ಡಿಸಿಸಿಬ್ಯಾಂಕ್ ನಂ.1 ಆಗಲು ಗೋವಿಂದಗೌಡರಿಗೆ ಸಹಕಾರಿ ರಂಗದ ಮೇಲಿದ್ದ ಶ್ರದ್ಧೆ,ಬದ್ದತೆಯೇ ಕಾರಣ-ಶಾಸಕ ಶ್ರೀನಿವಾಸಗೌಡ ಶ್ಲಾಘನೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ದಿವಾಳಿಯಾಗಿ ಜನರ ಮನಸ್ಸಿನಿಂದಲೇ ಕಣ್ಮರೆಯಾಗುವ ಹಂತ ತಲುಪಿದ್ದ ಡಿಸಿಸಿ ಬ್ಯಾಂಕನ್ನು ರಾಜ್ಯದ ನಂ.1 ಆಗಿಸಲು ಬ್ಯಾಲಹಳ್ಳಿ ಗೋವಿಂದಗೌಡರಿಗಿದ್ದ ಸಹಕಾರಿ ರಂಗದ ಮೇಲಿನ ಶ್ರದ್ಧೆ,ಬದ್ದತೆ ಕಾರಣವಾಯಿತು ಎಂದು ಶಾಸಕ ಕೆ.ಶ್ರೀನಿವಾಸಗೌಡ ಶ್ಲಾಘಿಸಿದರು.
ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ವತಿಯಿಂದ ಕೋಲಾರ ಕಸಬಾ ದಕ್ಷಿಣ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆಶ್ರಯದಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ 1.60 ಕೋಟಿ ರೂ ಬಡ್ಡಿರಹಿತ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.
ಗೋವಿಂದಗೌಡರು ಅಧ್ಯಕ್ಷರಾಗುವುದಕ್ಕೆ ನಾನೇ ಮೊದಲು ವಿರೋಧಿಸಿದ್ದೆ ಆದರೆ ಅದೃಷ್ಟವಷಾತ್ ಅವರು ಲಾಟರಿಯಲ್ಲಿ ಅಧ್ಯಕ್ಷರಾದರು. ಅಂದು ವಿರೋಧಿಸಿದ್ದು ತಪ್ಪು ಎಂಬುದರ ಅರಿವು ನನಗಾಗಿದೆ, ಬ್ಯಾಂಕ್ ಹೆಸರೇ ಮಾಯವಾಗುವ ಹಂತದಲ್ಲಿದ್ದ ಸಂದರ್ಭದಲ್ಲಿ ಅಧಿಕಾರ ವಹಿಸಿಕೊಂಡು ಇಂದು ಲಕ್ಷಾಂತರ ಮಹಿಳೆಯರು ರೈತರಿಗೆ ನೆರವಾಗುವ ಮೂಲಕ ಎರಡೂ ಜಿಲ್ಲೆಗಳಲ್ಲಿ ಮೌನ ಕ್ರಾಂತಿಯ ಮೂಲಕ ಬ್ಯಾಂಕನ್ನು ರಾಜ್ಯಕ್ಕೆ ನಂ.1 ಆಗಿಸಿರುವುದು ಸುಲಭದ ಮಾತಲ್ಲ ಎಂದರು.


2.5 ಕೋ.ವೆಚ್ಚದಲ್ಲಿ ವಾಣಿಜ್ಯ ಮಳಿಗೆ


ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ದಕ್ಷಿಣ ಕಸಬಾ ಸೊಸೈಟಿಗೆ ಮಾಜಿ ಶಾಸಕ ಕೆ.ಆರ್.ಶ್ರೀನಿವಾಸಯ್ಯ ಅವರು ಬೆಲೆಬಾಳುವ ನಿವೇಶನ ಒದಗಿಸಿಕೊಟ್ಟಿದ್ದಾರೆ, ಅವರ ನಂತರ ದಿವಂಗತ ಸಿ.ಬೈರೇಗೌಡರು,ಪಿ.ವೆಂಕಟಗಿರಿಯಪ್ಪ ಅವರು ಸೊಸೈಟಿಯನ್ನು ಬೆಳೆಸಿದ್ದಾರೆ.
