ಕೋಲಾರ:- ಕೋಲಾರದಲ್ಲಿ ಸವದತ್ತಿ ರೇಣುಕಾ ಯಲ್ಲಮ್ಮ ಕ್ಷೇಮಾಭಿವೃದ್ದಿ ಸೇವಾ ಟ್ರಸ್ಟ್ಗೆ ಸರ್ಕಾರಿ ಜಮೀನು ಮಂಜೂರು ಮಾಡಲು ಆಗ್ರಹಿಸಿ ಟ್ರಸ್ಟ್ನ ಗೌರವಾಧ್ಯಕ್ಷ ಕೆ.ಜಯದೇವ್, ಅಧ್ಯಕ್ಷ ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಎಂ.ಸೋಮಶೇಖರ್, ಖಜಾಂಚಿ ಮಾರ್ಜೇನಹಳ್ಳಿ ವಿ.ಬಾಬು ನೇತೃತ್ವದಲ್ಲಿ ಸಮುದಾಯದ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್ ಪದಾಧಿಕಾರಿಗಳು ಕೋಲಾರ ಜಿಲ್ಲೆಯಲ್ಲಿ ಪರಿಶಿಷ್ಟ ಜನಾಂಗಕ್ಕೆ ಸೇರಿದ ಶೇ.70ರಷ್ಟಿರುವ ಚಿಕ್ಕತಾಳಿ ಯಲ್ಲಮ್ಮ ಬಳಗದ ಜನಾಂಗವಿದ್ದು, ನಾವು ಮೂಲತಃ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಕೊಂಡು ಬಂದಿದ್ದರೂ ಕಾಂಗ್ರೆಸ್ ಪಕ್ಷ ನಮ್ಮನ್ನು ನಿರ್ಲಕ್ಷಿಸುತ್ತಲೇ ಬಂದಿದೆ ಎಂದು ತಿಳಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ 3 ಕ್ಷೇತ್ರಗಳಲ್ಲಿ ಎಸ್ಸಿ ಮೀಸಲಾತಿ ಇದ್ದರೂ ನಮಗೆ ಅವಕಾಶ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ 4.60 ಲಕ್ಷ ಇರುವ ಪರಿಶಿಷ್ಟರಲ್ಲಿ 2.80 ಲಕ್ಷ ಜನಸಂಖ್ಯೆ ಇರುವ ಚಿಕ್ಕತಾಳಿ ಸಮುದಾಯವಾದನಮಗೆ ಒಂದು ಕಡೆಯೂ ಅವಕಾಶ ನೀಡಲಿಲ್ಲ, ನಂತರ ಲೋಕಸಭಾ ಚುನಾವಣೆಯಲ್ಲಿ ಅವಕಾಶ ನೀಡಬಹುದು ಎಂದು ನಾವು ಕಾದೆವು ಆದರೆ ಅಲ್ಲಿಯೂ ಅನ್ಯಾಯವಾಯಿತು ಎಂದು ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ ನಮ್ಮ ಸಮುದಾಯಕ್ಕೆ ಟಿಕೆಟ್ ನೀಡಲು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲಿಲ್ಲ, ಆದರೂ ಜಿಲ್ಲೆಯಲ್ಲಿನ ನಮ್ಮ ಸಮುದಾಯ ಸಿದ್ದರಾಮಯ್ಯನವರ ಕೈಬಲಪಡಿಸಬೇಕು ಎಂದು ತೀರ್ಮಾನ ಕೈಗೊಂಡು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿತು ಎಂದು ತಿಳಿಸಿದರು.
ಈ ಅನ್ಯಾಯ ಹೋಗಲಾಡಿಸಿ ಚಿಕ್ಕತಾಳಿ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ ಮುಖಂಡರು, ಕೋಲಾರ ಜಿಲ್ಲೆಯಲ್ಲಿ ಆರ್ಥಿಕವಾಗಿ,ಶೈಕ್ಷಣಿಕವಾಗಿ ಮುಂದುವರೆಯಲು ಅನುಕೂಲವಾಗುವಂತೆ ಶಿಕ್ಷಣ ಸಂಸ್ಥೆ, ಸಮುದಾಯ ಭವನ ಪ್ರಾರಂಭಿಸಲು ಟ್ರಸ್ಟ್ಗೆ ಕೋಲಾರ ತಾಲ್ಲೂಕಿನ ಕಸಬಾ ಹೋಬಳಿ ಹೊನ್ನೇನಹಳ್ಳಿ ಗ್ರಾಮದ ಸರ್ವೇ ನಂ.19/2 ರಲ್ಲಿ ಇರುವ ಸರ್ಕಾರಿ ಜಮೀನು ನೀಡಲು ಮನವಿ ಮಾಡಿದರು.
ಅಥವಾ ಕೋಲಾರ ತಾಲ್ಲೂಕಿನ ಹುತ್ತೂರು ಹೋಬಳಿ ವಿಟ್ಟಪ್ಪನಹಳ್ಳಿ ಗ್ರಾಮದ ಸರ್ವೇ ನಂ.159 , ಅಥವಾ ವಕ್ಕಲೇರಿ ಹೋಬಳಿ ಮಂಗಸಂದ್ರಗ್ರಾಮದ ಸರ್ವೇ ನಂ.90ರಲ್ಲಿರುವ ಜಮೀನುಗಳಲ್ಲಿ ಯಾವುದಾದರೂ 16 ರಿಂದ 18 ಎಕರೆ ಮಂಜೂರು ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹಾಜರಿದ್ದು, ಚಿಕ್ಕ ತಾಳಿ ಸಮುದಾಯ ನಿರಂತರವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಕೊಂಡು ಬಂದಿದೆ ಎಂದು ತಿಳಿಸಿ, ಟ್ರಸ್ಟ್ ಬೇಡಿಕೆಯಂತೆ ಜಮೀನು ಮಂಜೂರು ಮಾಡಲು ಸಿಎಂಗೆ ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮುದಾಯದ ಬೇಡಿಕೆಯಂತೆ ಅತಿ ಶೀಘ್ರವಾಗಿ ಜಮೀನು ಮಂಜೂರು ಮಾಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಟ್ರಸ್ಟ್ನ ಗೌರವಾಧ್ಯಕ್ಷ ಕೆ.ಜಯದೇವ್, ಅಧ್ಯಕ್ಷ ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಎಂ.ಸೋಮಶೇಖರ್, ಖಜಾಂಚಿ ಮಾರ್ಜೇನಹಳ್ಳಿ ವಿ.ಬಾಬು, ಮುಖಂಡರಾದ ಪಿವಿಸಿ ಕೃಷ್ಣಪ್ಪ, ಕೆಇಬಿ ಚಂದ್ರು, ಮುಳಬಾಗಿಲು ವೆಂಕಟರಾಂ, ಕಾರ್ಗಿಲ್ ವೆಂಕಟೇಶ್, ಶ್ರೀನಿವಾಸ್, ಸುಬ್ಬರಾಯಪ್ಪ, ರಾಮಕೃಷ್ಣಪ್ಪ, ನಾರಾಯಣಸ್ವಾಮಿ, ಕೆಜಿಎಫ್ನ ಮಂಜುನಾಥ್, ಮುನಿಯಪ್ಪ ಮತ್ತಿತರರಿದ್ದರು.