ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಸರ್ಕಾರಿ ಶಾಲೆಗಳಲ್ಲಿ ಉಚಿತ ಹಾಗೂ ಗುಣಾತ್ಮಕ ಶಿಕ್ಷಣ ದೊರೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಬಿ.ಗೋಪಾಲಗೌಡ ಹೇಳಿದರು.
ಪಟ್ಟಣದ ಕರ್ನಾಟಕ ಮಾದರಿ ಸರ್ಕಾರಿ ಉನ್ನತೀಕೃತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಶಾಲೆಯ 15 ಶಿಕ್ಷರನ್ನು ಸನ್ಮಾನಿಸಿ ಮಾತನಾಡಿದ ಅವರು, ಈ ಶಾಲೆ ಮಾದರಿಯಾಗಿ ಶಿಕ್ಷಣ ನೀಡುತ್ತಿದೆ. ಆದ್ದರಿಂದಲೇ ಮಕ್ಕಳ ದಾಖಲಾತಿಗೆ ನೂಕುನುಗ್ಗಲು ಉಂಟಾಗಿದೆ ಎಂದು ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಲಕ್ಷ್ಮಣರೆಡ್ಡಿ ಮಾತನಾಡಿ, ಈ ಶಾಲೆಗೆ ಈಗಾಗಲೇ 400 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ದಾಖಲಾಗಲು ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ ಎಂದು ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಪಿ.ಎಸ್.ಮಂಜುಳ ಮಾತನಾಡಿ, ಸರ್ಕಾರಿ ಶಾಲೆಗೆ ಸೇರಲು ಮಕ್ಕಳು ಮುಗಿಬಿದ್ದಿರುವುದರ ಹಿಂದೆ, ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರ ಶ್ರಮವಿದೆ ಎಂದು ಹೇಳಿದರು.
ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾರೆಡ್ಡಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಜಿ.ವಿ.ಚಂದ್ರಪ್ಪ, ಎನ್.ಶಂಕರೇಗೌಡ, ರಾಧಾಕೃಷ್ಣ, ಲಕ್ಷ್ಮೀಗೌಡ ಇದ್ದರು.