ಜಿಲ್ಲೆಗೆ ಕೊಡುಗೆ ನೀಡಿರುವ ಈ ಮೂವರ ಹೆಸರಿನಲ್ಲಿ ತಲಾ ಒಂದೊಂದು ಮಹಡಿಯಂತೆ ಮೂರು ಮಹಡಿಯ ವಾಣಿಜ್ಯಮಳಿಗೆಯನ್ನು 2.5 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಶಾಸಕ ಶ್ರೀನಿವಾಸಗೌಡರು ನೆರವಾಗಲಿದ್ದಾರೆ ಎಂದು ತಿಳಿಸಿ, ಸೊಸೈಟಿ ಅಭಿವೃದ್ದಿಗೆ ಶ್ರಮಿಸಿದ ಮುನೇಗೌಡ ಅವರ ತಂದೆ ರಾಮಣ್ಣ ಮತ್ತಿತರರ ಕೊಡುಗೆಯನ್ನು ಸ್ಮರಿಸಿದರು.
ತಾಯಂದಿರು ಸೊಸೈಟಿ ಅಥವಾ ಡಿಸಿಸಿ ಬ್ಯಾಂಕಿನಲ್ಲೇ ತಮ್ಮ ಉಳಿತಾಯದ ಹಣವಿಡಿ, ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ನೀಡುತ್ತಿರುವ ಸಾಲದ ಮೊತ್ತವನ್ನು 50 ಸಾವಿರದಿಂದ 1 ಲಕ್ಷಕ್ಕೇರಿಸುವುದಾಗಿ ತಿಳಿಸಿದರು.
ಸಾಲ ಪಡೆಯುವವರ ಖಾತೆ ನೇರವಾಗಿ ಹಣ ಹೋಗಲಿದ್ದು, ಎಟಿಎಂ ಮೂಲಕವೇ ಡ್ರಾ ಮಾಡಿಕೊಳ್ಳುವಂತೆ ಮಹಿಳೆಯರಿಗೆ ಸಲಹೆ ನೀಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಕೋವಿಡ್ ಜತೆ ಜೀವನ ಅನಿವಾರ್ಯವಾಗಿಬಿಟ್ಟಿದೆ, ಸಂಕಷ್ಟದಲ್ಲೂ ಡಿಸಿಸಿ ಬ್ಯಾಂಕ್ ಸಾಲ ನೀಡಿ ನೆರವಾಗುತ್ತಿದೆ ಎಂದರು.
ಸಾಲ ವಿತರಣೆಯನ್ನು ಆಂದೋಲನವಾಗಿಸುವ ಉದ್ದೇಶವಿದೆ, ಎರಡೂ ಜಿಲ್ಲೆಗಳಪ್ರತಿಕುಟುಂಬಕ್ಕೂ ನೆರವಾಗುವ ಸಂಕಲ್ಪ ನಮ್ಮ ಆಡಳಿತ ಮಂಡಳಿಯದ್ದು, ಈ ನಡುವೆ ಉತ್ತಮ ಕೆಲಸಕ್ಕೂ ಕೆಲವರು ಟೀಕೆ ಮಾಡುತ್ತಿದ್ದಾರೆ, ಅವರಿಗೆ ಮಹಿಳೆಯರು ಸಮರ್ಪಕ ಮರುಪಾವತಿಯ ಮೂಲಕ ಉತ್ತರ ಕೊಟ್ಟಿದ್ದಾರೆ ಎಂದರು.
ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‍ಕುಮಾರ್ ಮಾತನಾಡಿ, ಡಿಸಿಸಿ ಬ್ಯಾಂಕ್ ಮಹಿಳಾ ಸಂಘಗಳಿಗೆ ಸಾಲ ವಿತರಣೆಯನ್ನು 2014ರಲ್ಲಿ ಆರಂಭಿಸಿದ್ದೇ ದಕ್ಷಿಣ ಕಸಬಾ ಸೊಸೈಟಿಯಿಂದ, ಇಲ್ಲಿಂದಲೇ ಸಾಲ ಆಂದೋಲನ,ಕ್ರಾಂತಿಯಾಗಿದೆ, ಈ ಮಣ್ಣಿನ ಗುಣ ಅಂತದ್ದು ಎಂದು ಅಭಿನಂದಿಸಿದರು.
