ಕೋಲಾರ; ಫೆ.26: ಮಾ.1 ರಿಂದ ಸರ್ಕಾರಿ ನೌಕರರು 7ನೇ ವೇತನ ಆಯೋಗದ ವರದಿ ಜಾರಿಗಾಗಿ ಅನಿರ್ಧಿಷ್ಠಾವಧಿ ಮುಷ್ಕರ ಕೈಬಿಟ್ಟು ಜನಸಾಮಾನ್ಯರಿಗೆ ತೊಂದರೆಯಾಗದ ರೀತಿ ಸರ್ಕಾರದ ಜೊತೆ ಮಾತುಕತೆಗೆ ಮುಂದಾಗಬೇಕೆಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಸರ್ಕಾರಿ ನೌಕರರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರ್ಕಾರಿ ನೌಕರರ ಮುಷ್ಕರಕ್ಕೆ ನಮ್ಮ ಅಭ್ಯಂತರವಿಲ್ಲ. ಅವರ ನ್ಯಾಯಯುತ ಹಕ್ಕುಗಳಾದ 7ನೇ ವೇತನ ಆಯೋಗದ ವರದಿ ಜಾರಿ ಹಾಗೂ ಎನ್‍ಪಿಎಸ್ ರದ್ದತಿಗೆ ರಾಜ್ಯ ವ್ಯಾಪಿ ಮಾ.1ರಿಂದ ಅನಿರ್ಧಿಷ್ಠಾವಧಿ ಮುಷ್ಕರದಿಂದ ಜನಸಾಮಾನ್ಯರ ಕೆಲಸ ಕಾರ್ಯಗಳಿಗೆ ಇಲಾಖೆಗಳಲ್ಲಿ ತೊಂದರೆಯಾಗುವ ಜೊತೆಗೆ ಅತಿಮುಖ್ಯವಾಗಿ ಎಸ್ಸೆಎಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳು ನಡೆಯುವುದರಿಂದ ಈ ಮುಷ್ಕರದಲ್ಲಿ ಶಿಕ್ಷಕರು ಪಾಲ್ಗೊಂಡರೆ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುವುದಿಲ್ಲವೇ.
ಇದನ್ನೂ ಸಹ ಸರ್ಕಾರಿ ನೌಕರರು ಪರಿಗಣಿಸಬೇಕು. ಜೊತೆಗೆ ಈಗಾಗಲೇ ಸಿಬ್ಬಂದಿ ಕೊರತೆ ನೆಪದಲ್ಲಿ ಯಾವುದೇ ಕೆಲಸಗಳು ಕಚೇರಿಗಳಲ್ಲಿ ಜನಸಾಮಾನ್ಯರಿಗೆ ಆಗುತ್ತಿಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸರ್ಕಾರಿ ನೌಕರರು ಮುಷ್ಕರಕ್ಕೆ ಮುಂದಾದರೆ ಇನ್ನು ಜನರ ಕಷ್ಟಗಳಿಗೆ ಸ್ಪಂದಿಸುವವರು ಯಾರು.
ಈ ಅನಿರ್ಧಿಷ್ಠಾವಧಿ ಮುಷ್ಕರವನ್ನು ಸರ್ಕಾರಿ ನೌಕರರು ವಿದ್ಯಾರ್ಥಿಗಳ ಭವಿಷ್ಯ ಜನಸಾಮಾನ್ಯರ ಕಷ್ಟಗಳನ್ನು ಅರಿತು ಮುಷ್ಕರ ಕೈಬಿಟ್ಟು ಕನಿಷ್ಠ ದಿನಕ್ಕೆ 1 ತಾಸು ಬೇಕಾದರೆ ಕೆಲಸವನ್ನು ಬಹಿಷ್ಕರಿಸಲಿ. ಅದನ್ನು ಬಿಟ್ಟು ಈ ರೀತಿ ಮುಷ್ಕರಕ್ಕೆ ಮುಂದಾದರೆ ಆಗುವ ಅನಾಹುತಗಳು, ಅನಾನುಕೂಲಗಳ ಬಗ್ಗೆ ಮತ್ತೊಮ್ಮೆ ಚರ್ಚೆ ಮಾಡಿ ಅನಿರ್ಧಿಷ್ಠಾವಧಿ ಮುಷ್ಕರ ಕೈಬಿಟ್ಟು ಸರ್ಕಾರೊಂದಿಗೆ ಮಾತುಕತೆ ಮಾಡುವ ಮುಖಾಂತರ ಸಮಸ್ಯೆ ಬಗೆಹರಿಸಿಕೊಂಡು ಮುಷ್ಕರವನ್ನು ಕೈಬಿಡಬೇಕೆಂದು ಸರ್ಕಾರಿ ನೌಕರರನ್ನು ಪತ್ರಿಕಾ ಹೇಳಿಕೆ ಮುಖಾಂತರ ಮನವಿ ಮಾಡಿದ್ದಾರೆ.