ಕೋಲಾರ,ಜೂ.03: ನನ್ನದೇನಿದ್ದರೂ ಎಲೆಕ್ಷನ್ ರಾಜಕಾರಣವೇ ಹೊರತು ಸೆಲೆಕ್ಷನ್ ರಾಜಕಾರಣ ಅಲ್ಲ ಅಂತ ಪ್ರತಿಪಾದಿಸುತ್ತಿದ್ದವರು. ತನ್ನ ಜೀವನದುದ್ದಕ್ಕೂ ಬೇರೆಯವರಿಗೆ ಅಧಿಕಾರ ಕೊಡಿಸುವಂತಹ ಶಕ್ತಿಯನ್ನು ಶ್ರೀನಿವಾಸಪುರ ಕ್ಷೇತ್ರದ ಜನತೆ ಅವರಿಗೆ ಮೈ ತುಂಬಿಸಿತ್ತು. ಅಂತಹ ಶಕ್ತಿ ಒಂದು ತನಗಾಗಿ ಅಧಿಕಾರ ಕೇಳಲು ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮನೆ ಒಳಕ್ಕೆ ಹೋಗುವ ದಯನೀಯ ಸ್ಥಿತಿ ರಮೇಶ್ ಕುಮಾರ್ ಅವರಿಗೆ ಬಂದಿರುವುದೇ ಎಂದು ಮುಖಂಡ ಶೇಷಾಪುರ ಗೋಪಾಲ್ ಕುಟುಕಿದರು.
ಕಳೆದ ನಾಲ್ಕೈದು ವರ್ಷಗಳ ಕೋಲಾರ ಅವಿಭಾಜ್ಯ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರ ರಾಜಕಾರಣವನ್ನ ನೋಡಿದಾಗ ನಮ್ಮ ಪುರಾಣಗಳ ಭಸ್ಮಾಸುರ ವಧೆ, ಶ್ರೀಮತಿ ಇಂದಿರಾಗಾಂಧಿಯವರ ರಾಜಕಾರಣದಲ್ಲಿ ಬಿಂದ್ರನ್ವಾಲೆ ಹತ್ಯೆ ಮತ್ತು ಕೋಲಾರ ಚಿಕ್ಕಬಳ್ಳಾಪುರದ ಘಟಬಂಧನ್ ರಾಜಕಾರಣಕ್ಕೆ ಬಹಳಷ್ಟು ಹೋಲಿಕೆ ಇರುವುದು ಕಂಡುಬರುತ್ತದೆ.
ಬಸ್ಮಾಸುರನ ತಪಸ್ ಶಕ್ತಿ ದೇವತೆಗಳಿಗೆ ಹೆದರಿಸಲು ಅಸಾಧ್ಯವಾದಾಗ ಮೋಹಿನಿ ನೃತ್ಯ ರೂಪದಲ್ಲಿ ಭಸ್ಮಾಸುರನ ವಧೆ ಆಗುತ್ತದೆ. ಅದೇ ರೀತಿ ತಾನೇ ಹುಟ್ಟಾಕಿದ ಬಿಂದ್ರನ್ವಾಲೆಯ ಉಗ್ರರೂಪವನ್ನು ಕೊನೆಗಾಣಿಸಲು ಇಂದಿರಾಗಾಂಧಿಯವರು ಆಪರೇಷನ್ ಬ್ಲೂ ಸ್ಟಾರ್ ಎಂಬ ವ್ಯೂಹವನ್ನು ರಚಿಸಬೇಕಾಗುತ್ತದೆ.
ಅದೇ ರೀತಿ ಕರ್ನಾಟಕ ರಾಜ್ಯಕಾರಣದಲ್ಲಿ ಶ್ರೀನಿವಾಸಪುರದ ರಮೇಶ್ ಕುಮಾರ್ ಎಂಬ ಒಂದು ಶಕ್ತಿಯನ್ನು ಹುಟ್ಟಾಕಿದ ಶ್ರೀನಿವಾಸಪುರ ಕ್ಷೇತ್ರದ ಮತದಾರರಿಗೆ ಘಟಬಂಧನ್ ಎಂಬ ಒಂದು ದೈತ್ಯಾಕಾರದ ಕ್ಯಾನ್ಸರ್ ಎಲ್ಲೆಲ್ಲಿ ಯಾರ್ಯಾರನ್ನ ಯಾವ ಯಾವ ರೀತಿಯಲ್ಲಿ ಕಬಳಿಸುತ್ತೋ ಎನ್ನುವ ಆತಂಕ ಈಗ ಗೋಚರಿಸುತ್ತಿದೆ.
