ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಪೌರ ಕಾರ್ಮಿಕರಿಗೆ ಸರ್ಕಾರ ವಿಶೇಷ ಸೌಲಭ್ಯ ಒದಗಿಸಬೇಕು. ಅವರ ಆರೋಗ್ಯ ರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಪುರಸಭಾ ಸದಸ್ಯೆ ಶಾಂತಮ್ಮ ಕೃಷ್ಣೇಗೌಡ ಹೇಳಿದರು. ಪಟ್ಟಣದ ಪುರಸಭಾ ಕಚೇರಿ ಆವರಣದಲ್ಲಿ ಗುರುವಾರ 90 ಮಂದಿ ಪೌರ ಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿ ಮಾತನಾಡಿ, ‘ಪೌರ ಕಾರ್ಮಿಕರು ಕಷ್ಟದ ಜೀವನ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಅವರಿಗೆ ನೆರವಾಗಲೆಂದು ಆಹಾರ ಪದಾರ್ಥ ವಿತರಣೆ ಮಾಡಲಾಗುತ್ತಿದೆ. ಈಚೆಗೆ ಕೋವಿಡ್ನಿಂದ ಮೃತಪಟ್ಟ ಪೌರ ಕಾರ್ಮಿಕ ನಾರಾಯಣಸ್ವಾಮಿ ಅವರ ಕುಟುಂಬಕ್ಕೆ ನನ್ನ ಅವಧಿಯ ಗೌರವ ಧನವನ್ನು ನೀಡುತ್ತೇನೆ. ಅವರ ಮಗಳ ಶಿಕ್ಷಣದ ಸಂಪೂರ್ಣ ವೆಚ್ಚ ಭರಿಸುತ್ತೇನೆ’ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಶೇಖರರೆಡ್ಡಿ ಮಾತನಾಡಿ, ಪೌರ ಕಾರ್ಮಿಕರು ಪಟ್ಟಣದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುವಾಗ ಸುರಕ್ಷತಾ ಕ್ರಮ ಅನುಸರಿಸಬೇಕು. ಪುರಸಭೆ ವತಿಯಿಂದ ನಿಡಲಾಗಿರುವ ಸ್ಯಾನಿಟೈಸರ್, ಕೈಗವಸು ಮತ್ತಿತರ ಪರಿಕರಗಳನ್ನು ಬಳಸಿಕೊಳ್ಳಬೇಕು. ದಾನಿಗಳು ನಿಡುವ ನೆರವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಪುರಸಭೆಯ ಉಪಾಧ್ಯಕ್ಷೆ ಆಯಿಷಾ ನವಾಜ್, ಸಿಇಒ ರಾಜೇಶ್ವರಿ, ಆರೋಗ್ಯ ನಿರೀಕ್ಷಕ ಪೃಥ್ವಿರಾಜ್, ಸುರೇಶ್, ನಾಗೇಶ್, ಶ್ರೀನಾಥ್, ಬಾಬು, ಮಂಜುನಾಥ್, ಶ್ರೀಧರರಾಜ್, ಸತೀಶ್, ಸಂತೋಷ್, ಚೆಂದು ಇದ್ದರು.
ಶ್ರೀನಿವಾಸಪುರ ತಾಲ್ಲೂಕಿನ ಹೆಬ್ಬಟ ಗ್ರಾಮದಲ್ಲಿ ಗುರುವಾರ ಗ್ರಾಮ ಪಂಚಾಯಿತಿ ಸದಸ್ಯ ಅನಂತಕುಮಾರ್ ಗ್ರಾಮಸ್ಥರಿಗೆ ಉಚಿತವಾಗಿ ಮಾಸ್ಕ್ ವಿತರಿಸಿದರು.