ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ:- ಲಸಿಕೆ ಹಾಕುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡಲು ಪೊಲೀಸರ ಸಹಕಾರ ಪಡೆಯುವಂತೆ ತಾಲ್ಲೂಕಿನ ಸುಗಟೂರು ಪ್ರಾಥಮಿಕ ಕೇಂದ್ರದ ಸಿಬ್ಬಂದಿಗೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸೂಚನೆ ನೀಡಿದರು.
ಶನಿವಾರ ಸುಗಟೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಲಸಿಕೆ ಅಭಿಯಾನ, ಕೋವಿಡ್ ಪರೀಕ್ಷೆ ಕುರಿತು ಖುದ್ದು ಪರಿಶೀಲನೆ ನಡೆಸಿ ಅವರು ಮಾತನಾಡುತ್ತಿದ್ದರು.
ಸುಗಟೂರು ಆರೋಗ್ಯ ಕೇಂದ್ರವನ್ನು ಸುವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸಿರುವ ಕುರಿತು ಅಲ್ಲಿನ ವೈದ್ಯಾಧಿಕಾರಿ ಡಾ.ಕೆ.ಕಾವ್ಯ ಅವರ ಕಾರ್ಯವನ್ನು ಪ್ರಶಂಶಿಸಿದ ಅವರು, ಲಸಿಕೆ ಮತ್ತು ಕೋವಿಡ್ ಟೆಸ್ಟ್ ಬೇರೆಬೇರೆ ಕಡೆಗಳಲ್ಲಿ ನಡೆಸಲು ಸೂಚಿಸಿದರು.
ಪ್ರಾಥಮಿಕ ಕೇಂದ್ರದ ಎಲ್ಲಾ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಡಿಸಿಯವರು, ಲಸಿಕೆ ಹಾಕಿಸಿಕೊಳ್ಳಲು ಸಾಮಾಜಿಕ ಅಂತರ ಮರೆತು ನಿಂತಿದ್ದ ಸಾರ್ವಜನಿಕರಿಗೆ ಬುದ್ದಿಹೇಳಿ ಕೋವಿಡ್ ಮಾರಿ ತಡೆಗೆ ಎಚ್ಚರಿಕೆ ವಹಿಸಿ ಎಂದು ಕಿವಿಮಾತು ಹೇಳಿದರು.
ಲಸಿಕೆ ಹಾಕುವ ಸಂಬಂಧ ಗುರುತಿನ ಚೀಟಿ ಅಪ್ಡೇಟ್ಅನ್ನು ಖುದ್ದು ಪರಿಶೀಲಿಸಿದ ಡಿಸಿಯವರು, ಕೋವಿಡ್ ಕುರಿತು ಆಸ್ಪತ್ರೆಗೆ ಬರುವವರಲ್ಲಿ ಜಾಗೃತಿ ಮೂಡಿಸಲು ಸೂಚಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿ ಕೋವಿಡ್ ಸೋಂಕಿನ ಕುರಿತು ಅರಿವು ಮೂಡಿಸಿ, ರೋಗ ಗ್ರಾಮಗಳಿಗೂ ವ್ಯಾಪಿಸಿರುವುದರಿಂದ ಹೆಚ್ಚಿನ ಮುಂಜಾಗ್ರತೆ ಅಗತ್ಯ ಎಂದರು.
ಸೋಂಕಿತರನ್ನು ಮನೆಯಲ್ಲೇ ಐಸೋಲೇಷನ್ ಆಗುವುದು ಬೇಡ, ಅವರನ್ನು ನವೊಲಿಸಿ ಕೋವಿಡ್ ಕೇರ್ ಸೆಂಟರ್ಗೆ ಕಳುಹಿಸಿ ಎಂದು ಸಲಹೆ ನೀಡಿದ ಅವರು, ಜನತೆಯೂ ಈ ವಿಷಯದಲ್ಲಿ ಸಹಕಾರ ನೀಡಬೇಕು ಎಂದರು.
ಲಸಿಕೆ ಹಾಕಿಸಿಕೊಳ್ಳಲು ಹೆಚ್ಚಿನ ಸಾರ್ವಜನಿಕರು ಬರುತ್ತಿರುವ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಅತ್ಯಗತ್ಯವಾಗಿದೆ ಈ ಹಿನ್ನಲೆಯಲ್ಲಿ ಪೋಲಿಸರ ನೆರವನ್ನು ಪಡೆಯಿರಿ ಎಂದರು.
ಪ್ರತಿಯೊಬ್ಬರಿಗೂ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿದೆ, ಲಸಿಕೆ ಲಭ್ಯತೆ ನೋಡಿಕೊಂಡು ಅಭಿಯಾನದ ವೇಗ ಹೆಚ್ಚಿಸಲಾಗುವುದು ಎಂದರು.
ಜಿಲ್ಲಾಧಿಕಾರಿಗಳಿಗೆ ಆಸ್ಪತ್ರೆ ಕಾರ್ಯದ ಕುರಿತು ಮಾಹಿತಿ ನೀಡಿದ ವೈದ್ಯಾಧಿಕಾರಿ ಡಾ.ಕಾವ್ಯ, ಕೋವಿಡ್ ಟೆಸ್ಟ್ ಪ್ರಮಾಣವನ್ನು ಹೆಚ್ಚಿಸಲಾಗಿದೆ, ಗ್ರಾಮ ಪಂಚಾಯಿತಿಗಳ ಸಹಕಾರ ಪಡೆದು ಸೊಂಕು ನಿವಾರಕ ಸಿಂಪಡಣೆಗೂ ಕ್ರಮ ಕೈಗೊಳ್ಳಲಾಗಿದೆ, ಸೋಂಕಿತರಿಗೆ ಅರಿವು ಮೂಡಿಸಿ ಕೋವಿಡ್ ಕೇರ್ ಸೆಂಟರ್ಗೆ ಕಳುಹಿಸುವ ಕಾರ್ಯವನ್ನು ಮಾಡುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸುಗಟೂರು ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಡಾ.ಕಾವ್ಯ ಕೆ., ಫಾರ್ಮಾಸಿಸ್ಟ್ ಶೋಭಾ, ಶುಶ್ರೂಷಕಿ ವರಲಕ್ಷ್ಮಿ, ಎಎನ್ಎಂ ನಂದಿನಿ, ಪ್ರಯೋಗಾಲಯ ತಂತ್ರಜ್ಞೆ ಹೇಮಾ ಮತ್ತಿತರರಿದ್ದರು.