ಬಲಿಜ ಸಮುದಾಯಕ್ಕೆ ಸರ್ಕಾರ ಪೂರ್ಣ ಪ್ರಮಾಣದ 2ಎ ಮೀಸಲಾತಿ ಹಿಂದಿರುಗಿಸಬೇಕು : ಎಲ್.ವಿ.ಗೋವಿಂದಪ್ಪ ಆಗ್ರಹಿ

ಶ್ರೀನಿವಾಸಪುರ: ಬಲಿಜ ಸಮುದಾಯಕ್ಕೆ ಸರ್ಕಾರ ಪೂರ್ಣ ಪ್ರಮಾಣದ 2ಎ ಮೀಸಲಾತಿ ಹಿಂದಿರುಗಿಸಬೇಕು ಎಂದು ತಾಲ್ಲೂಕು ಬಲಿಜ ಸಮುದಾಯದ ಮುಖಂಡ ಎಲ್.ವಿ.ಗೋವಿಂದಪ್ಪ ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಬಲಿಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಬಲಿಜ ಸಮುದಾಯಕ್ಕೆ 2ಎ ಮೀಸಲಾತಿ ನೀಡಲಾಗಿತ್ತು. ಆದರೆ ಸಮುದಾಯದ ಗಮನಕ್ಕೆ ತರದೆ 3ಎ ಮೀಸಲಾತಿಗೆ ಸೇರಿಸಲಾಗಿತ್ತು. ಆದರೆ ಬಿ.ಎಸ್.ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದಾಗ, ಸಮುದಾಯದ ಮನವಿಗೆ ಸ್ಪಂದಿಸಿ, ಶಿಕ್ಷಣಕ್ಕೆ ಮಾತ್ರ 2ಎ ಮೀಸಲಾತಿ ನೀಡಲಾಯಿತು. ಆದರೆ ಉದ್ಯೋಗ ಮತ್ತಿತರ ವಿಷಯಗಳಿಗೆ 3ಎ ಮೀಸಲಾತಿಯೇ ಇತ್ತು ಎಂದು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ಬಿ.ಎಂ.ಪ್ರಕಾಶ್ ಮಾತನಾಡಿ, ಬಲಿಜ ಸಮುದಾಯ ಎಲ್ಲ ರಂಗಗಳಲ್ಲೂ ಹಿಂದುಳಿದಿದೆ. ಈ ಸಮುದಾಯವನ್ನು 3ಎ ಮೀಸಲಾತಿಗೆ ಸೇರಿಸುವುದರ ಮೂಲಕ ಅನ್ಯಾಯ ಮಾಡಲಾಗಿದೆ. ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸುವ ದೃಷ್ಟಿಯಿಂದ ಮತ್ತೆ 2ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
ಬಲಿಜ ಸಮುದಾಯಕ್ಕೆ 2ಎ ಮೀಸಲಾತಿ ಹಿಂದಿರುಗಿಸುವಂತೆ ಆಗ್ರಹಿಸಿ ಜ.27 ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಬಲಿಜ ಸಂಕಲ್ಪ ಸಭೆ ಏರ್ಪಡಿಸಲಾಗಿದೆ. ಅದು ರಾಜ್ಯ ಮಟ್ಟದ ಸಭೆಯಾಗಿದ್ದು ತಾಲ್ಲೂಕಿನ ಬಲಿಜ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಅಂದು ಬೆಳಿಗ್ಗೆ ಪಟ್ಟಣದಿಂದ ಫ್ರೀಡಂ ಪಾರ್ಕ್‍ಗೆ ಹೋಗಲು ಬಸ್ ಹಾಕಲಾಗಿದೆ ಎಂದು ಹೇಳಿದರು.
ತಾಲ್ಲೂಕು ಬಲಿಜ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಎಂ.ರಾಮಚಂದ್ರಯ್ಯ, ಮುಖಂಡರಾದ ರಾಮಪ್ಪ, ಕೃಷ್ಣಪ್ಪ, ಕೃಷ್ಣಮೂರ್ತಿ, ನಾರಾಯಣಸ್ವಾಮಿ, ಅರ್ಜುನ್, ಮುರಳಿ, ಕಲಾ ಶಂಕರ್ ಇದ್ದರು.