಾ ಚಂದ್ರ, ಗೌತಮಿ ಮುನಿರಾಜು, ಆರ್.ವಿಶ್ವನಾಥರೆಡ್ಡಿ, ಬಿ.ಎಂ.ರವಿಕುಮಾರ್, ಸರಸ್ವತಿ, ಸಂಪನ್ಮೂಲ ವ್ಯಕ್ತಿಗಳಾದ ವಿ.ಶಿಲ್ಪ, ಟಿ.ನಾರಾಯಣಸ್ವಾಮಿ, ಸದಸ್ಯರಾದ ಕೃಷ್ಣಮೂರ್ತಿ, ಬಾಬೂರೆಡ್ಡಿ ಇದ್ದರು