ಕೋಲಾರ:- ತಮಿಳುನಾಡು ರಾಜ್ಯಕ್ಕೆ ಶೈಕ್ಷಣಿಕ ಪ್ರವಾಸ ಹೊರಟ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರು ಹಾಗೂ ಸಮಾಜ ಸೇವಕರಾದ ಧರ್ಮೇಶ್, ಇಸಿಒ ಬೈರೆಡ್ಡಿ ಮತ್ತಿತರರು ಶುಭ ಹಾರೈಸಿ ತಿಂಡಿ,ತಿನಿಸು,ಹಣ್ಣು ಕೊಡುಗೆಯಾಗಿ ನೀಡಿದರು.
ಭಾನುವಾರ ಮಧ್ಯರಾತ್ರಿ ಪ್ರವಾಸಕ್ಕೆ ತೆರಳಿದ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಇಸಿಒ ಬೈರೆಡ್ಡಿ, ಪ್ರವಾಸ ಮಕ್ಕಳ ಶೈಕ್ಷಣಿಕ ಕಲಿಕೆಗೆ ಪೂರಕವಾಗಿರಲಿ, ಪ್ರವಾದಲ್ಲಿ ಮಕ್ಕಳು ಎಚ್ಚರಿಕೆಯಿಂದಿರಿ, ಆರೋಗ್ಯ ರಕ್ಷಣೆಗೆ ಒತ್ತು ನೀಡಿ ಎಂದು ಕಿವಿಮಾತು ಹೇಳಿದರು.
ಶಿಕ್ಷಕ ಹಾಗೂ ಕೊಡುಗೈ ದಾನಿ ಸುಗಟೂರು ಧರ್ಮೇಶ್, ಸರ್ಕಾರಿ ಶಾಲಾ ಮಕ್ಕಳಿಗೆ ಮತ್ತಷ್ಟು ದಾನಿಗಳ ನೆರವು ಹರಿದು ಬರಬೇಕಾಗಿದೆ, ನನ್ನ ವೇತನದ ಅರ್ಧವನ್ನು ಪ್ರತಿ ತಿಂಗಳು ಸರ್ಕಾರಿ ಶಾಲಾ ಬಡ ಮಕ್ಕಳಿಗೆ ಬಳಸುತ್ತಿರುವುದಾಗಿ ತಿಳಿಸಿದರು.
ಮುಖ್ಯಶಿಕ್ಷಕ ಸಿ.ಎನ್.ಪ್ರದೀಪ್‍ಕುಮಾರ್, ಶಾಲೆಯ ಮಕ್ಕಳು ಪ್ರವಾಸದಲ್ಲಿ ಸಂತಸದಿಂದ ಕಳೆಯಲು ಅಗತ್ಯ ತಿನಿಸು ಒದಗಿಸಿದ ಶಿಕ್ಷಕ ಧರ್ಮೇಶ್, ಬೈರೆಡ್ಡಿ, ಎಸ್‍ಡಿಎಂಸಿ ಸದಸ್ಯರಾದ ಮಂಜುನಾಥ್, ವೆಂಕಟಾಚಲಪತಿ, ರಾಮಚಂದ್ರ ಅವರಿಗೆ ಧನ್ಯವಾದ ತಿಳಿಸಿದರು.
ಎಸ್‍ಡಿಎಂಸಿ ಅಧ್ಯಕ್ಷ ಎ.ಮಹೇಂದ್ರ ಮಾತನಾಡಿ, ಉಳ್ಳವರೆಲ್ಲರಿಗೂ ದಾನ ನೀಡುವ ಗುಣ ಬಾರದು, ಶಿಕ್ಷಕರಾಗಿದ್ದು, ಸರ್ಕಾರಿ ಶಾಲೆಯ ಮಕ್ಕಳಿಗೆ ನೆರವಾಗುವ ಗುಣ ಮೆಚ್ಚುವಂತದ್ದು, ಈಗಾಗಲೇ ಶಾಲೆಗೆ ಧರ್ಮೇಶ್ ಧ್ವನಿವರ್ಧಕ ಕೊಡುಗೆಯಾಗಿ ನೀಡಿದ್ದಾರೆ, ಬೈರೆಡ್ಡಿ ನೋಟ್ ಪುಸ್ತಕ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎಸ್‍ಡಿಎಂಸಿ ಉಪಾಧ್ಯಕ್ಷೆ ಲಕ್ಷ್ಮಿ, ಸದಸ್ಯರಾದ ರಾಮಚಂದ್ರಪ್ಪ, ರಾಘವೇಂದ್ರ, ನಾರಾಯಣಸ್ವಾಮಿ, ಮಂಜುನಾಥ್, ವೆಂಕಟಾಚಲಪತಿ, ಶಿಕ್ಷಕರಾದ ಗೋಪಾಲಕೃಷ್ಣ, ವೆಂಕಟರೆಡ್ಡಿ, ಸುಗುಣಾ, ಫರೀದಾ ಮತ್ತಿತರರಿದ್ದರು.