ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ: ಕೃಷಿ ವಿಜ್ಞಾನ ಕೇಂದ್ರ, ಕೋಲಾರ ಹಾಗೂ ಕೃಷಿ ಇಲಾಖೆ, ಆತ್ಮ ಯೋಜನೆ, ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ರೈತರಿಗೆ “ಗರೀಬ್ ಕಲ್ಯಾಣ ಸಮ್ಮೇಳನ ಹಾಗೂ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ” ನೇರ ಪ್ರಸಾರ ಕಾರ್ಯಕ್ರಮವನ್ನು ದಿನಾಂಕ 31.05.2022 ರಂದು ಕೃಷಿ ವಿಜ್ಞಾನ ಕೇಂದ್ರ, ಕೋಲಾರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ “ಗರೀಬ್ ಕಲ್ಯಾಣ ಸಮ್ಮೇಳನ ಹಾಗೂ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ” ಯೋಜನೆಗೆ ಚಾಲನೆ ನೀಡಿದ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ದೇಶದ ರೈತರನ್ನು ಉದ್ದೇಶಿಸಿ ಇದು ಸಣ್ಣ ಮತ್ತು ಅತಿಸಣ್ಣ ರೈತರಿಗೆ ಖಾತ್ರಿಪಡಿಸಿದ ಆದಾಯದ ಬೆಂಬಲವನ್ನು ಒದಗಿಸುವ ಐತಿಹಾಸಿಕ ಕಾರ್ಯಕ್ರಮವಾಗಿರುತ್ತದೆ. ಈ ಕಾರ್ಯಕ್ರಮದಡಿ 2 ಹೆಕ್ಟೇರ್‍ವರೆಗೆ ಕೃಷಿ ಭೂಮಿ ಹೊಂದಿರುವ ದುರ್ಬಲ ರೈತ ಕುಟುಂಬಗಳು, ತಮ್ಮ ಹೂಡಿಕೆಯನ್ನು ಮತ್ತು ಇತರ ಅಗತ್ಯಗಳನ್ನು ಖಚಿತಪಡಿಸಿಕೊಳ್ಳಲು ವರ್ಷಕ್ಕೆ ರೂ. 6000/- ರಂತೆ ನೇರ ವರಮಾನ ಬೆಂಬಲವನ್ನು ಒದಗಿಸಲಾಗುವುದು. ಈ ಆದಾಯವನ್ನು ನೇರವಾಗಿ ಫಲಾನುಭವಿಯ ರೈತರ ಬ್ಯಾಂಕ್À ಖಾತೆಗಳಿಗೆ ವರ್ಗಾಯಿಸಲಾಗುವುದು. ರೂ. 2000/-ರಂತೆ ಮೂರು ಸಮಾನ ಕಂತುಗಳಲ್ಲಿ ನಗದನ್ನು ಜಮೆ ಮಾಡಲಾಗುವುದು ಎಂದು ತಿಳಿಸಿದರು ಹಾಗೂ 11ನೇ ಕಂತನ್ನು ನೇರವಾಗಿ ರೈತರ ಖಾತೆಗೆ ವರ್ಗಾಯಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೃಷಿ ಉಪನಿರ್ದೇಶಕರು, ಶ್ರೀಮತಿ ಪಂಕಜರವರು ಮಾತನಾಡಿ, ಪ್ರಸ್ತುತ ಸಾಲಿನ ಕೃಷಿ ಇಲಾಖೆಯ ಕಾರ್ಯಕ್ರಮಗಳ ಹಾಗೂ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಇತ್ತೀಚಿನ ದಿನಗಳಲ್ಲಿ ರೈತರಿಗೆ ಸಾಲ ದೊರೆಯುವುದು ದುರ್ಲಭ ಆಗಿರುವ ಪರಿಸ್ಥಿತಿಯಲ್ಲಿ ಇಂತಹ ಒಂದು ಸೌಲಭ್ಯ ರೈತರಿಗೆ ಖಂಡಿತವಾಗಿ ಸಹಾಯವಾಗುವುದು ಎಂದು ತಿಳಿಸಿದರು. ಡಾ. ಅನಿಲಕುಮಾರ್ ಎಸ್, ಪ್ರಭಾರ ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ ಇವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ರೈತರಿಗೆ ನೀಡಿದರು.
ನಂತರ ಆಯೋಜಿಸಲಾದ ತಾಂತ್ರಿಕ ಅಧಿವೇಶನದಲ್ಲಿ ಡಾ. ಶಶಿಧರ್ ಕೆ.ಆರ್, ವಿಜ್ಞಾನಿ (ರೇಷ್ಮೆಕೃಷಿ), ಕೆವಿಕೆ ಇವರು ಮಾತನಾಡಿ, ಕೃಷಿಯಲ್ಲಿ ತ್ಯಾಜ್ಯಗಳನ್ನು ಬಳಸಿ ಕಾಂಪೋಸ್ಟ್ ತಯಾರಿಕೆ ಹಾಗೂ ಸ್ವಚ್ಚತಾ ಅಭಿಯಾನ ಬಗ್ಗೆ ತಿಳಿಸಿದರು.
ಡಾ. ಚಿಕ್ಕಣ್ಣ ಜಿ.ಎಸ್, ವಿಜ್ಞಾನಿ (ಗೃಹ ವಿಜ್ಞಾನ), ಕೆವಿಕೆ ಇವರು ಮಾತನಾಡಿ, ಒಂದು ಜಿಲ್ಲೆ ಒಂದು ಉತ್ಪನ್ನ ಬಗ್ಗೆ ಮಾಹಿತಿ ನೀಡಿದರು.
ಶ್ರೀಮತಿ ಸ್ವಾತಿ ಜಿ.ಆರ್, ವಿಷಯ ತಜ್ಞರು (ಹವಾಮಾನ ಶಾಸ್ತ್ರ), ಕೆವಿಕೆ ಇವರು ಮಾತನಾಡಿ, ಕೃಷಿಯಲ್ಲಿ ಹವಾಮಾನ ಮುನ್ಸೂಚನೆಯ ಮಹತ್ವ ಹಾಗೂ ಹವಾಮಾನ ಆಧಾರಿತ ಮೊಬೈಲ್ ತಂತ್ರಾಂಶಗಳ ಪಾತ್ರಗಳ ಕುರಿತು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಎಲ್ಲ ಸಿಬ್ಬಂದಿ ವರ್ಗದವರು, ಕೃಷಿ ಇಲಾಖೆ ಆತ್ಮ ಯೋಜನೆಯ ಸಿಬ್ಬಂದಿಗಳು ಭಾಗವಹಿಸಿದ್ದರು. ಸದರಿ ಕಾರ್ಯಕ್ರಮದಲ್ಲಿ ಸುಮಾರು 70 ರೈತರು ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಂಡರು.