ವರದಿ : ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ
ಕೋಲಾರ : ಪತ್ರಕರ್ತರಿಗೆ ಕಾರ್ಮಿಕ ಕಾಯ್ದೆಗಳು ಅನ್ವಯವಾಗದಂತ ನೀತಿಗಳನ್ನು ಕಾರ್ಪೊರೇಟ್ ಸಂಸ್ಥೆಗಳ ಜೊತೆಗೂಡಿ ಸರಕಾರಗಳು ಜಾರಿಗೆ ತರುವ ಮೂಲಕ ತನ್ನ ಇಷ್ಟದಂತೆ ದುಡಿಸಿಕೊಳ್ಳುವ ಪ್ರವೃತ್ತಿ ದೇಶಕ್ಕೆ ಮತ್ತು ಪತ್ರಕರ್ತರಿಗೆ ಅಪಾಯಕಾರಿಯಾದ ಬೆಳವಣಿಗೆಗಳು ಎಂದು ಹಿರಿಯ ಪತ್ರಕರ್ತ ವಿಶ್ವ ಕುಂದಾಪುರ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇದೇ ಮೊದಲ ಬಾರಿಗೆ ನಡೆದ ವಿಶ್ವ ಕಾರ್ಮಿಕ ದಿನಾಚರಣೆಯಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಮಾಧ್ಯಮ ಕ್ಷೇತ್ರವು ಕೂಡ ಬಂಡವಾಳಗಾರರ ಹಿಡಿತಕ್ಕೆ ಸಿಕ್ಕಿ ಸರ್ಕಾರಗಳನ್ನು ಮೆಚ್ಚಿಸುವಂತಾಗಿದ್ದು, ಅವರುಗಳ ಹಂಗಿನಲ್ಲಿ ಮಾಧ್ಯಮ ಕ್ಷೇತ್ರ ಉಳಿದಿದೆ ಎಂದರೆ ತಪ್ಪಾಗಲಾರದು. ಮಾಧ್ಯಮದಲ್ಲಿ ಕೆಲಸ ಮಾಡುವವರು ವ್ಯಕ್ತಿ ಘನತೆ ಮತ್ತು ವೃತ್ತಿ ಘನತೆಗಳ ಬಗ್ಗೆ ತಿಳಿದು ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಸಮಾಜದಲ್ಲಿ ಗುರು ಹಿರಿಯರಿಗೆ ಇರುವ ಸ್ಥಾನವನ್ನು ಪತ್ರಕರ್ತರಿಗೂ ನೀಡಿದ್ದಾರೆ, ಆದರೆ ಇತ್ತೀಚೆಗೆ ಅದು ಕ್ಷೀಣಿಸುತ್ತಾ ಇದ್ದು ನಮ್ಮಲ್ಲಿನ ನೈತಿಕತೆ, ವ್ಯಕ್ತಿ ಘನತೆ, ನಿಷ್ಠೆ, ಶ್ರದ್ಧೆ ಕಡಿಮೆಯಾಗತೊಡಗಿದೆ. ಜೀವನಕ್ಕಾಗಿ ಸಂಪಾದನೆ ಮಾಡಿ ಸಂಪಾದನೆಯೇ ಜೀವನವಾಗಬಾರದು ಸಾಮಾಜಿಕ ಬದ್ದತೆ ಇದ್ದಾಗ ಮಾತ್ರ ಸಮಾಜವನ್ನು ಎಚ್ಚರಿಸಲು ಸಾಧ್ಯ ಆದರೆ ಸಂಪಾದಕರು ಮಾಲೀಕನ ಹಿಡಿತಕ್ಕೆ ಸಿಕ್ಕಿ ಇಂತಹ ಪರಿಸ್ಥಿತಿಗೆ ಬಂದಿದ್ದಾರೆ ಎಂದರು.
