ಕರ್ನಾಟಕದಲ್ಲಿ ಮತ್ತಷ್ಟು ಕಠಿಣ ಕ್ರಮ ಲಾಕ್ಡೌನ್ ಜಾರಿಗೆ ರಾಜ್ಯಪಾಲರ ನಿರ್ದೇಶನ

JANANUDI.COM NETWORK

ಬೆಂಗಳೂರು,ಎ. 20: ರಾಜ್ಯದಲ್ಲಿ ಕೊರೋನಾ ಸೋಂಕಿಗೆ ಅಸಂಖ್ಯ ಜನ ಬಲಿಯಾಗಿದ್ದಾರೆ. ನಿತ್ಯವೂ ರಾಜ್ಯದಲ್ಲಿ ಸಾವಿರಾರು ಜನರು ಸೋಂಕಿಗೊಳಗಾಗಿತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರ ಉಪಸ್ಥಿತಿಯಲ್ಲಿ ವಿಧಾನ ಮಂಡಲದ ಉಭಯ ಸದನಗಳ ಪ್ರಮುಖರ ಸಭೆ ನಡೆಯಿತು.
ಬೆಂಗಳೂರು ಸಹಿತ ರಾಜ್ಯದ ಪ್ರಮುಖ ನಗರಗಳಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಹಾಗಾಗಿ ಸಿನಿಮಾ ಮಂದಿರಗಳು, ಬಾರ್-ಪಬ್ಗಳ ಸಹಿತ ಪ್ರಮುಖ ಉದ್ದಿಮೆ ಕೇಂದ್ರಗಳ ಚಟುವಟಿಕೆಗಳಿಗೆ ಅಂಕುಶ ಹಾಕಬೇಕೆಂಬ ಆಗ್ರಹ ಕೇಳಿಬಂತು.
ಅದರಲ್ಲೂ ಮುಖ್ಯವಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಲಾಕ್ಡೌನ್ ಜಾರಿಗೆ ಸಲಹೆ ಮಾಡಿದರು. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು 144 ಸೆಕ್ಷನ್ ಜಾರಿ ಮಾಡಿ ಸೋಂಕು ನಿಯಂತ್ರಣಕ್ಕಾಗಿ ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಸಲಹೆ ಮಾಡಿದರು. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕೂಡ ಲಾಕ್ಡೌನ್ ಪರ ಒಲವು ವ್ಯಕ್ತಪಡಿಸಿದರು. ಸೋಂಕು ಹೆಚ್ಚಿರುವ ಕಡೆ ವಾರದ ಅಂತ್ಯದಲ್ಲಿ ಲಾಕ್ಡೌನ್ ಜಾರಿ ಮಾಡುವಂತೆ ಹೊರಟ್ಟಿ ಸಲಹೆ ನೀಡಿದರು. ಇದೇ ವೇಳೆ, ಪ್ರತಿಪಕ್ಷಗಳ ನಾಯಕರ ಸಲಹೆಗಳನ್ನು ಪರಿಗಣಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಈ ಸಭೆಯಲ್ಲಿ ಭರವಸೆ ನೀಡಿದರರು.


ರಾಜ್ಯಪಾಲರಿಂದ ಲಾಕ್ಡೌನ್ಗೆ ನಿರ್ದೇಶನ
ಸಭೆಯ ಅಧ್ಯಕ್ಷತೆ ವಹಿಸಿದ ರಾಜ್ಯಪಾಲ ವಜುಬಾಯಿ ವಾಲಾ ಕೂಡಾ ಲಾಕ್ಡೌನ್ ಜಾರಿಗೆ ಸಲಹೆ ಮಾಡಿದರು. ಜನರು ಹಸಿವಿನಿಂದ ಸಾಯುವುದಿಲ್ಲ ಎಂಬ ವಿಶ್ವಾಸ ಇದೆ. ಹಾಗಾಗಿ ಲಾಕ್ಡೌನ್ ಮಾಡೋದಾದ್ರೆ ಮಾಡಬಹುದೆಂದು ರಾಜ್ಯಪಾಲರು ಸರ್ಕಾರಕ್ಕೆ ನಿರ್ದೇಶನ ನೀಡಿದರು.