ಕೋಲಾರ,ಜ.10: ನಾಮಪತ್ರ ಸಲ್ಲಿಸಿ ನೀವು ಹೋಗಿ ನಿಮ್ಮನ್ನು ನಾವು 1 ಲಕ್ಷ ಮತಗಳಿಂದ ಗೆಲ್ಲಿಸುವುದಾಗಿ ಎಂಎಲ್ಸಿ ನಜೀರ್ ಅಹಮದ್ ಸಿದ್ದರಾಮಯ್ಯರಿಗೆ ಭರವಸೆ ನೀಡಿದ್ದಾರೆ. ಸಿದ್ದರಾಮಯ್ಯ ಬಂದು ಹೋದರೆ ಸ್ಥಳೀಯರ ಸಮಸ್ಯೆಗಳನ್ನು ಆಲಿಸುವವರು ಯಾರು ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಯಾರಬ್ ಪ್ರಶ್ನಿಸಿದರು.
ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ನಜೀರ್ ಅಹಮದ್ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ಪ್ರತಿಕ್ರಿಯೆ ನೀಡಿದ ಅವರು, ನಾಮಪತ್ರ ಹಾಕಿ ಹೊರಟರೆ, ಅಭ್ಯರ್ಥಿಯಾದವರು ಕ್ಷೇತ್ರದ ಜನರ ಬಳಿಗೆ ಹೋಗುವುದು ಬೇಡವೇ? ಇಂತಹ ನಾಯಕರುಗಳಿಂದಲೇ ಅಲ್ಪಸಂಖ್ಯಾತರಿಗೆ ಅನ್ಯಾಯವಾಗುತ್ತಿರುವುದಾಗಿ ಹೇಳಿದರು.
ಇನ್ನು ಸತತವಾಗಿ ವಿಧಾನ ಪರಿಷತ್ ಸದಸ್ಯರಾಗಿಕೊಂಡು ಬಂದಿರುವ ನಜೀರ್ ಅಹಮದ್ ಅವರಿಂದ ಕೋಲಾರಕ್ಕೆ ಯಾವ ರೀತಿ ಕೊಡುಗೆ ಸಿಕ್ಕಿದೆ ಎನ್ನುವುದು ಅರ್ಥವಾಗುತ್ತಿಲ್ಲ. ಇದೀಗ ಏಕಾಏಕಿ ಬಂದು ಸಿದ್ದರಾಮಯ್ಯರನ್ನು ಗೆಲ್ಲಿಸುವಂತೆ ಕೋರುತ್ತಿರುವುದು ಖಂಡನೀಯವಾಗಿದೆ ಎಂದು ಕಿಡಿಕಾರಿದರು.
ಸಂಸದ ಎಸ್.ಮುನಿಸ್ವಾಮಿ ಅವರನ್ನು ಗೆಲ್ಲಿಸಿದ್ದ ಕಾಂಗ್ರೆಸ್‍ನ ಘಟಬಂಧನ್ ಬಿಜೆಪಿ ಬಿ ಟೀಂ ಎಂದರೆ ತಪ್ಪಾಗಲಾರದು. ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೆ ಈ ಘಟಬಂಧನ್ ಕೆಲಸ ಮಾಡುವುದಿಲ್ಲ, ಸಿದ್ದರಾಮಯ್ಯರಿಗಾಗಿ ಇದೀಗ ಬಂದು ಮತ ಕೇಳುತ್ತಿದ್ದಾರೆ.
ಹಾಗಾಗಿ ಅಲ್ಪಸಂಖ್ಯಾತರು ಮುಂದಿನ ಚುನಾವಣೆಯಲ್ಲಿ ಇವರಿಗೆ ತಕ್ಕಪಾಠ ಕಲಿಸಲು ಜೆಡಿಎಸ್ ಪಕ್ಷದಿಂದ ಕಣಕ್ಕೆ ಇಳಿದಿರುವ ಸ್ಥಳೀಯ ಸಿಎಂಆರ್ ಶ್ರೀನಾಥ್‍ರನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷ ವಜೀರ್ ಮಾತನಾಡಿ, ಈಗಾಗಲೇ ವರ್ತೂರು ಪ್ರಕಾಶ್‍ರನ್ನು 2 ಬಾರಿ ಶಾಸಕರನ್ನಾಗಿ ನೋಡಿದ್ದೇವೆ. ಇನ್ನು ಶಾಸಕ ಕೆ.ಶ್ರೀನಿವಾಸಗೌಡರು ಕ್ಷೇತ್ರದಲ್ಲಿ ಇದ್ದೂ ಇಲ್ಲದಂತಾಗಿದ್ದಾರೆ ಎಂದು ಲೇವಡಿ ಮಾಡಿದರು.
ಅನೇಕ ವರ್ಷಗಳಿಂದ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸಮಾಜಸೇವೆ ಮಾಡಿಕೊಂಡು ಬರುತ್ತಿರುವ ಸಿಎಂಆರ್ ಶ್ರೀನಾಥ್ ಅವರು ಕೊರೊನಾದಂತಹ ಕಷ್ಟ ಕಾಲದಲ್ಲಿಯೂ ನಿರಂತರ ಸಮಾಜ ಸೇವೆ ಮಾಡಿದ್ದಾರೆ. ಕೋಲಾರಕ್ಕೆ ಸಿದ್ದರಾಮಯ್ಯ ಬರುವ ಬಗ್ಗೆ ಮಾಹಿತಿ ಇದ್ದರೂ ಶ್ರೀನಾಥ್ ಅವರನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಣಕ್ಕೆ ಇಳಿಸಿದ್ದಾರೆ. ಹೀಗಾಗಿ ಈ ಬಾರಿ ಸಿಎಂಆರ್ ಶ್ರೀನಾಥ್ ಪರವಾಗಿ ಅಲ್ಪಸಂಖ್ಯಾತರು ಸಹ ಇದ್ದು, ಚುನಾವಣೆಯಲ್ಲಿ ಬೆಂಬಲಿಸಿ, ಇತರೆ ಪಕ್ಷದವರಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಅಮೀನ್, ಫೈನ್ ಬೇಕರಿ ಇಮ್ರಾನ್ ಉಪಸ್ಥಿತರಿದ್ದರು.