

ಕೋಲಾರ:- ಸರ್ಕಾರಿ ಶಾಲೆಗಳ ಹಿಂದುಳಿದ, ಅಲ್ಪಸಂಖ್ಯಾತ,ಇತರೆ ವರ್ಗಗಳ ವಿದ್ಯಾರ್ಥಿಗಳ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸಕ್ಕೆ ಶುಕ್ರವಾರ ಬೆಳಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶಿಕ್ಷಣ ಸಂಯೋಜಕರಾದ ವೆಂಕಟಾಚಲಪತಿ ಹಾಗೂ ರಾಘವೇಂದ್ರ ಚಾಲನೆ ನೀಡಿದರು.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ತಾಲ್ಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳನ್ನು ಹೊತ್ತ ಸಾರಿಗೆ ಸಂಸ್ಥೆ ಬಸ್ಸಿಗೆ ಪೂಜೆ ಸಲ್ಲಿಸುವ ಮೂಲಕ ಕರ್ನಾಟಕ ದರ್ಶನ ಪ್ರವಾಸಕ್ಕೆ ಶುಭ ಕೋರಲಾಯಿತು.
ಜ್ಞಾನಾಭಿವೃದ್ದಿಗೆ ಪ್ರವಾಸ ಸಹಕಾರಿ
ಈ ಸಂದರ್ಭದಲ್ಲಿ ಮಾತನಾಡಿದ ಇಸಿಒ ವೆಂಕಟಾಚಲಪತಿ, ಮಕ್ಕಳಲ್ಲಿ ಪ್ರಾಚ್ಯಪ್ರಜ್ಞೆ ಹೆಚ್ಚಲು ಹಾಗೂ ಸಾಮಾನ್ಯ ಜ್ಞಾನ ವೃದ್ದಿಗೆ ಈ ಪ್ರವಾಸ ಸಹಕಾರಿಯಾಗಿದ್ದು, ನಮ್ಮ ರಾಜ್ಯದ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಪ್ರವಾಸದಲ್ಲಿ ಮಕ್ಕಳ ಆರೋಗ್ಯ, ಊಟ ವಸತಿ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ತಲಾ ಇಬ್ಬರು ಪುರುಷ ಹಾಗೂ ಮಹಿಳಾ ಶಿಕ್ಷಕರು ಪ್ರವಾಸದಲ್ಲಿ ಮಕ್ಕಳ ನೇತೃತ್ವ ವಹಿಸಿದ್ದು, ಯಾವುದೇ ಸಮಸ್ಯೆ ಎದುರಾಗದಂಗೆ ಕ್ರಮವಹಿಸಲಾಗಿದೆ ಎಂದರು.
ಇಸಿಒ ರಾಘವೇಂದ್ರ ಮಾತನಾಡಿ, ತಾವೂ ಮಕ್ಕಳೊಂದಿಗೆ ಪ್ರವಾಸ ತೆರಳುತ್ತಿದ್ದು, ಮಕ್ಕಳಿಗೆ ಶೈಕ್ಷಣಿಕವಾಗಿ ಮಾಹಿತಿ ಪಡೆಯಲು ಅಗತ್ಯವಿರುವ ಐತಿಹಾಸಿಕ ಕ್ಷೇತ್ರಗಳ ದರ್ಶನ ಮಾಡಿಸಲಾಗುತ್ತಿದೆ, ಕಲೆ,ಸಾಂಸ್ಕøತಿಕ ಪರಿಚಯ ಈ ಪ್ರವಾಸದ ಮೂಲಕ ಮಾಡಿಸಲಾಗುತ್ತಿದೆ ಎಂದರು.
ಈ ಪ್ರವಾಸದಲ್ಲಿ ಮಕ್ಕಳ ಪಠ್ಯಕ್ಕೆ ಅನುಕೂಲವಾಗುವಂತೆ ಪ್ರೇಕ್ಷಣೀಯ ಸ್ಥಳಗಳ ಆಯ್ಕೆ ಮಾಡಿದ್ದು, ಮಕ್ಕಳ ಸುರಕ್ಷತೆಗೆ ಹೆಚ್ಚಿನ ನಿಗಾ ವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯಶಿಕ್ಷಕರುಗಳಾದ ಸಿ.ಎನ್.ಪ್ರದೀಪ್ ಕುಮಾರ್, ನಾಗರಾಜ್, ಜಿಲ್ಲಾ ಶಿಕ್ಷಕರ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ಕೆ.ಎಂ.ಮುನಿಯಪ್ಪ,ವಿವಿಧ ಶಾಲೆಗಳ ಶಿಕ್ಷಕರಾದ ಮಂಜುನಾಥ್, ಸುಬ್ರಮಣಿ,ವೆಂಕಟರೆಡ್ಡಿ, ಪದ್ಮಾವತಿ, ರಮೇಶ್ ಮತ್ತಿತರರಿದ್ದರು.