ಪತ್ರಕರ್ತರಿಗಾಗಿಯೇ ೧೯೫೫ ರ ಕಾರ್ಮಿಕ ಕಾನೂನು ಜಾರಿಯಲ್ಲಿದೆ ಜೊತೆಗೆ ದುಡಿಯುವ ವರ್ಗದ ಜನರಿಗೆ ಸಿಗಬೇಕಾದ ಸೌಲಭ್ಯಗಳು ವೇತನ ಸಿಗುತ್ತಾ ಇಲ್ಲ ಇದನ್ನು ಪ್ರಶ್ನೆ ಮಾಡಿದರೆ ದೇಶದ್ರೋಹಿಗಳ ಪಟ್ಟ ಕಟ್ಟುತ್ತಾರೆ ಕಾರ್ಪೊರೇಟ್ ಜಗತ್ತು ಎಲ್ಲಾ ವಿಭಾಗದಲ್ಲಿ ಮಧ್ಯೆ ಪ್ರವೇಶದಿಂದ ಬಡವರು ಕಾರ್ಮಿಕರು ಮುಂದೆ ಬರಲು ಸಾಧ್ಯವಾಗಲಿಲ್ಲ ನಾವು ಎಲ್ಲರೂ ಸಂಘಟಿತರಾಗಿ ಧ್ವನಿ ಎತ್ತುವ ಕೆಲಸವಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ ಗೋಪಿನಾಥ್ ಮಾತನಾಡಿ, ಪತ್ರಕರ್ತರ ಸಂಘವು ಟ್ರೇಡ್ ಯೂನಿಯನ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾ ಇದ್ದು ಇನ್ನೂ ಮುಂದೆ ಪ್ರತಿ ವರ್ಷ ನಮ್ಮ ಸಂಘದ ವತಿಯಿಂದ ವಿಶ್ವ ಕಾರ್ಮಿಕ ದಿನಾಚರಣೆ ನಡೆಸಲಾಗುತ್ತದೆ. ಪತ್ರಕರ್ತರು ಎಲ್ಲರ ಶೋಷಣೆ ದಬ್ಬಾಳಿಕೆ ವಿರುದ್ಧ ಧ್ವನಿಯಾಗುತ್ತಾರೆ, ಆದರೆ ಅವರು ಮಾತ್ರ ಜೀತದಾಳುಗಳ ರೀತಿಯಲ್ಲಿ ದುಡಿಯುವಂತಾಗಿದ್ದಾರೆ ನಮ್ಮ ಬದುಕು ಬವಣೆಗಳನ್ನು ಹಾಗೂ ಅನ್ಯಾಯವನ್ನು ಯಾರ ಹತ್ತಿರ ಹೇಳಿಕೊಳ್ಳದ ರೀತಿಯಲ್ಲಿ ಪತ್ರಕರ್ತ ಇದ್ದಾರೆ ಎಂದರೆ ತಪ್ಪಾಗಲಾರದು ಎಂದರು.
ಸಮಾಜದಲ್ಲಿ ದುಡಿಯುವ ಕೈಗಳಿಗೆ ಸಂಬಳ ನೀಡಿದರೆ ಮಾತ್ರವೇ ಅವನ ಬದುಕು ಸಂತೋಷವಾಗಿರಲು ಸಾಧ್ಯ, ಆದರೆ ಪತ್ರಕರ್ತರು ಮಾತ್ರ ಅವರಿಗೆ ಸಂಬಳ ಬರುತ್ತೋ ಬರಲ್ಲವೋ ಆದರೆ ನಿಷ್ಠೆಯಿಂದ ತಮ್ಮ ದಿನನಿತ್ಯದ ಕಾಯಕವನ್ನು ಮಾಡುತ್ತಾನೆ ನಾವು ಎಲ್ಲರೂ ವೃತ್ತಿಯ ಘನತೆಯನ್ನು ಉಳಿಸಿ ಬೆಳೆಸುವ ಕೆಲಸಕ್ಕೆ ಕೈ ಜೋಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಪತ್ರಕರ್ತರ ಸಂಘ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಎಸ್ ಗಣೇಶ್, ಪತ್ರಕರ್ತರು ಅಸಂಘಟಿತ ಕಾರ್ಮಿಕ ವಲಯದಲ್ಲಿ ಕೆಲಸ ಮಾಡುವರಾಗಿದ್ದು, ಅಂಬೇಡ್ಕರ್ ಹಾಕಿಕೊಟ್ಟ ಕಾರ್ಮಿಕ ಕಾಯಿದೆಗಳು ಇವತ್ತು ಮಾಲೀಕರ ಬಂಡವಾಳಗಾರ ಪರವಾಗಿ ಮಾರ್ಪಾಡು ಮಾಡಲಾಗಿದೆ ಕಾರ್ಮಿಕರ ಶ್ರಮಕ್ಕೆ ಬೆಲೆ ಇಲ್ಲವಾಗಿದ್ದು, ಕಾರ್ಮಿಕರು ಸಂಘಟಿತರಾಗಿ ಅವರ ಹಕ್ಕುಗಳನ್ನು ಪಡೆಯುವ ಮತ್ತು ಮತ್ತೊಬ್ಬರಿಗೆ ತಿಳಿಸಿಕೊಡುವಂತಾಗಬೇಕು ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ವಿ.ಮುನಿರಾಜು ಮಾತನಾಡಿ, ಸುಮಾರು ವರ್ಷಗಳಿಂದ ಕಾರ್ಯನಿರತ ಪತ್ರಕರ್ತರ ಸಂಘ ಇದ್ದರು ಇವತ್ತು ಸಂಘದ ವತಿಯಿಂದ ಕಾರ್ಮಿಕ ದಿನಾಚರಣೆ ಮಾಡುವುದು ಒಳ್ಳೆಯ ಯೋಚನೆಯಾಗಿದ್ದು, ಇದೇ ರೀತಿಯಲ್ಲಿ ಕಾರ್ಮಿಕರ ಜೊತೆಯಲ್ಲಿ ಪತ್ರಕರ್ತರು ಒಂದಾಗಿ ಸರ್ಕಾರಗಳನ್ನು ಎಚ್ಚರಿಸಬೇಕಾಗಿದೆ ಅನ್ಯಾಯದ ವಿರುದ್ಧ ಧ್ವನಿಯಾಗಿ ನಾವು ಕೆಲಸ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಪತ್ರಿಕಾ ರಂಗದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಪತ್ರಿಕಾ ವಿತರಕ ಎಂ.ಎಸ್.ನರಸಿಂಹ ಕಾರಂತ್, ಪತ್ರಿಕಾ ಮುದ್ರಣ ಕಾರ್ಮಿಕರಾದ ಆರ್.ಜಗದೀಶ್, ರೇಣು ಎ.ಎನ್, ಹಾಗೂ ಪತ್ರಿಕಾ ವಿನ್ಯಾಸಕಾರರಾದ ಎಸ್.ಸೋಮಶೇಖರ್, ಅಮುದ.ಎ ಹಾಗೂ ಸುದ್ದಿ ನಿರೂಪಕಿ ಲಕ್ಷ್ಮಿ ಶ್ರೀನಿವಾಸ್ ರವರನ್ನು ಕಾರ್ಮಿಕ ದಿನಾಚರಣೆ ಅಂಗವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ಎಸ್ ಲಕ್ಷ್ಮೀಶ್ ಪುರಸ್ಕೃತರ ಪರಿಚಯವನ್ನು ತಿಳಿಸಿಕೊಟ್ಟರು.
ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ ಚಂದ್ರಶೇಖರ್ ಸ್ವಾಗತಿಸಿ, ಖಜಾಂಚಿ ಎ.ಜಿ ಸುರೇಶ್‌ಕುಮಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ
ಹಿರಿಯ ಪತ್ರಕರ್ತರೂ ಸೇರಿದಂತೆ ಜಿಲ್ಲೆಯ ಎಲ್ಲಾ ಪತ್ರಕರ್ತರು ಉಪಸ್ಥಿತರಿದ್ದರು.