ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ:- ಕೃಷಿ,ಪಶುಪಾಲನೆ ಮಾದರಿಯಲ್ಲಿ ಕೋಳಿಸಾಕಾಣಿಕೆ ವಿಷಯದಲ್ಲಿ ಪದವಿ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸುವ ಮೂಲಕ ಉತ್ತೇಜನ ನೀಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವಿಧಾನಪರಿಷತ್ ಶಾಸಕ ಇಂಚರ ಗೋವಿಂದರಾಜು ಸರ್ಕಾರವನ್ನು ಒತ್ತಾಯಿಸಿದರು.
ಗರುವಾರ ವಿಧಾನಪರಿಷತ್‍ನಲ್ಲಿ ನಡೆದ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ನೆರೆಯ ಆಂಧ್ರ,ತೆಲಂಗಾಣ ರಾಜ್ಯಗಳಲ್ಲಿ ಕೋಳಿ ಸಾಕಾಣಿಕೆಗೆ ಹೆಚ್ಚಿನ ನೆರವು ಒದಗಿಸಲಾಗುತ್ತಿದೆ, ಇಂದು ಕೃಷಿ ಮಾದರಿಯಲ್ಲೇ ಕೋಳಿ ಉದ್ಯಮ ಬೃಹತ್ ಆಗಿ ಬೆಳೆದಿದ್ದು, ರಾಜ್ಯದಲ್ಲೂ ಸಾಕಾಣಿಕೆದಾರರಿಗೆ ಅಗತ್ಯ ನೆರವು ಒದಗಿಸಬೇಕು ಮತ್ತು ಕೋಳಿ ಸಾಕಾಣಿಕೆ ಷೆಡ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭೂಪರಿವರ್ತನೆಯ ನಿಯಮಗಳನ್ನು ಸಡಿಲಗೊಳಿಸಬೇಕು ಎಂದು ಒತ್ತಾಯಿಸಿದರು.
25 ಹೆಚ್‍ಪಿ ಅಶ್ವಶಕ್ತಿಯ ಟ್ರಾಕ್ಟರ್‍ಗೆ ಮಾತ್ರ ನೀಡುತ್ತಿದ್ದ ಸಹಾಯಧನವನ್ನು 45 ಹೆಚ್‍ಪಿವರೆಗೂ ಹೆಚ್ಚಿಸಿರುವ ಸರ್ಕಾರದ ಕ್ರಮವನ್ನು ಸ್ವಾಗತಿಸಿದ ಅವರು, ಕೋಲಾರ ಜಿಲ್ಲೆಯಲ್ಲಿ ಟ್ರಾಕ್ಟರ್‍ಗಾಗಿ ಪರಿಶಿಷ್ಟರಿಂದ 200ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಕನಿಷ್ಟ 50 ಟ್ರಾಕ್ಟರ್‍ಗಳ ಖರೀದಿಗಾದರೂ ಸಹಾಯಧನ ನೀಡಬೇಕು ಎಂದು ಒತ್ತಾಯಿಸಿದರು.
ಕೋಲಾರ ಜಿಲ್ಲೆಯಲ್ಲಿ 71 ವಿವಿಧ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದೆ, ಆದರೆ ರೈತರಿಗೆ ತೋಟಗಾರಿಕೆ ತಾಂತ್ರಿಕತೆ ಕುರಿತು ಮಾಹಿತಿ ನೀಡಲು ಸಿಬ್ಬಂದಿಯ ಕೊರತೆ ಕಾಡುತ್ತಿದೆ ಎಂದ ಅವರು, ಜಿಲ್ಲೆಯಲ್ಲಿ ಮಂಜೂರಾಗಿರುವ 226 ಹುದ್ದೆಗಳ ಪೈಕಿ ಕೇವಲ 95 ಮಾತ್ರ ಭರ್ತಿಯಾಗಿವೆ ಉಳಿದ ಹುದ್ದೆಗಳನ್ನು ಆದ್ಯತೆ ಮೇರೆಗೆ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಮಹಿಳಾ ಸಂಘಗಳಿಗೆ ಉದ್ಯಮ ಸ್ಥಾಪನೆಗೆ ಶೇ.4 ಬಡ್ಡಿದರದ ಸಾಲ ನೀಡುವ ಸರ್ಕಾರದ ಪ್ರಸ್ತಾವನೆ ಸ್ವಾಗತಾರ್ಹ ಎಂದ ಅವರು, ಈಗಾಗಲೇ ಕೆಎಸ್‍ಎಫ್‍ಸಿಯಿಂದಲೂ ಮಹಿಳೆಯರಿಗೆ ಈ ಸೌಲಭ್ಯ ಸಿಗುತ್ತಿದೆ, ಸಹಕಾರಿ ಬ್ಯಾಂಕುಗಳಿಂದ ಶೂನ್ಯ ಬಡ್ಡಿ ಸಾಲ ಸೌಲಭ್ಯ ಮುಂದುವರೆಸಿರುವುದು ಅಭಿನಂದನೀಯ ಎಂದರು.
ಕೋಲಾರ ನಗರದಲ್ಲಿ ರೇಷ್ಮೆ ನೇಯ್ಗೆಯನ್ನೇ ಅವಲಂಭಿಸಿದ ಅನೇಕ ಬಡ ಕುಟುಂಬಳಿವೆ, ಆದರೆ ಈವರೆಗೂ ಹಿಂದಿನ ಯಾವುದೇ ಸರ್ಕಾರಗಳಿಂದಲೂ ವಸತಿ ಯೋಜನೆ ನೀಡಿಲ್ಲ, ಅದ್ದರಿಂದ ನೀವಾದರೂ ವಸತಿ ಯೋಜನೆ ನೀಡಿ ಎಂದು ಮನವಿ ಮಾಡಿದ್ದು, ತಮ್ಮ ಮನವಿಗೆ ಸಚಿವರು ಸ್ಪಂದಿಸಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದರು.
ಕೋಲಾರ ಜಿಲ್ಲೆ ರೇಷ್ಮೆ ಉದ್ಯಮವನ್ನು ಅಲಂಬಿಸಿದ್ದು, ಚೀನಾ ರೇಷ್ಮೆ ಆಮದು ತಡೆಯಬೇಕು, ಉದ್ಯಮಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಬೇಕು ಎಂದ ಸರ್ಕಾರವನ್ನು ಒತ್ತಾಯಿಸಿದರು.
ಹೆಗಡೆ ನೇತೃತ್ವದ ಜನತಾದಳ ಸರ್ಕಾರಕ್ಕೆ ಬಿಜೆಪಿಯ 17 ಶಾಸಕರು ಬೆಂಬಲ,ಸಹಕಾರ ನೀಡಿದ್ದನ್ನು ಸ್ಮರಿಸಿದ ಅವರು, ಇದೇ ಮಾದರಿಯಲ್ಲಿ ನಿಮ್ಮ ಒಳ್ಳೆಯ ಕೆಲಸಗಳಿಗೆ ನಮ್ಮ ಸಹಮತವಿದೆ ಎಂದರು.