ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ:- ಲಸಿಕೆ ಪಡೆಯುವ ಮೂಲಕ ಧನುರ್ವಾಯು ಹಾಗೂ ಗಂಟಲು ಮಾರಿ ರೋಗಗಳಿಂದ ರಕ್ಷಣೆ ಪಡೆಯುವಂತೆ ಸಮುದಾಯ ಆರೋಗ್ಯಾಧಿಕಾರಿ ಡಾ.ಕೆ.ಜ್ಯೋತಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ತಾಲ್ಲೂಕಿನ ಅರಾಭಿಕೊತ್ತನೂರು ಆರೋಗ್ಯ ಉಪಕೇಂದ್ರದಲ್ಲಿ ಸುತ್ತಮುತ್ತಲ ಗ್ರಾಮಗಳ ಶಾಲಾ ಮಕ್ಕಳಿಗೆ ಧನುರ್ವಾಯು ಹಾಗೂ ಗಂಟಲು ಮಾರಿ ತಡೆ ಲಸಿಕೆ ನೀಡಿ ಅವರು ಮಾತನಾಡುತ್ತಿದ್ದರು.
ಕೋವಿಡ್ ಹೆಮ್ಮಾರಿಯಿಂದಾಗಿ ಇಂದು ಶಾಲೆಗಳಿಗೆ ಮಕ್ಕಳು ಬರುವಂತಿಲ್ಲ ಆದ್ದರಿಂದ ಶಿಕ್ಷಕರ ಸಹಕಾರ ಪಡೆದು ಗ್ರಾಮಗಳಲ್ಲೇ ಲಸಿಕೆ ಅಭಿಯಾನ ನಡೆಸುತ್ತಿರುವುದಾಗಿ ತಿಳಿಸಿದರು.
ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ ಜನತೆಗೆ ಮಾರ್ಗದರ್ಶನ ನೀಡಬೇಕು, ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಪಡೆಯುವ ಮೂಲಕ ಕೋವಿಡ್ ಹೆಮ್ಮಾರಿಯ ವಿರುದ್ದ ಹೋರಾಡುವ ಶಕ್ತಿ ಪಡೆದುಕೊಳ್ಳಬೇಕು ಎಂದು ಮನವರಿಕೆ ಮಾಡಿಕೊಡಿ ಎಂದರು.
ಮಳೆಗಾಲವಾದ್ದರಿಂದ ನೀರು ಎಲ್ಲೆಂದರಲ್ಲಿ ನಿಂತು ಸಾಂಕ್ರಾಮಿಕ ರೋಗಗಳು ಆವರಿಸುವ ಭೀತಿ ಇದೆ, ಆದ್ದರಿಂದ ಸೊಳ್ಳೆಗಳ ನಿಯಂತ್ರಣಕ್ಕೆ ಜನತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ ಹೆಚ್.ವಿ.ವಾಣಿ ಮಾತನಾಡಿ, ಆರೋಗ್ಯ ಉಪಕೇಂದ್ರದ ವ್ಯಾಪ್ತಿಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಧನುರ್ವಾಯು,ಗಂಟಲು ಮಾರಿ ತಡೆಗೆ ಪ್ರತಿವರ್ಷದಂತೆ ಈ ವರ್ಷವೂ ಲಸಿಕೆ ಅಭಿಯಾನ ನಡೆಸುತ್ತಿದ್ದೇವೆ ಎಂದರು.
16 ವಯೋಮಾನದೊಳಗಿನವರಿಗೆ ಈ ಲಸಿಕೆ ನೀಡುತ್ತಿದ್ದು, ಇದನ್ನು ಪಡೆಯಲು ನಿಮ್ಮೊಂದಿಗೆ ಈ ವಯೋಮಾನದ ಇತರರನ್ನು ಕರೆತನ್ನಿ ಎಂದು ಸೂಚಿಸಿದರು.
ಗ್ರಾಮೀಣ ಜನತೆಯಲ್ಲಿ ಕೋವಿಡ್ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದ ಅವರು, ಜನತೆ ಕೋವಿಡ್ ತಡೆಗೆ ಲಸಿಕೆ ಪಡೆಯಲು ಮುಂದೆ ಬರಬೇಕು, ಇದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ ಎಂದು ಸ್ವಷ್ಟಪಡಿಸಿದರು.
ಸ್ವಚ್ಚಪರಿಸರವಿದ್ದರೆ ಮಾತ್ರ ಉತ್ತಮ ಆರೋಗ್ಯ ಎಂಬುದನ್ನು ಅರಿತು ಮನೆ ಮುಂದಿನ ಚರಂಡಿಗಳ ಸ್ವಚ್ಚತೆಗೆ ಒತ್ತು ನೀಡಿ, ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಬಿಸಾಡಿ ನೀರು ಹರಿದು ಹೋಗದೇ ಸೊಳ್ಳೆಗಳ ಉತ್ಪತ್ತಿಗೆ ಕಾರಣರಾಗದಿರಿ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್ ಹಾಜರಿದ್ದು, ವಿವಿಧ ಗ್ರಾಮಗಳ ಶಾಲಾ ಮಕ್ಕಳಿಗೆ ಮಾಹಿತಿ ನೀಡಿ ಕರೆಸಿ ಲಸಿಕೆ ಪಡೆಯಲು ನೆರವಾದರು.
ಶಿಕ್ಷಕರಾದ ಭವಾನಿ,ಸುಗುಣಾ, ಲೀಲಾ, ಫರೀದಾ, ವೆಂಕಟರೆಡ್ಡಿ, ಶ್ರೀನಿವಾಸಲು, ಡಿ.ಚಂದ್ರಶೇಖರ್, ಆಶಾ ಕಾರ್ಯಕರ್ತೆಯರಾದ ಅರುಣಮ್ಮ, ಚಂದ್ರಮ್ಮ, ಅಂಗನವಾಡಿ ಕಾರ್ಯಕರ್ತೆಯರಾದ ಮಂಜುಳಾ,ಗಿರಿಜಾ ಮತ್ತಿತರರಿದ್ದರು.