ನಾನು ಕೆಲವೊಂದು ದಿನಗಳಿಂದ ಮಾಧ್ಯಮಗಳ ಮುಖಾಂತರ ಹೇಳುತ್ತಲೇ ಬರುತ್ತಿದ್ದೇನೆ ಈ ಘಟಬಂಧನ್ ಎಂಬ ಕ್ಯಾನ್ಸರ್ ಕಾಂಗ್ರೆಸ್ ಪಕ್ಷವನ್ನ ಮಾತ್ರವಲ್ಲದೆ ಕೋಲಾರ ಚಿಕ್ಕಬಳ್ಳಾಪುರದ ಇಡೀ ಸಮಾಜದ ಆರೋಗ್ಯವನ್ನು ಕದಡುವ ರೀತಿಯಲ್ಲಿ ಹರಡುತ್ತಿದೆ ಎಂದು. ಆದರೆ ಕಳೆದ ಲೋಕಸಭಾ ಚುನಾವಣೆ ಮತ್ತು ಅದರ ನಂತರದ ದಿನಗಳ ಕೆಲವೊಂದು ಬೆಳವಣಿಗೆಗಳನ್ನ ಗಮನಿಸಿದಾಗ ಈ ಘಟಬಂಧನ್ ಎಂಬ ಕ್ಯಾನ್ಸರ್ ಘಟಬಂಧನ್ ನಾಯಕತ್ವವನ್ನೇ ಕಬಳಿಸುವ ರೂಪ ಪಡೆಯುತ್ತಿರುವುದು ಸಾಮಾನ್ಯರಿಗೂ ಕಾಣಿಸುವಂತಿದೆ.
ಮಾಜಿ ಶಾಸಕರಾದ ಮಾನ್ಯ ರಮೇಶ್ ಕುಮಾರ್ ಅವರು 45 ವರ್ಷಗಳ ರಾಜಕಾರಣದಲ್ಲಿ ತನಗಾಗಿ ಮತ್ತು ತನ್ನ ಅಧಿಕಾರಕ್ಕಾಗಿ ಯಾರ ಬಾಗಿಲಿಗೂ ಹೋದವರಲ್ಲ ಅಂತ ಎಲ್ಲರಿಗೂ ಗೊತ್ತು. ನನ್ನದೇನಿದ್ದರೂ ಎಲೆಕ್ಷನ್ ರಾಜಕಾರಣವೇ ಹೊರತು ಸೆಲೆಕ್ಷನ್ ರಾಜಕಾರಣ ಅಲ್ಲ ಅಂತ ಪ್ರತಿಪಾದಿಸುತ್ತಿದ್ದವರು ಅವರು. ಆದರೆ ಅವರು ತನ್ನ ಜೀವನದುದ್ದಕ್ಕೂ ಬೇರೆಯವರಿಗೆ ಅಧಿಕಾರ ಕೊಡಿಸುವಂತಹ ಶಕ್ತಿಯನ್ನು ಶ್ರೀನಿವಾಸಪುರ ಕ್ಷೇತ್ರದ ಜನತೆ ಅವರಿಗೆ ಮೈ ತುಂಬಿಸಿತ್ತು. ಅಂತಹ ಶಕ್ತಿ ಒಂದು ತನಗಾಗಿ ಅಧಿಕಾರ ಕೇಳಲು ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ಮನೆ ಒಳಕ್ಕೆ ಹೋಗುವ ದಯನೀಯ ಸ್ಥಿತಿಯನ್ನು ನೋಡಿದ ಯಾರಿಗಾದರೂ ಅನ್ನಿಸುತ್ತದೆ ಇವರು ಯಾವುದೋ ಒತ್ತಡಗಳಿಗೆ ಮಣಿದು ಈ ಒಂದು ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ ಅಂತ. ಅವರ ಜೊತೆ ನಿಕಟವರ್ತಿಗಳಾಗಿ ಕೆಲಸ ಮಾಡಿದ ಯಾರಿಗಾದರೂ ಅನಿಸುತ್ತದೆ ಇವರನ್ನ ಪಕ್ಷದ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳ ಹತ್ತಿರ ಕರೆದುಕೊಂಡು ಹೋದವರು ಇವರನ್ನು ನೈತಿಕವಾಗಿ ಮತ್ತು ರಾಜಕೀಯವಾಗಿ ಮುಗಿಸಲೆಂದೇ ಹೋಗಿರುವವರು ಅಂತ.