ಡಿಸಿಸಿ ಬ್ಯಾಂಕ್ ಬೃಹತ್ ಶಕ್ತಿಯಾಗಿ ಬೆಳೆದಿದೆ. ಟೀಕೆಗಳನ್ನು ಸವಾಲಾಗಿ ಸ್ವೀಕರಿಸಿದ್ದೇವೆ, ಈ ಸಾಧನೆಗೆ ಗೋವಿಂದಗೌಡರಿಗೆ ಅಭಿನಂದನೆ ಸಲ್ಲಿಸಬೇಕಾಗಿದೆ ಎಂದರು.
ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್ ಮಾತನಾಡಿ, ಡಿಸಿಸಿ ಬ್ಯಾಂಕ್ ಸದೃಢವಾಗಿದೆ, ದಕ್ಷಿಣ ಕಸಬಾ ಸೊಸೈಟಿ ಒಂದರಿಂದಲೇ 35 ಕೋಟಿ ಸಾಲ ನೀಡಿದ್ದೇವೆ, ಮಹಿಳೆಯರು 10 ಸಂಘಗಳ 100 ಮಂದಿ ಒಂದಾಗಿ ಉದ್ಯಮ ಸ್ಥಾಪಿಸಲು ಮುಂದಾದರೆ ಡಿಸಿಸಿ ಬ್ಯಾಂಕ್ 2 ಕೋಟಿ ಸಾಲ ನೀಡುತ್ತದೆ, ನೀವು ಉದ್ಯೋಗ ಸೃಷ್ಟಿಗೂ ಕಾರಣರಾಗಬಹುದು, ಜತೆಗೆ ಸೊಸೈಟಿಗಳು ವಿವಿಧೋದ್ದೇಶ ಸೇವಾ ಕೇಂದ್ರದ ಮೂಲಕ ರೈತರಿಗೆ ಅಗತ್ಯವಾದ ಎಲ್ಲಾ ವಸ್ತುಗಳ ಮಳಿಗೆ ಆರಂಭಿಸಿ ಎಂದರು.
ಕಾರ್ಯಕ್ರಮದಲ್ಲಿ ಕಸಬಾ ಸೊಸೈಟಿ ಅಧ್ಯಕ್ಷ ಚೋಳಘಟ್ಟ ಶ್ರೀನಿವಾಸಪ್ಪ ಅಧ್ಯಕ್ಷತೆ ವಹಿಸಿದ್ದು, ಡಿಸಿಸಿ ಬ್ಯಾಂಕ್ ಸೊಸೈಟಿಗೆ ನೀಡಿರುವ ಸಹಕಾರಕ್ಕೆ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸೊಸೈಟಿ ಉಪಾಧ್ಯಕ್ಷ ಅಮ್ಮೇರಹಳ್ಳಿ ಶ್ರೀನಿವಾಸ್,ನಿರ್ದೇಶಕರಾದ ಶ್ರೀರಾಮರೆಡ್ಡಿ,ನಾರಾಯಣಸ್ವಾಮಿ,ಪದ್ಮಮ್ಮ,ಸರೋಜಮ್ಮ,ವೆಂಕಟೇಶಪ್ಪ, ಕೆ.ವೆಂಕಟೇಶ್,ಮುನಿಯಪ್ಪ, ಶ್ರೀನಿವಾಸ್, ಪ್ರಕಾಶ್, ಮುನಿವೆಂಕಟಪ್ಪ, ಸಿಇಒ ಎಸ್.ವೆಂಕಟೇಶ್, ಮುಖಂಡರಾದ ಕೃಷ್ಣಪ್ಪ, ಮಂಜುನಾಥ್,ಮಾಜಿ ಅಧ್ಯಕ್ಷ ನಾರಾಯಣಗೌಡ, ಟಿ.ಶ್ರೀನಿವಾಸ್ ಮತ್ತಿತರರಿದ್ದರು.