ಬೆಂಗಳೂರು : ಹೊಸ ದರ ಪರಿಷ್ಕರಣೆ ಮಾಡಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (KERC) ವಿದ್ಯುತ್ ದರ ಇಳಿಕೆ ಮಾಡಿ ಬುಧವಾರ ಆದೇಶ ಹೊರಡಿಸಿದೆ. ಈ ಮೂಲಕ ರಾಜ್ಯದ ವಿದ್ಯುತ್ ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿದೆ. ಲೋಕಸಭೆ ಚುನಾವಣೆ ಬೆನ್ನಲ್ಲೇ ಗ್ರಾಹಕರಿಗೆ ಬಂಪರ್ ಕೊಡುಗೆ ನೀಡಿದೆ. 100 ಯೂನಿಟ್ಗಿಂತ ಹೆಚ್ಚು ಬಳಸುವವರಿಗೆ ಪ್ರತಿ ಯೂನಿಟ್ ಮೇಲೆ 1 ರೂಪಾಯಿ 10 ಪೈಸೆ ಇಳಿಕೆ ಮಾಡಲಾಗಿದೆ. ವಾಣಿಜ್ಯ ಬಳಕೆದಾರರಿಗೆ 1 ರೂಪಾಯಿ 25 ಪೈಸೆ ದರ ಇಳಿಕೆ ಮಾಡಲಾಗಿದೆ.
ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಯೂನಿಟ್ಗೆ 40 ಪೈಸೆ ಕಡಿತ ಮಾಡಲಾಗಿದ್ದು, ಖಾಸಗಿ ಏತ ನೀರಾವರಿ ಬಳಕೆದಾರರಿಗೆ 2 ರೂಪಾಯಿ ಇಳಿಕೆ ಮಾಡಲಾಗಿದೆ. 100 ಯೂನಿಟ್ಗಿಂತ ಹೆಚ್ಚು ಬಳಸುವವರಿಗೆ ಮಾತ್ರ ಹೊಸ ದರ ಮಾರ್ಚ್ 1ರಿಂದಲೇ ಅನ್ವಯವಾಗಲಿದೆ. ದರ ಹೆಚ್ಚಳ ಆಗಬಹುದು ಎಂದು ವದಂತಿ ಹಬ್ಬಿತ್ತು. ಆದರೆ ಇದೀಗ ಗ್ರಾಹಕರಿಗೆ ವಿದ್ಯುತ್ ದರದಲ್ಲಿ ಭಾರಿ ಕಡಿತ ಮಾಡಲಾಗಿದೆ. ಪರಿಷ್ಕೃತ ದರ ಮಾರ್ಚ್ 1 ರಿಂದ ಅನ್ವಯವಾಗಲಿದೆ. ಕಳೆದ ಹಣಕಾಸು ವರ್ಷದಲ್ಲಿ ಎಸ್ಕಾಂಗಳಿಗೆ 259 ಕೋಟಿ ರೂ. ಲಾಭವಾಗಿದೆ. ಇದರ ಲಾಭವನ್ನು ಬಳಕೆದಾರರಿಗೆ ನೀಡುವ ಉದ್ದೇಶದಿಂದ ದರವನ್ನು ಇಳಿಸಲಾಗಿದೆ ಎಂದು ಕೆ.ಇ.ಆರ್.ಸಿ ಹೇಳಿದೆ. ಇಳಿಕೆಯ ಪ್ರಮುಖಾಂಶ ಇಲ್ಲಿವೆ. ಗೃಹಬಳಕೆ ವಿದ್ಯುತ್ ಬಳಕೆದಾರರಿಗೆ ಶುಭ ಸುದ್ದಿ: 100 ಯೂನಿಟ್ಗಳಿಗಿಂತ ಹೆಚ್ಚಿನ ಯೂನಿಟ್ಗೆ 1 ರೂಪಾಯಿ 10 ಪೈಸೆ ಇಳಿಕೆ. ಅಂದರೆ ಇದರ ಲಾಭ 100 ಯುನಿಟ್ಗಿಂತ ಹೆಚ್ಚು ವಿದ್ಯುತ್ ಬಳಸುವವರಿಗೆ ಮಾತ್ರ ಸಿಗಲಿದೆ. ವಾಣಿಜ್ಯ ಬಳಕೆದಾರರಿಗೆ ಒಂದು ಯುನಿಟ್ ವಿದ್ಯುತ್ಗೆ 1 ರೂಪಾಯಿ 25 ಪೈಸೆ ಇಳಿಕೆ, ಕೈಗಾರಿಕೆಗಳಿಗೆ ಬಳಸುವ ವಿದ್ಯುತ್ ದರದಲ್ಲಿ ಯುನಿಟ್ಗೆ 50 ಪೈಸೆ ಇಳಿಕೆ ಮಾಡಲಾಗಿದೆ.
ಆಸ್ಪತ್ರೆ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಬಳಸುವ ವಿದ್ಯುತ್ ದರ ಒಂದು ಯುನಿಟ್ಗೆ 40 ಪೈಸೆ ಇಳಿಕೆ, ಖಾಸಗಿ ಆಸ್ಪತ್ರೆಗಳು ಹಾಗು ಖಾಸಗಿ ಶಾಲೆಗಳಿಗೆ – 50 ಪೈಸೆ ಇಳಿಕೆ, ಖಾಸಗಿ ಏತ ನೀರಾವರಿ ವಿದ್ಯುತ್ ಬಳಕೆದಾರರಿಗೆ ಗರಿಷ್ಠ ಲಾಭ ನೀಡಲಾಗಿದ್ದು, ಒಂದು ಯುನಿಟ್ಗೆ 2 ರೂಪಾಯಿ ಇಳಿಕೆ ಮಾಡಲಾಗಿದೆ. ಅಪಾರ್ಟ್ಮೆಂಟ್ಗಳಿಗೆ ಡಿಮ್ಯಾಂಡ್ ಚಾರ್ಜಸ್ನಲ್ಲಿ 10 ರೂ. ಇಳಿಕೆ ಪ್ರಕಟಿಸಲಾಗಿದೆ.