ಕೆಲವೊಂದು ಕಾರಣಗಳಿಂದ ನಾನು ಸೈದ್ಧಾಂತಿಕವಾಗಿ ಮತ್ತು ರಾಜಕೀಯವಾಗಿ ರಮೇಶ್ ಕುಮಾರ್ ಅವರ ಜೊತೆ ಭಿನ್ನಾಭಿಪ್ರಾಯ ಹೊಂದಿರುವುದು ನಿಜ. ಆದರೆ ಶ್ರೀನಿವಾಸಪುರ ಕ್ಷೇತ್ರದ ಜನ ತಮ್ಮ 45 ವರ್ಷಗಳ ನಿಸ್ವಾರ್ಥ ಸೇವೆಯಿಂದ ಇವರನ್ನ ರಾಜ್ಯದಲ್ಲಿ ಒಂದು ಶಕ್ತಿಯಾಗಿ ಬೆಳೆಸಿರುವುದು ಸತ್ಯ. ರಮೇಶ್ ಕುಮಾರ್ ಅವರು ರಾಜ್ಯದ ರಾಜಕೀಯ ಪಟ್ಟ ಬದ್ಧ ಹಿತಾಶಕ್ತಿಗಳ ರಾಜಕೀಯ ಮೇಲಾಟಗಳಿಗೆ ದಾಳವಾಗಿ ಅವರ ರಾಜಕೀಯ ಚೇಷ್ಟಗಳನ್ನ ಪೂರೈಸಿಲಿಕ್ಕೆ ಹೋಗಿ ಈ ದಿನ ಕ್ಷೇತ್ರದ ಜನರು ಕೊಟ್ಟ ಅಧಿಕಾರವನ್ನು ಉಳಿಸಿಕೊಳ್ಳಲಿಕ್ಕೆ ಕೈಲಾಗದ ನಮ್ಮ ಮಾಜಿ ಶಾಸಕರು ತನ್ನ ರಾಜಕೀಯ ಜೀವನದಲ್ಲಿ ಏನು ಮಾಡುವುದಕ್ಕೆ ಇಚ್ಛೆ ಇರಲಿಲ್ಲವೋ ಅವುಗಳನ್ನೆಲ್ಲ ಮಾಡಲಿಕ್ಕೆ ಹೊರಟು ಈಗ ಗುರಿ ಮುಟ್ಟಲಿಕ್ಕೆ ಸಾಧ್ಯವಾಗದ ಸ್ಥಿತಿಯಲ್ಲಿ ಹತಾಶರಾಗಿರುವುದು ಅಷ್ಟೇ ಸತ್ಯವಾಗಿದೆ.
ಘಟಬಂಧನ್ ರಾಜಕಾರಣದಿಂದ ತಮ್ಮ ರಾಜಕೀಯ ಚೆಷ್ಟಗಳನ್ನ ತೀರಿಸಿಕೊಂಡ ನಾಯಕರುಗಳು ಕೆಸರಲ್ಲೇ ಬೆಳೆದ ತಾವರೆಯ ಹೂವಿನಂತೆ ತಮ್ಮಷ್ಟಕ್ಕೆ ತಾವು ಇದ್ದುಕೊಂಡು ಆ ಪಾಪದ ಮೂಟೆಗಳನ್ನ ರಮೇಶ್ ಕುಮಾರ್ ಅವರಿಗೆ ಕಟ್ಟಿದ್ದಂತು ನಿಜ ಆದರೆ ಅದರ ಪ್ರತಿಫಲವಾಗಿ ಅನಾಥರಾಗಿದ್ದು ಕ್ಷೇತ್ರದ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರುಗಳು.