ಶ್ರೀನಿವಾಸಪುರ: ಸರ್ಕಾರಿ ನೌಕರರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ವಯೋನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕ ಹಾಗೂ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಂಗವಾದಿ ನಾಗರಾಜ್ ಅವರಿಗೆ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ 6 ಲಕ್ಷ ಸರ್ಕಾರಿ ನೌಕರರಿದ್ದಾರೆ. ಹಿಂದಿನ ಸರ್ಕಾರದಲ್ಲಿ ಶೇ.17 ರಷ್ಟು ಮಧ್ಯಂತರ ಪರಿಹಾರ ಪಡೆದುಕೊಳ್ಳುವಲ್ಲಿ ಸಂಘ ಯಶಸ್ವಿಯಾಯಿತು. ಈಗ ಎನ್ಪಿಎಸ್ ರದ್ದುಗೊಳಿಸಿ ಒಪಿಎಸ್ ಜಾರಿಗೆ ಸತತ ಪ್ರಯತ್ನ ನಡೆಸಲಾಗುತ್ತಿದೆ. ಆ ಬಗ್ಗೆ ಚರ್ಚಿಸಲು ಜ.6 ರಂದು ಮಂಗಳೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಚರ್ಚೆ ಬಳಿಕ ಮುಂದಿನ ನಿರ್ದಾರ ತೆಗೆದುಕೊಳ್ಳಲಾಗುವುದು. ಸಂಘದ ನಿರ್ದಾರಕ್ಕೆ ಎಲ್ಲ ಸರ್ಕಾರಿ ನೌಕರರು ಬದ್ಧರಾಗಿರಬೇಕು ಎಂದು ಹೇಳಿದರು.
ಬಂಗವಾದಿ ನಾಗರಾಜ್ ಮಾತನಾಡಿ, ಸಂಘದ ಇತರ ಪದಾಧಿಕಾರಿಗಳು ಹಾಗೂ ಸರ್ಕಾರಿ ನೌಕರರ ಸಹಕಾರದಿಂದಾಗಿ ಯಾವುದೇ ಅಡ್ಡಿಯಿಲ್ಲದೆ ಕಾರ್ಯನಿರ್ವಹಿಸಲು ಸಾಧ್ಯವಾಯಿತು. ಮುಂದೆ ಯಾರೇ ಬಂದರೂ ಸರ್ಕಾರಿ ನೌಕರರ ಹಿತರಕ್ಷಣೆಗಾಗಿ ಉತ್ತಮ ಕೆಲಸ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತರಾದ ಮುಖ್ಯ ಶಿಕ್ಷಕ ಬಂಗವಾದಿ ನಾಗರಾಜ್ ದಂಪತಿಯನ್ನು ಸನ್ಮಾನಿಸಲಾಯಿತು. ತಾಲ್ಲೂಕು ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರನ್ನಾಗಿ ಕಂದಾಯ ನಿರೀಕ್ಷಕ ಎಸ್.ವಿ.ಜನಾರ್ಧನ್ ಅವರನ್ನು ಆಯ್ಕೆ ಮಾಡಲಾಯಿತು.
ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಹಿರಿಯ ಉಪಾಧ್ಯಕ್ಷ ರುದ್ರಪ್ಪ, ಉಪಾಧ್ಯಕ್ಷ ನಾಗಭೂಷಣ್, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಅಶೋಕರೆಡ್ಡಿ, ನಟರಾಜ್, ಶ್ರೀನಿವಾಸಗೌಡ, ಶ್ರೀನಿವಾಸ್, ಅಪ್ಪೂರು ಮಂಜು, ಅಶೋಕ್, ವೇಣುಗೋಪಾಲ್, ನಾರಾಯಣರೆಡ್ಡಿ, ವಿ ತಿಪ್ಪಣ್ಣ, ಮುಖಂಡ ಕೆ.ಕೆ.ಮಂಜು ಇದ್ದರು.