ಸರ್ಕಾರ, ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ತಿದ್ದುಪಡಿ ಮಸೂದೆ ವಾಪಸ್ ಪಡೆಯಬೇಕು:ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯದರ್ಶಿ ವೀರಭದ್ರಸ್ವಾಮಿ

ಶ್ರೀನಿವಾಸಪುರ: ಸರ್ಕಾರ, ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ತಿದ್ದುಪಡಿ ಮಸೂದೆ ವಾಪಸ್ ಪಡೆಯಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯದರ್ಶಿ ವೀರಭದ್ರಸ್ವಾಮಿ ಆಗ್ರಹಪಡಿಸಿದರು.
ಪಟ್ಟಣದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಂಘಟನೆ ತಾಲ್ಲೂಕು ಘಟಕದ ಸಭೆಯಲ್ಲಿ ಮಾತನಾಡಿದ ಅವರು, ರೈತರ ಪ್ರತಿಭಟನೆ ಪರಿಣಾಮವಾಗಿ ಕೇಂದ್ರ ಸರ್ಕಾರ ಕೃಷಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯಿತು. ಆದರೆ ರಾಜ್ಯ ಬಿಜೆಪಿ ಸರ್ಕಾರ ಕಾಯ್ದೆ ಜಾರಿಗೊಳಿಸಿ ವಾಪಸ್ ಪಡೆಯಲು ಮುಂದಾಗಲಿಲ್ಲ ಎಂದು ಹೇಳಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ನಂಬಿಹಳ್ಳಿ ಶ್ರೀರಾಮರೆಡ್ಡಿ ಮಾತನಾಡಿ, ತೋಟಗಾರಿಕಾ ಇಲಾಖೆ ನಿರ್ಲಕ್ಷ್ಯದಿಂದ ತೋಟದ ಬೆಳೆಗಳು ರೋಗಪೀಡಿತವಾಗಿವೆ. ರೈತರು ಅದೃಷ್ಟದ ಬೆಳೆ ಎಂದು ನಂಬಿರುವ ಟೊಮೆಟೊ ಮುದುಡು ರೋಗ ಪೀಡಿತವಾಗಿದೆ. ಯಾವುದೇ ಔಷಧ ಸಿಂಪರಣೆ ಮಾಡಿದರೂ ರೋಗ ವಾಸಿಯಾಗುತ್ತಿಲ್ಲ. ಗಿಡದ ಬೆಳವಣಿಗೆ ಕುಂಠಿತಗೊಂಡು, ಅಪಾರ ಪ್ರಮಾಣದ ನಷ್ಟ ಉಂಟಾಗುತ್ತಿದೆ ಎಂದು ಹೇಳಿದರು.
ಸರ್ಕಾರ, ಕೃಷಿ ಹಾಗೂ ತೋಟದ ಬೆಳೆಗಳಿಗೆ ಮಾರಕವಾಗಿ ಪರಿಣಮಿಸಿರುವ ರೋಗಗಳ ಅಧ್ಯಯನಕ್ಕೆ ತಜ್ಞರನ್ನು ಒಳಗೊಂಡ ವಿಶೇಷ ತಂಡಗಳನ್ನು ರಚಿಸಬೇಕು. ರೋಗ ಪೀಡತ ಬೆಳೆಗಳ ರಕ್ಷಣೆಗೆ ಸೂಕ್ತ ಪರಿಹಾರ ಸೂಚಿಸಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಬೈರಾರೆಡ್ಡಿ, ವೀರಪ್ಪರೆಡ್ಡಿ, ನಾರಾಯಣಸ್ವಾಮಿ, ಶ್ರೀಧರ್, ಅಸ್ಲಂಪಾಷ ಇದ್ದರು.