ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಮಡಿವಾಳ ಸಮುದಾಯವನ್ನು ಸರ್ಕಾರ ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ರಾಜ್ಯ ಮಡಿವಾಳ ಮಾಚಿದೇವರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಆರ್.ಪ್ರಕಾಶ್ ಆಗ್ರಹಿಸಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ತಾಲ್ಲೂಕು ಮಡಿವಾಳ ಮಾಚಿದೇವರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಪ್ರೊ. ಅನ್ನಪೂರ್ಣಮ್ಮ ಅವರು ನೀಡಿರುವ ವರದಿಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಈಗಾಗಲೆ ದೇಶದ 18 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಆದರೆ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗೆ ಸೇರಿಸಲು ಮೀನ ಮೇಷ ಎಣಿಸುತ್ತಿದೆ. ಮಡಿವಾಳ ಜನಾಂಗಕ್ಕೆ ರಾಜ್ಯ ಬಜೆಟ್‍ನಲ್ಲಿ ಹೆಚ್ಚಿನ ನೆರವು ನಿರೀಕ್ಷಿಸಲಾಗಿತ್ತು. ಆದರೆ ಅದು ಹುಸಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಉಚಿತ ಪ್ರವೇಶ ಪಡೆದಿರುವ ಸಮಾಜದ ವಿದ್ಯಾರ್ಥಿ ವೇಣುಗೋಪಾಲ್ ಅವರನ್ನು ಸನ್ಮಾನಿಸಿ, ಶಿಕ್ಷಣದ ವೆಚ್ಚಕ್ಕಾಗಿ ರೂ.1.45 ಲಕ್ಷ ನೀಡಲಾಯಿತು.
ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ರವೀಂದ್ರ, ಪ್ರಧಾನ ಕಾರ್ಯದರ್ಶಿ ದೀಪಕ್, ಮುಖಂಡರಾದ ನಟರಾಜ್, ರಂಗಸ್ವಾಮಿ, ಸುಬ್ರಮಣಿ, ಶ್ರೀನಿವಾಸಲು, ಡಿ.ಎನ್.ವೆಂಕಟಾಚಲಪತಿ, ಕೇಶವ, ರಮೇಶ್ ಬಾಬು, ಜನಾರ್ಧನ್, ಡಿ.ಎನ್.ನಾರಾಯಣಸ್ವಾಮಿ, ಎಲ್.ಮುರಳಿ ಮೋಹನ್, ಆರ್.ಶಿವಣ್ಣ, ಮಂಜುನಾಥ್, ಲಕ್ಷ್ಮಯ್ಯ, ವೆಂಕಟರಾಮಪ್ಪ, ರಾಮಕೃಷ್ಣಪ್ಪ ಇದ್ದರು.