ಕನ್ನಡ ಸಾಹಿತ್ಯ, ಸಂಸ್ಕøತಿ ಬಗ್ಗೆ ಅಪಾರ ಅಭಿಮಾನ ಇರುವ “ಆತಿಥ್ಯರತ್ನ” ಪ್ರಶಸ್ತಿ ಪುರಸ್ಕøತ ಹೋಟೆಲ್ ಉದ್ಯಮಿ ಜಗನ್ನಾಥ ಪೈ ಗಂಗೊಳ್ಳಿಯಲ್ಲಿ ಫೆ.19 ರಂದು ರವಿವಾರ ನಡೆಯಲಿರುವ “ಗಂಗಾವಳಿ” ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಲಿದ್ದ ಶ್ರೀಯುತ ಜಗನ್ನಾಥ್ ವಿ. ಪೈಯವರು 27ನೇ ಅಕ್ಟೋಬರ್ 1947ರಂದು ಈಗಿನ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದಲ್ಲಿ ದಿ. ವಾಮನ ಪೈ ಹಾಗೂ ಆನಂದಿ ಪೈ ದಂಪತಿಗಳ 4ನೇ ಸುಪುತ್ರರಾಗಿ ಜನಿಸಿದರು. ತಮ್ಮ ಪ್ರೌಢಶಾಲಾ ಶಿಕ್ಷಣವನ್ನು ಗಂಗೊಳ್ಳಿಯ ಎಸ್. ವಿ. ಹೈಸ್ಕೂಲಿನಲ್ಲಿ ಮುಗಿಸಿದರು.
ಹೋಟೆಲ್ ಉದ್ಯಮದಲ್ಲಿ ಕೆಲವು ವರ್ಷ ಅನುಭವ ಪಡೆದು 1973ರಲ್ಲಿ ತಮ್ಮದೇ ಸ್ವಂತ ಹೋಟೆಲನ್ನು ಬೆಂಗಳೂರಿನ ಗಾಂಧಿ ಬಜಾರಿನಲ್ಲಿ “ಸನ್ಮಾನ್ ಕೆಫೆ” ಎಂಬ ಹೆಸರಿನಲ್ಲಿ ಪ್ರಾರಂಭಿಸಿದರು. ರುಚಿಕರವಾದ ತಿಂಡಿ ತಿನಿಸುಗಳನ್ನು ಶುಚಿಯಾದ ವಾತಾವರಣದಲ್ಲಿ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಒದಗಿಸಿ ಸನ್ಮಾನ್ ಕೆಫೆಯನ್ನು ಬಹು ಬೇಗ ಯಶಸ್ವಿ ಹೋಟೆಲಾಗಿ ಬೆಳೆಸಿದರು. 1973 ರಿಂದ ಇಂದಿನವರೆಗೆ ಹಂತ ಹಂತವಾಗಿ ಕಠಿಣ ಪರಿಶ್ರಮದಿಂದ ಹೊಸ ಹೋಟೆಲುಗಳನ್ನು ಪ್ರಾರಂಭಿಸಿ ಪೈ ಹೋಟೆಲ್ ಸಮೂಹವನ್ನು ಯಶಸ್ವಿಯಾಗಿ ಬೆಳೆಸಿಕೊಂಡು ಬಂದ ಕೀರ್ತಿ ಶ್ರೀಯುತ ಜಗನ್ನಾಥ್ ವಿ. ಪೈಯವರಿಗೆ ಸಲ್ಲುತ್ತದೆ. ಇಂದು ಪೈ ಹೋಟೆಲ್ ಸಮೂಹ 10 ಶಾಖೆಗಳನ್ನು ಹೊಂದಿ ಒಂದು ಬೃಹತ್ ಸಂಸ್ಥೆಯಾಗಿ ಬೆಳೆದು ನಿಂತಿದೆ. ಬೆಂಗಳೂರಿನಲ್ಲಿ 7 ಶಾಖೆಗಳ ಜೊತೆಗೆ ಮೈಸೂರು, ಹುಬ್ಬಳ್ಳಿ ಹಾಗೂ ಆಂಧ್ರಪ್ರದೇಶದ ತಿರುಪತಿಗಳಲ್ಲಿ ಶಾಖೆಗಳನ್ನು ಹೊಂದಿ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿದೆ. ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಸಂಸ್ಥೆಯ 11 ಶಾಖೆಯನ್ನು ತಮ್ಮ ಸ್ವಂತ ಜಮೀನಲ್ಲಿ ಪ್ರಾರಂಭಿಸುವ ದಿಸೆಯಲ್ಲಿ ಈಗ ಶ್ರೀಯುತ ಜಗನ್ನಾಥ್ ವಿ. ಪೈಯವರು ಕಾರ್ಯಪ್ರವೃತ್ತರಾಗಿದ್ದಾರೆ.
ಇಂದು ಒಂದು ಹೆಮ್ಮರವಾಗಿ ಬೆಳೆದು ನಿಂತಿರುವ ಪೈ ಹೋಟೆಲ್ ಸಮೂಹ ಸುಮಾರು 2000 ಜನರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಟ್ಟಿದೆ. ಪೈ ಹೋಟೆಲ್ ಸಮೂಹದ ಏಳಿಗೆಯಲ್ಲಿ ಸಿಬ್ಬಂದಿಗಳ ಪಾಲು ಮಹತ್ವದ್ದಾಗಿದೆ. ಎಲ್ಲಾ ಕಾರ್ಮಿಕರೊಂದಿಗೆ ಪೈ ಹೋಟೆಲ್ ಸಮೂಹ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡು ಬಂದಿದೆ. ಹೊರ ಊರುಗಳಿಂದ ಬಂದ ಸಿಬ್ಬಂದಿಗಳಿಗೆ ಉಳಿದುಕೊಳ್ಳುವ ವಸತಿ ಸೌಲಭ್ಯದ ವ್ಯವಸ್ಥೆಯನ್ನು ಮಾಡಿಕೊಟ್ಟಿರುವುದು ಪೈ ಹೋಟೆಲ್ ಸಮೂಹದ ಒಂದು ಹೆಗ್ಗಳಿಕೆ. 25-30 ವರ್ಷಗಳಿಂದ ಸತತವಾಗಿ ಜೊತೆಗಿರುವ ಸುಮಾರು 10 ಸಿಬ್ಬಂದಿಗಳಿಗೆ ಕುಟುಂಬ ಸಮೇತವಾಗಿರಲು ಉಚಿತ ವಸತಿ ಸೌಲಭ್ಯ ಒದಗಿಸಿ ಕೊಟ್ಟಿದೆ.
ಸಮಾಜ ಸೇವೆಯಲ್ಲಿ ಪೈ ಹೋಟೆಲ್ ಸಮೂಹದ ರೂವಾರಿಯಾಗಿರುವ ಶ್ರೀಯುತ ಜಗನ್ನಾಥ್ ವಿ. ಪೈಯವರು ತಮ್ಮದೇ ಆದ ಕೊಡುಗೆಯನ್ನು ಕೊಟ್ಟಿರುತ್ತಾರೆ. ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುವುದರಲ್ಲಿ ಶ್ರೀಯುತ ಜಗನ್ನಾಥ್ ವಿ. ಪೈಉವರು ಎತ್ತಿದ ಕೈ. ತಾವು ಓದಿದ ಗಂಗೊಳ್ಳಿಯ ಶಾಲೆಯ ಹೊಸ ಕಟ್ಟಡ ಪ್ರಾರಂಭಿಸಲು ಕೊಡುಗೈಯಿಂದ ದೇಣಿಗೆ ಕೊಡುವುದರ ಜೊತೆಗೆ ದೇಣಿಗೆ ಸಂಗ್ರಹ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುತ್ತಾರೆ. ನೂರಾರು ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಪ್ರತಿವರ್ಷ ಧನ ಸಹಾಯ ಮಾಡುತ್ತಿದ್ದಾರೆ. ತಮ್ಮ ಧರ್ಮಪತ್ನಿ ಶ್ರೀಮತಿ ಶಾಂತ ಪೈಯವರು ಓದಿದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಕಾಲೇಜಿನ ಹೊಸ ಕಟ್ಟಡಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತಮ್ಮ ಕೈಲಾದ ಧನಸಹಾಯ ಮಾಡಿರುತ್ತಾರೆ. ಹಲವಾರು ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಉಚಿತವಾಗಿ ಸಭಾಂಗಣವನ್ನು ಒದಗಿಸಿ ಕೊಟ್ಟಿರುತ್ತಾರೆ. ಕನ್ನಡ ಸಾಹಿತ್ಯದ ಅಭಿವೃದ್ಧಿಗಾಗಿ ಯುವ ಬರಹಗಾರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.
