

ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ, ಸಮ್ಮೇಳನ ಸಮಿತಿ, ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪ. ಪೂ. ಕಾಲೇಜು ವಠಾರದಲ್ಲಿ ಇಂದು ಫೆ.19 ರಂದು ಏರ್ಪಡಿಸಿರುವ ಗಂಗಾವಳಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಗಂಗೊಳ್ಳಿ ಸರ್ವ ರೀತಿಯಲ್ಲಿ ಸಿದ್ಧಗೊಂಡಿದೆ. ವಿವಿಧ ಸಂಘಟನೆಗಳಿಂದ ಸ್ವಾಗತ ಕಮಾನುಗಳು, ಪ್ರಚಾರ ಫಲಕಗಳು ಅಳವಡಿಸಲ್ಪಟ್ಟಿದ್ದು ಕನ್ನಡ ಬಾವುಟಗಳಿಂದ ಬೀದಿ ಶೃಂಗಾರಗೊಂಡಿದೆ.
ಸರಸ್ವತಿ ವಿದ್ಯಾಲಯ ವಠಾರದಲ್ಲಿ ಶಾಮಿಯಾನದ ಚಪ್ಪರ ಹಾಕಿಸಲಾಗಿದ್ದು, ಕಾಲೇಜಿನ ವಿಶಾಲ ವೇದಿಕೆಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ವಸ್ತು ಹಾಗೂ ಪುಸ್ತಕ ಮಳಿಗೆಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಊಟೋಪಚಾರಕ್ಕಾಗಿ “ವಿಠಲ ರಕುಮಾಯಿ” ದೇವಸ್ಥಾನದ ಭೋಜನ ಶಾಲೆ ಹಾಗೂ ಶಾಲಾ ಸಭಾಂಗಣದಲ್ಲಿ ವ್ಯವಸ್ಥೆ ಆಗಿದೆ. ವಾಹನ ನಿಲುಗಡೆಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣದೊಂದಿಗೆ ಸಮ್ಮೇಳನ ಚಟುವಟಿಕೆ ಆರಂಭಗೊಳ್ಳಲಿದ್ದು, 8:30ಕ್ಕೆ ಸಮ್ಮೇಳನಾಧ್ಯಕ್ಷರು, ಕನ್ನಡ ಭುವನೇಶ್ವರಿ ದೇವಿಯ ಪುರಮೆರವಣಿಗೆ ರಾಮ ಮಂದಿರದಿಂದ ಕಾಲೇಜು ತನಕ ನಡೆಯಲಿದೆ. ಬೆಳಿಗ್ಗೆ 9:30ಕ್ಕೆ ಸಮ್ಮೇಳನದ ಸಭಾ ಕಾರ್ಯಕ್ರಮಗಳು ಆರಂಭಗೊಳ್ಳುತ್ತವೆ. ಸಮ್ಮೇಳನದ ಸಭಾ ಕಾರ್ಯಕ್ರಮದೊಂದಿಗೆ ಗಾನ ಲಹರಿ, ಚಿಣ್ಣರ ವಾದ್ಯ ವೈವಿಧ್ಯ, ಕುಂದಾಪ್ರ ಕನ್ನಡ ಪ್ರಹಸನ, ಬರ್ಬರೀಕ ನಾಟಕ ಪ್ರದರ್ಶನ ವಿಶೇಷ ಆಕರ್ಷಣೆಯಾಗಿದೆ.
ಸಮ್ಮೇಳನಾಧ್ಯಕ್ಷ ಕೋ. ಶಿವಾನಂದ ಕಾರಂತರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭದ ನಂತರ ಕವಿಗೋಷ್ಠಿ, ಕೋ. ಶಿವಾನಂದ ಕಾರಂತ ಬದುಕು ಮತ್ತು ಬರಹ ವಿಚಾರ ಗೋಷ್ಠಿ, ಕುಂದಾಪ್ರ ಕನ್ನಡ ಸಂವಾದ, ಸನ್ಮಾನ ಸಮಾರಂಭ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಸಾಹಿತ್ಯಾಭಿಮಾನಿಗಳು ಆಗಮಿಸಿ, ಸಮ್ಮೇಳನ ಯಶಸ್ವಿಗೊಳಿಸಬೇಕೆಂದು ಸಮ್ಮೇಳನ ಸಮಿತಿ ಅಧ್ಯಕ್ಷ ಎಚ್. ಗಣೇಶ್ ಕಾಮತ್, ಕುಂದಾಪುರ ತಾಲೂಕು ಕಸಾಪ ಅಧ್ಯಕ್ಷ ಡಾ. ಉಮೇಶ್ ಪುತ್ರನ್ ವಿನಂತಿಸಿದ್ದಾರೆ.
ಸಮ್ಮೇಳನದ ವಿಶೇಷ :
ಖ್ಯಾತ ಕಾದಂಬರಿಗಾರರಾಗಿದ್ದು, ಕನ್ನಡ ಪಂಡಿತರಾಗಿ ಸರಸ್ವತಿ ವಿದ್ಯಾಲಯ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವಿಠಲ ಶೆಣೈ ಎಚ್. ಗಂಗೊಳ್ಳಿಯವರು ಕೋಟೇಶ್ವರದಲ್ಲಿ ನಡೆದ ಕುಂದಾಪುರ ತಾಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೌರವ ಪಡೆದಿದ್ದರು. ಗಂಗೊಳ್ಳಿಯಲ್ಲಿ ಸರಸ್ವತಿ ವಿದ್ಯಾಲಯದಲ್ಲಿ 18ನೇ ಸಮ್ಮೇಳನ ನಡೆಯುತ್ತಿರುವಾಗ, ವಿಠಲ ಶೆಣೈ ಸಭಾಂಗಣದಲ್ಲಿ ಫೆ.19 ರಂದು ಇದೇ ಪ್ರೌಢಶಾಲೆಯಲ್ಲಿ ಪ್ರಾಧ್ಯಾಪಕರಾಗಿದ್ದ ಕೋ. ಶಿವಾನಂದ ಕಾರಂತರು ಸಮ್ಮೇಳನಾಧ್ಯಕ್ಷರಾಗಿರುವುದು ವಿಶೇಷವಾಗಿದೆ.