ಶ್ರೀಯುತ ಜಗನ್ನಾಥ್ ವಿ. ಪೈಯವರಿಗೆ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಹಲವಾರು ಪ್ರಶಸ್ತಿಗಳು ಲಭ್ಯವಾಗಿವೆ.
1) 2001ರಲ್ಲಿ ಕರ್ನಾಟಕ ಹೋಟೆಲ್ ಅಸೋಸಿಯೇಶನ್ರವರ “ಆತಿಥ್ಯ ರತ್ನ” ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ.
2) 2012, 2013, 2014 ಸತತವಾಗಿ ಮೂರು ವರ್ಷ ಶ್ರೀಯುತರಿಗೆ ಬೆಂಗಳೂರಿನ ಅಭಿನಂದನಾ ಸಾಂಸ್ಕøತಿಕ ಟ್ರಸ್ಟ್ನವರು “ಪ್ರತಿಷ್ಠಿತ ವ್ಯಕ್ತಿ” ಎಂಬ ಬಿರುದನ್ನು ಕೊಟ್ಟು ಅಭಿನಂದಿಸಿದ್ದಾರೆ.
3) 2013ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯಿಂದ ಪ್ರತಿಷ್ಠಿತ “ಕೆಂಪೇಗೌಡ ಪ್ರಶಸ್ತಿ” ಇವರಿಗೆ ಲಭ್ಯವಾಗಿದೆ.
4) 2014ರಲ್ಲಿ ಬೆಂಗಳೂರು ಜಿ.ಎಸ್.ಬಿ. ಸಮಾಜದಿಂದ “ಅತ್ಯುತ್ತಮ ಬಿಜಿನೆಸ್ ಮ್ಯಾನ್” ಎಂಬ ಬಿರುದು ದೊರಕಿದೆ.
ಹೀಗೆ ಅವರ ಸಮಾಜ ಸೇವೆಯನ್ನು ಗುರುತಿಸಿ ಹತ್ತು ಹಲವಾರು ಪ್ರಶಸ್ತಿಗಳು ಶ್ರೀಯುತ ಜಗನ್ನಾಥ್ ವಿ. ಪೈಯವರಿಗೆ ಲಭಿಸಿವೆ.
ಸದಾ ಹಸನ್ಮುಖಿಯಾಗಿರುವ ಶ್ರೀ ಜಗನ್ನಾಥ್ ವಿ. ಪೈ ರವರು 75ನೇ ಹರೆಯದಲ್ಲೂ ಉತ್ಸಾಹದ ಚಿಲುಮೆಯಾಗಿದ್ದಾರೆ. ಸಮಾಜಕ್ಕೆ ತನ್ನ ಕೈಲಾದ ಸಹಾಯವನ್ನು ನಿಸ್ವಾರ್ಥ ಮನೋಭಾವದಿಂದ ಮಾಡಬೇಕೆನ್ನುವುದೇ ಅವರ ಹೆಬ್ಬಯಕೆ.
ಕನ್ನಡ ಭಾಷೆ ಉಳಿಯಬೇಕು, ಬೆಳೆಯಬೇಕು. ಕುಂದ ಕನ್ನಡ ಭಾಷೆ ರಾಜ್ಯ ಮಟ್ಟದಲ್ಲಿ ಗುರುತಿಸಲ್ಪಡಬೇಕು. ಕುಂದಾಪ್ರ ಕನ್ನಡದ ಸಂಸ್ಕøತಿ ಉಳಿಯಬೇಕು ಎನ್ನುವ ಆಶಯವನ್ನು ಹೊಂದಿರುವ ಸಾಹಿತ್ಯಾಭಿಮಾನಿ ಜಗನ್ನಾಥ ಪೈ ಯವರು ಅವರು ಕಲಿತ ಶಾಲೆಯ ವಠಾರದಲ್ಲಿ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ ತಾಲೂಕು ಸಮ್ಮೇಳನ ಉದ್ಘಾಟನೆಗೆ ಆಗಮಿಸುತ್ತಿರುವುದು ವಿಶೇಷವಾಗಿದೆ.